ಫೋಟೋ- 13ಎಂವೈಎಸ್6
ಮೈಸೂರಿನ ಸಿ.ಎಫ್.ಟಿ.ಆರ್.ಐನಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆಯನ್ನುಟಿಐಇ ಮೈಸೂರು ಶಾಖೆ ಅಧ್ಯಕ್ಷ ಭಾಸ್ಕರ್ ಕಳಲೆ ಉದ್ಘಾಟಿಸಿದರು. ನಿರ್ದೇಶಕಿ ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್, ವಿಜ್ಞಾನಿ ಡಾ. ಅಶುತೋಷ್ ಎ. ಇನಾಂದಾರ್ ಇದ್ದರು.
----ಕನ್ನಡಪ್ರಭ ವಾರ್ತೆ ಮೈಸೂರುಆಹಾರ ತಯಾರಿಕಾ ಕ್ಷೇತ್ರದಲ್ಲಿ ಎಐ ಸೇರಿದಂತೆ ತಂತ್ರಜ್ಞಾನ ಬಳಕೆ ಹೆಚ್ಚಾಗಬೇಕು ಎಂದು ಟಿಐಇ ಮೈಸೂರು ಶಾಖೆ ಅಧ್ಯಕ್ಷ ಭಾಸ್ಕರ್ ಕಳಲೆ ತಿಳಿಸಿದರು.
ನಗರದ ಕೇಂದ್ರಿಯ ಆಹಾರ ತಂತ್ರಜ್ಞಾನ ಸಂಶೋಧನಾಲಯವು (ಸಿ.ಎಫ್.ಟಿ.ಆರ್.ಐ) ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಆಹಾರ ತಂತ್ರಜ್ಞಾನ ವಿಸ್ತಾರವಾಗಿ ಬೆಳೆದಿದೆ. ವರ್ತಮಾನದಲ್ಲಿ ಎಐ ಎಲ್ಲಾ ಕ್ಷೇತ್ರದಲ್ಲೂ ಬದಲಾವಣೆಗೆ ಕಾರಣವಾಗಿದೆ. ಎಐ ತಂತ್ರಜ್ಞಾನದಿಂದ ಆಹಾರ ಕೈಗಾರಿಕೆಗಳಲ್ಲಿ ಸುರಕ್ಷತೆ ಮತ್ತು ಕ್ಷಮತೆಗೆ ಆದ್ಯತೆ ನೀಡಬೇಕು ಎಂದರು.ಸಿ.ಎಫ್.ಟಿ.ಆರ್.ಐ ದತ್ತಾಂಶ ವಿಜ್ಞಾನಿಗಳ ನೆರವು ಪಡೆಯಬೇಕು. ಎಐ ಪ್ರಯೋಗಾಲಯವನ್ನೂ ಆರಂಭಿಸಬೇಕು. ಸುಸ್ಥಿರ ಆಹಾರ ಪ್ಯಾಕೇಜಿಂಗ್, ನ್ಯೂಟ್ರಿಜೆನೊಮಿಕ್ಸ್, ಪರ್ಯಾಯ ಕ್ರಮಗಳ ಬಗ್ಗೆ ಯೋಜಿಸಬೇಕಿದೆ. ಕೃಷಿ, ಎಐ ಹಾಗೂ ಆರೋಗ್ಯ ವಿಜ್ಞಾನ ಸಂಸ್ಥೆಗಳ ನೆರವನ್ನು ಪಡೆಯಬೇಕು. ಕೃಷಿಯಿಂದ ಜೈವಿಕ ಇಂಧನ ತಯಾರಿಸುವ ಬಗ್ಗೆಯೂ ಯೋಚಿಸಬೇಕಿದೆ ಎಂದು ಅವರು ಸಲಹೆ ನೀಡಿದರು.
ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯದ ನಂತರದ ಒಂದರೆಡು ದಶಕದಲ್ಲಿ ಆಹಾರ ಭದ್ರತೆ ಇರಲಿಲ್ಲ. ಈಗ ಆಹಾರದ ಕೊರತೆ ಇಲ್ಲ. ಎಲ್ಲರಿಗೂ ಪೌಷ್ಟಿಕ ಆಹಾರ ನೀಡಲು ಶ್ರಮಿಸಬೇಕಿದೆ. ಜಾಗತಿಕ ತಾಪಮಾನದ ಕಾಲದಲ್ಲಿ ಕೃಷಿಗೆ ಸುಧಾರಿತ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಕಡಿಮೆ ಶಕ್ತಿ, ಕೆಮಿಕಲ್, ಕಡಿಮೆ ನೀರು ಉಪಯೋಗಿಸಿ ಹೆಚ್ಚು ಇಳುವರಿ ದೊರೆಯುವ ಆಹಾರದ ಬೆಳೆಗಳನ್ನು ಬೆಳೆಯಲು ಸಂಶೋಧನೆ ನಡೆಯಬೇಕು ಎಂದು ಅವರು ಹೇಳಿದರು.ಭಾರತವನ್ನು ಸ್ಮಾರ್ಟ್ ಫುಡ್ ಸಿಸ್ಟಂ ಮುನ್ನಡೆಸಲಿದೆ. ಈಗ ಟೆಕ್ನಾಲಜಿ ಬಳಸಿಕೊಂಡು ರೆಸಿಪಿ ಕಂಡು ಹಿಡಿಯಲಾಗುತ್ತದೆ. ಮುಂದೆ ಖಾದ್ಯಗಳನ್ನು ತಯಾರಿಸುವಂತಾಗಬೇಕು. ಅಪೌಷ್ಟಿಕತೆ ತಡೆಗಟ್ಟಲು, ಆಹಾರ ವ್ಯರ್ಥವಾಗುವುದನ್ನು ತಪ್ಪಿಸಬೇಕು ಎಂದರು.
ತಂತ್ರಜ್ಞಾನದ ಅದ್ವಿತೀಯ ಬೆಳವಣಿಗೆಯನ್ನು ಭಾರತ- ಪಾಕಿಸ್ತಾನದ ಕದನದಲ್ಲಿ ಸೈನಿಕರು ನಡೆದುಕೊಂಡು ಹೋಗಿ ಯುದ್ಧ ಮಾಡಲಿಲ್ಲ. ಎಲ್ಲವನ್ನೂ ಮಿಷೆಲ್ ಗಳು ದಾಳಿ ಮಾಡಿದವು. ಈ ತಂತ್ರಜ್ಞಾನ ಇನ್ನೂ ಅಭಿವೃದ್ಧಿಪಡಿಸಬೇಕು ಎಂದು ಅವರು ತಿಳಿಸಿದರು.ಇದೇ ವೇಳೆ ಕೇರಳದ ವಯನಾಡಿನ ಮಿಲ್ಮಾ, ಕೇರಳದ ಕುಡುಂಬಾಶ್ರೀ ಸಂಸ್ಥೆ ಮತ್ತು ಬೆಂಗಳೂರಿನ ತತ್ವಶ್ರೀ ನ್ಯೂಟ್ರಿ ಫುಡ್ ಕಂಪನಿಗಳೊಂದಿಗೆ ಸಿ.ಎಫ್.ಟಿ.ಆರ್.ಐ ಒಪ್ಪಂದಕ್ಕೆ ಸಹಿ ಹಾಕಿತು.
ಸಿ.ಎಫ್.ಟಿ.ಆರ್.ಐ ನಿರ್ದೇಶಕಿ ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್, ವಿಜ್ಞಾನಿ ಡಾ. ಅಶುತೋಷ್ ಎ. ಇನಾಂದಾರ್ ಇದ್ದರು.