ಜಿಲ್ಲೆಗೆ ಫುಡ್ ಕ್ಲಸ್ಟರ್ ರೂಪ ಕೊಡಿ: ಜಯರಾಂ ರಾಯಪುರ

KannadaprabhaNewsNetwork |  
Published : Jun 14, 2026, 01:45 AM IST
ಜಿಲ್ಲೆಗೆ ಫುಡ್ ಕ್ಲಸ್ಟರ್ ರೂಪ ಕೊಡಿ: ಜಯರಾಂ ರಾಯಪುರ | Kannada Prabha

ಸಾರಾಂಶ

ಮಂಡ್ಯ ಜಿಲ್ಲೆಯಲ್ಲಿ ಸಕ್ಕರೆ, ಬೆಲ್ಲ, ತೆಂಗು, ಭತ್ತ, ಹಾಲು ಇವು ಆಹಾರಕ್ಕೆ ಮುಖ್ಯವಾಗಿ ಬೇಕಾಗುವ ಉತ್ಪನ್ನಗಳು. ಉತ್ಪಾದನೆಗೆ ಬೇಕಾದ ನೀರಿನ ವ್ಯವಸ್ಥೆಯೂ ಉತ್ತಮವಾಗಿದೆ. ಆದರೆ, ಬೆಳೆದಂತಹ ಕಚ್ಚಾ ಆಹಾರೋತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುತ್ತಿರುವುದರಿಂದ ರೈತರಿಗೆ ಉತ್ತಮ ಬೆಲೆ ಸಿಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಜಿಲ್ಲೆಯಲ್ಲಿ ಪ್ರಮುಖ ಆಹಾರೋತ್ಪನ್ನಗಳು ಉತ್ಪಾದನೆಯಾಗುತ್ತಿರುವುದರಿಂದ ಫುಡ್ ಕ್ಲಸ್ಟರ್ ಆಗಿ ಹೊರಹೊಮ್ಮುವ ಎಲ್ಲಾ ಸಾಧ್ಯತೆಗಳು ಇವೆ ಎಂದು ಫಸ್ಟ್ ಸರ್ಕಲ್ ಅಧ್ಯಕ್ಷ ಜಯರಾಂ ರಾಯಪುರ ಹೇಳಿದರು.

ನಗರದ ಜಿಪಂ ಕಾವೇರಿ ಸಭಾಂಗಣದಲ್ಲಿ ಫಸ್ಟ್ ಸರ್ಕಲ್ ಸಹಯೋಗದೊಂದಿಗೆ ಕೃಷಿ ಇಲಾಖೆ, ಬೆಲ್ಲದ ನಾಡು ರೈತ ಉತ್ಪಾದಕ ಕಂಪನಿಗಳ ಒಕ್ಕೂಟದಿಂದ ಮುನ್ನಡೆ ಮಂಡ್ಯ ವಿಷನ್-೨೦೩೫ ಕಾರ್ಯಕ್ರಮದಡಿ ಎರಡು ದಿನಗಳ ಕೃಷಿ ಉದ್ಯಮಶೀಲ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದರು.

ಜಿಲ್ಲೆಯಲ್ಲಿ ಸಕ್ಕರೆ, ಬೆಲ್ಲ, ತೆಂಗು, ಭತ್ತ, ಹಾಲು ಇವು ಆಹಾರಕ್ಕೆ ಮುಖ್ಯವಾಗಿ ಬೇಕಾಗುವ ಉತ್ಪನ್ನಗಳು. ಉತ್ಪಾದನೆಗೆ ಬೇಕಾದ ನೀರಿನ ವ್ಯವಸ್ಥೆಯೂ ಉತ್ತಮವಾಗಿದೆ. ಆದರೆ, ಬೆಳೆದಂತಹ ಕಚ್ಚಾ ಆಹಾರೋತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುತ್ತಿರುವುದರಿಂದ ರೈತರಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಈ ಆಹಾರ ಉತ್ಪನ್ನಗಳನ್ನು ಸಂಸ್ಕರಿಸಿ ಬ್ರ್ಯಾಂಡ್ ರೂಪ ಕೊಟ್ಟು ಮೌಲ್ಯವರ್ಧನೆ ಮಾಡದಿರುವುದೇ ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ನಿಖರವಾಗಿ ಹೇಳಿದರು.

ಮೂಲತಃ ಕೃಷಿ ಜಿಲ್ಲೆಯಾಗಿರುವ ಮಂಡ್ಯದಲ್ಲಿ ದೊಡ್ಡ ಕೈಗಾರಿಕೆಗಳ ಸ್ಥಾಪನೆ ಕಷ್ಟಸಾಧ್ಯವಾದ ವಿಷಯ. ಅದಕ್ಕಾಗಿ ೨.೫೦ ಎಕರೆ ಪ್ರದೇಶದಲ್ಲಿ ಸಣ್ಣ ಸಣ್ಣ ಫುಡ್ ಇಂಡಸ್ಟ್ರಿಗಳು ಸ್ಥಾಪನೆಯಾಗಬೇಕು. ಅದಕ್ಕೆ ಪೂರಕವಾಗಿ ಕೃಷಿ ಭೂಮಿಯನ್ನು ಪರಿವರ್ತನೆ ಮಾಡಿಕೊಡುವ ಕೆಲಸ ಸರ್ಕಾರದಿಂದ ಸುಗಮವಾಗಿ ಆಗಬೇಕು. ಸರ್ಕಾರ ಇದಕ್ಕೆ ಅವಕಾಶ ನೀಡಿದರೆ ಫುಡ್ ಕ್ಲಸ್ಟರ್‌ಗಳು ಸ್ಥಾಪನೆಗೊಂಡ ಪ್ರಗತಿಯ ಕಡೆ ಮುಖ ಮಾಡಲಿವೆ. ಮುಂದಿನ ೧೦ ವರ್ಷಗಳಲ್ಲಿ ಫುಡ್ ಕ್ಲಸ್ಟರ್ ಆಗುವಂತೆ ಅಧಿವೇಶನದಲ್ಲಿ ಚರ್ಚೆಗಳಾಗಬೇಕು. ವಿಷಯಗಳು ಚರ್ಚೆಗಷ್ಟೇ ಸೀಮಿತವಾಗದೆ ಅದನ್ನು ಕಾರ್ಯರೂಪಕ್ಕೆ ತರುವಂತಹ ಬದ್ಧತೆ ಎಲ್ಲರಲ್ಲಿರಬೇಕು ಎಂದರು.

ಕಬ್ಬು ಮತ್ತು ಭತ್ತ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಇದರ ಜೊತೆಗೆ ಔಷಧೀಯ ಸಸ್ಯಗಳೂ ಸೇರಿದಂತೆ ಹಲವಾರು ವಾಣಿಜ್ಯ ಬೆಳೆಗಳನ್ನು ಬೆಳೆಯುವುದಕ್ಕೆ ಸಾಧ್ಯವಿದೆ. ಆದರೆ, ಅವುಗಳಿಗೆ ಮಾರುಕಟ್ಟೆ ಎಲ್ಲಿದೆ ಎಂಬ ಪ್ರಶ್ನೆಯತರನ್ನು ಕಾಡುತ್ತಿದೆ. ಅದೇ ಕಾರಣಕ್ಕೆ ರೈತರು ಮತ್ತು ಉತ್ಪಾದಕರ ನಡುವೆ ಒಡಂಬಡಿಕೆ ಮೂಡುವಂತೆ ಮಾಡುವುದು. ಅನುಸಂಧಾನ ನಡೆಸುವ ಮೂಲಕ ರೈತರ ಬೆಳೆಗಳಿಗೆ ಮೌಲ್ಯವರ್ಧನೆ ಮಾಡುವಂತೆ ಮಾಡುವುದೇ ಕೃಷಿ ಅಧಿವೇಶನದ ಪ್ರಮುಖ ಉದ್ದೇಶವಾಗಿದೆ ಎಂದರು.

ಪಾರಂಪರಿಕವಾಗಿಯೂ ಮಂಡ್ಯ ಜಿಲ್ಲೆ ಸಮೃದ್ಧವಾಗಿದೆ. ಒಂದೊಂದು ತಾಲೂಕಿನಲ್ಲಿ ೧೦ರಿಂದ ೧೫ ಪಾರಂಪರಿಕ ತಾಣಗಳಿವೆ. ಅವುಗಳನ್ನು ಪ್ರವಾಸಿಗರನ್ನು ಸೆಳೆಯುವಂತೆ ಅಭಿವೃದ್ಧಿಪಡಿಸದಿರುವುದು ಅವು ಆಕರ್ಷಣೆ ಕಳೆದುಕೊಂಡಿವೆ. ಜಗತ್ತಿನ ೧೨೦ ದೇಶಗಳು ಪ್ರವಾಸೋದ್ಯಮದಿಂದಲೇ ಬೆಳವಣಿಗೆ ಕಾಣುತ್ತಿವೆ. ಹಾಗಾಗಿ ಪ್ರವಾಸಿ ತಾಣಗಳಿಗೆ ಹೊಸ ರೂಪ ನೀಡುವಂತೆ ತಿಳಿಸಿದರು.

ಮುನ್ನಡೆ ಮಂಡ್ಯ ವಿಷನ್-೨೦೩೫ ಡಾಕುಮೆಂಟ್‌ನ್ನು ರಾಜಕಾರಣಿಗಳು ಮತ್ತು ಅಧಿಕಾಧಿಗಳ ಮುಂದಿಟ್ಟು ಶೈಕ್ಷಣಿಕ, ಉದ್ಯೋಗ, ಸಾಂಸ್ಕೃತಿಕ, ಪಾರಂಪರಿಕ, ಆಹಾರಾಭಿವೃದ್ಧಿಗೆ ಇರುವ ಅವಕಾಶಗಳನ್ನು ತೆರೆದಿಟ್ಟು ಅವುಗಳನ್ನು ಕಾರ್ಯಗತಗೊಳಿಸುವುದಕ್ಕೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ನಾಗಮಂಗಲ ತಾಲೂಕಿನ ನಾಗತೀಹಳ್ಳಿ ರೈತ ಉತ್ಪಾದಕ ಕಂಪನಿ ತೆಂಗಿನ ಮೊಗ್ಗುಗಳಿಂದ ಮಾಡಿದ ಕಲ್ಪರಸ ಎಂಬ ಪಾನೀಯವನ್ನು ಗಣ್ಯರು ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಶಾಸಕ ಪಿ.ರವಿಕುಮಾರ್, ಫಸ್ಟ್ ಸರ್ಕಲ್ ಅಧ್ಯಕ್ಷ ಡಾ.ಡಿ.ಮುನಿರಾಜು, ಖ್ಯಾತ ಉದ್ಯಮಿಗಳಾದ ಜಯರಾಮ್ ಜಿ.ಕಿಮ್ಮನೆ, ಸಿ.ಎಂ.ಆರ್.ಶ್ರೀನಾಥ್, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಫಸ್ಟ್ ಸರ್ಕಲ್ ಜಿಲ್ಲಾಧ್ಯಕ್ಷ ಡಾ.ಬಿ.ಶಿವಲಿಂಗಯ್ಯ, ಪ್ರೊ.ಬಿ.ಜಯಪ್ರಕಾಶಗೌಡ, ಕೃಷಿ ಇಲಾಖೆ ಜಂಟಿ ನಿರ್ದೇಶಕ ವ.ಎಸ್.ಅಶೋಕ್, ಯೋಗೇಶ್ ದೇಸಿರಿ, ಡಾ.ಶಿವಕುಮಾರ್, ಕಾರಸವಾಡಿ ಮಹದೇವು, ತಗ್ಗಹಳ್ಳಿ ವೆಂಕಟೇಶ್, ನಾಗರೇವಕ್ಕ, ಪುಟ್ಟರಾಜು ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತಪಟ್ಟಿ ಪರಿಷ್ಕರಣೆಗೆ ಸಹಕರಿಸಿ: ಡಾ.ಸಿದ್ದರಾಮಯ್ಯ
ಕ್ಷೇತ್ರದ ಅಭಿವೃದ್ಧಿಯೇ ನನ್ನ ಉದ್ದೇಶ ಎಂದ ಶಾಸಕ ಸಿಮೆಂಟ್ ಮಂಜು