ಮಳಲೂರು ಏತ ನೀರಾವರಿ ಯೋಜನೆ: ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿ ಸೂಚನೆ

KannadaprabhaNewsNetwork |  
Published : Sep 30, 2026, 01:15 AM IST
 | Kannada Prabha

ಸಾರಾಂಶ

ಚಿಕ್ಕಮಗಳೂರುಮಳಲೂರು ಏತ ನೀರಾವರಿ ಅನುಷ್ಠಾನ ಮತ್ತು ಅರಸನ ನಾಲೆ ಪುನಶ್ಚೇತನ ಯೋಜನೆಗಳ ಕಾಮಗಾರಿಗಳಿಗೆ ಉಂಟಾಗಿರುವ ತಾಂತ್ರಿಕ ಅಡಚಣೆ ಪರಿಶೀಲಿಸಿ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಸೂಚಿಸಿದರು.

ರೈತ ಮುಖಂಡರೊಂದಿಗೆ ನಡೆದ ಸಭೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮಳಲೂರು ಏತ ನೀರಾವರಿ ಅನುಷ್ಠಾನ ಮತ್ತು ಅರಸನ ನಾಲೆ ಪುನಶ್ಚೇತನ ಯೋಜನೆಗಳ ಕಾಮಗಾರಿಗಳಿಗೆ ಉಂಟಾಗಿರುವ ತಾಂತ್ರಿಕ ಅಡಚಣೆ ಪರಿಶೀಲಿಸಿ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಮಳಲೂರು ಏತ ನೀರಾವರಿ ಅನುಷ್ಠಾನ ಹಾಗೂ ಅರಸನ ನಾಲೆ ಪುನಶ್ಚೇತನದ ಕುರಿತು ರೈತ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು. ಪ್ರಸ್ತುತ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕುಂಠಿತವಾಗಿದ್ದು, ರೈತರು ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಸಮಸ್ಯೆ ಎದುರಿಸುತ್ತಿದ್ದಾರೆ. ಮಳಲೂರು ಏತ ನೀರಾವರಿ ಯೋಜನೆ ಮಳಲೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರ ಕನಸಿನ ಯೋಜನೆ. ಈ ಯೋಜನೆಯಲ್ಲಿ ಆಗಿರುವ ಸಮಸ್ಯೆಗಳ ಕುರಿತು ಪರಿಶೀಲಿಸಿ ಅನುಷ್ಠಾನಕ್ಕೆ ಸೂಕ್ತ ಕ್ರಮ ವಹಿಸಬೇಕು ಎಂದ ಅವರು, ಅರಸನ ನಾಲೆಯಲ್ಲಿ ಉಂಟಾಗಿರುವ ವೈಜ್ಞಾನಿಕ ಹಾಗೂ ತಾಂತ್ರಿಕ ದೋಷಗಳ ಕುರಿತು ಸ್ವತಃ ನೀರಾವರಿ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಪುನಶ್ಚೇತನಕ್ಕೆ ಅಗತ್ಯ ಕ್ರಮ ವಹಿಸುವಂತೆ ತಿಳಿಸಿದರು.

ರೈತ ಸಂಘದ ಪದಾಧಿಕಾರಿಗಳು ಮಾತನಾಡಿ ಸುಮಾರು ೨೫ ವರ್ಷಗಳ ಹಿಂದೆ ಮಳಲೂರು ಏತ ನೀರಾವರಿ ಯೋಜನೆಗೆ ಅನುಮೋದನೆ ದೊರೆತಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಭರವಸೆಯಿಂದ ಯೋಜನೆಗೆ ರೈತರು ತಮ್ಮ ಭೂಮಿಯನ್ನು ಸ್ವಯಂಪ್ರೇರಿತವಾಗಿ ಬಿಟ್ಟುಕೊಟ್ಟಿದ್ದಾರೆ. ಆದರೆ ಇಷ್ಟು ವರ್ಷಗಳಾದರೂ ಕೆರೆಗಳಿಗೆ ನೀರು ತುಂಬಿ ಸುವ ಕಾರ್ಯ ಸಫಲವಾಗಿಲ್ಲ. ಇದರ ಪರಿಣಾಮ ಮಳಲೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಅನುಭವಿಸುತ್ತಿದ್ದಾರೆ ಎಂದರು.

ಮೊದಲ ಹಂತದ ಬಹುತೇಕ ಕಾಮಗಾರಿ ಪೂರ್ಣಗೊಂಡರೂ ನೀರು ಹರಿಯುತ್ತಿಲ್ಲ. ಬಿರಂಜಿ ಹೊಳೆಯಲ್ಲಿ ನೀರು ಹರಿವ ಸ್ಥಳದಲ್ಲಿ ಯೋಜನೆ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಯೋಜನೆಗೆ ಭೂಸ್ವಾಧೀನಪಡಿಸಿಕೊಂಡು ಪರಿಹಾರ ಪಾವತಿಸಿರುವ ಕೆಲವು ರೈತರ ಜಮೀನುಗಳು ಯೋಜನೆಗೆ ಅವಶ್ಯವಿಲ್ಲದೆ ತಪ್ಪಾದ ಸರ್ವೇ ಕಾರ್ಯದಿಂದ ಭೂಸ್ವಾಧೀನ ಗೊಂಡಿದ್ದು, ಈ ಜಮೀನುಗಳನ್ನು ಭೂಸ್ವಾಧೀನದಿಂದ ಕೈಬಿಡಬೇಕು. ತಪ್ಪಾದ ಸರ್ವೇ ಕಾರ್ಯದಿಂದ ಭೂಸ್ವಾಧೀನ ಮಾಡಿರುವುದೇ ಒಂದು ಕಡೆ, ಪೈಪ್‌ಲೈನ್ ಕಾಮಗಾರಿ ಮಾಡಿರುವುದೇ ಒಂದು ಕಡೆಯಾಗಿದೆ. ಈ ಕುರಿತು ಉಂಟಾಗಿರುವ ತಾಂತ್ರಿಕ ದೋಷಗಳನ್ನು ಕೂಡಲೇ ಸರಿಪಡಿಸಬೇಕು ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಭನ್ವರ್‌ ಸಿಂಗ್ ಮೀನಾ, ಅರಸನ ನಾಲೆ ಪುನಶ್ಚೇತನ ಕಾಮಗಾರಿಗೆ ಸಂಬಂಧಿ ಸಿದಂತೆ ಇಲಾಖೆ ಅಧಿಕಾರಿಗಳು ಯೋಜನೆ ಸ್ಥಿತಿಗತಿಗಳ ಬಗ್ಗೆ ತಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದು ಕಾಮಗಾರಿ ಪುನಶ್ಚೇತನಕ್ಕೆ ಕೂಡಲೇ ಅಗತ್ಯ ಕ್ರಮ ವಹಿಸಬೇಕು ಎಂದರು.

ಕಾಮಗಾರಿ ಸಂಬಂಧ ಕೈಗೊಳ್ಳುವ ಸರ್ವೇ ಕಾರ್ಯಗಳಿಗೆ ರೈತ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಿ ಯಾವುದೇ ಸಮಸ್ಯೆ ಉಂಟಾಗದಂತೆ ಯೋಜನೆ ಕಾಮಗಾರಿಯನ್ನು ವ್ಯವಸ್ಥಿತವಾಗಿ ನಿರ್ವಹಿಸುವಂತೆ ಸೂಚಿಸಿದರು.

ಸಭೆಯಲ್ಲಿ ಗೊರೂರು ಕೆ.ಎನ್.ಎಲ್.ಎಲ್.ಅಧೀಕ್ಷಕ ಅಭಿಯಂತರ ಪ್ರಶಾಂತ್, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ದೊಡ್ಡಯ್ಯ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ದಕ್ಷಿಣಾಮೂರ್ತಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಕುಶಲ ಕಲೆಗಳಿವೆ ತನ್ನದೇ ವೈಶಿಷ್ಟ್ಯತೆ: ಕಿರಣ
ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಸ್ವಪಕ್ಷದವರ ಆಕ್ರೋಶ