ಹೊಲಗಳಿಗೆ ನುಗ್ಗಿದ ಮಲಪ್ರಭಾ ನದಿ ನೀರು

KannadaprabhaNewsNetwork |  
Published : Aug 05, 2024, 12:36 AM IST
ಹೊಳೆಆಲೂರಿಗೆ ಕುಡಿಯುವ ನೀರು ಪೂರೈಕೆ ಮಾಡುವ ಜಾಕ್ ವೆಲ್ ಸುತ್ತ ನೀರು ನಿಂತಿರುವುದು. | Kannada Prabha

ಸಾರಾಂಶ

ಮೆಣಸಗಿ, ಗುಳಗಂದಿ, ಹೊಳೆಮಣ್ಣೂರ, ಗಾಡಗೋಳಿ, ಕುರವಿನಕೊಪ್ಪ, ಅಮರಗೋಳ, ಹೊಳೆಹಡಗಲಿ, ಬಸರಕೋಡ, ಬಿ.ಎಸ್. ಬೇಲೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜಮೀನುಗಳು ಜಲಾವೃತ

ಸಂಜೀವಕುಮಾರ ಹಿರೇಮಠ ಹೊಳೆಆಲೂರ

ಬೆಳಗಾವಿ ತಾಲೂಕಿನ ಖಾನಾಪುರದ ಕಣಕುಂಬಿ ಭಾಗದಲ್ಲಿ ಸತತ ಮಳೆಯ ಹಿನ್ನೆಲೆ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ಭಾರಿ ನೀರು ಹರಿಸುತ್ತಿದ್ದು, ಹೊಳೆಆಲೂರ ಹೋಬಳಿಯ 11 ಗ್ರಾಮಗಳು ಪ್ರವಾಹದ ಭೀತಿ ಎದುರಿಸುತ್ತಿವೆ.

ಈಗಾಗಲೇ ಗ್ರಾಮದ ಜಮೀನುಗಳಿಗೆ ನೀರು ನುಗ್ಗಿದ್ದು, ಬೆಳೆಗಳು ಪ್ರವಾಹದ ಪಾಲಾಗುವ ಹಂತಕ್ಕೆ ತಲುಪಿವೆ. ನಾಲ್ಕೈದು ದಿನಗಳ ಹಿಂದೆ ಸತತವಾಗಿ ಮಳೆ ಸುರಿದು ವ್ಯಾಪಕ ಹಾನಿಯಾಗಿ ಅಲ್ಪಸ್ವಲ್ಪ ಬೆಳೆ ಕಾಯುತ್ತಾ ಕುಳಿತ ಹೊಳೆಆಲೂರ ಹೋಬಳಿ, ಮೆಣಸಗಿ, ಗುಳಗಂದಿ, ಹೊಳೆಮಣ್ಣೂರ, ಗಾಡಗೋಳಿ, ಕುರವಿನಕೊಪ್ಪ, ಅಮರಗೋಳ, ಹೊಳೆಹಡಗಲಿ, ಬಸರಕೋಡ, ಬಿ.ಎಸ್. ಬೇಲೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜಮೀನುಗಳು ಜಲಾವೃತವಾಗಿವೆ.

ಈ ಮೊದಲು 5 ಸಾವಿರ ಕ್ಯುಸೆಕ್‌ ನೀರು ಹರಿ ಬಿಟ್ಟು, ಮಳೆಯ ಪ್ರಮಾಣ ಏರಿಕೆ ಆಗುತ್ತಿದ್ದಂತೆ ಕ್ರಮೇಣ 17 ಸಾವಿರ, ಮತ್ತೆ 10 ಸಾವಿರ ಕ್ಯುಸೆಕ್‌ ನೀರನ್ನು ಹರಿಬಿಡಲಾಗಿದೆ. ಇದರಿಂದ ಮೆಣಸಗಿ ಗ್ರಾಮದ ಮುದಿಯಪ್ಪಜ್ಜ ದೇವಸ್ಥಾನ ಹತ್ತಿರ ನದಿ ನೀರು ನಿಂತಿದೆ. ಗ್ರಾಮದ ಜಮೀನಿನಲ್ಲಿರುವ ರೈತರ ಶೆಡ್ ಮುಳುಗಿವೆ. ಈಗಾಗಲೇ ಕುರವಿನಕೂಪ್ಪ ಗ್ರಾಮಕ್ಕೆ ನೀರು ಸುತ್ತುವರಿದಿದ್ದು, ಗ್ರಾಮಸ್ಥರು ನವಗ್ರಾಮಕ್ಕೆ ಸ್ಥಳಾಂತರಗೊಂಡಿದ್ದಾರೆ.

ಈ ಹಿಂದೆ ಮುಳುಗಡೆ ಅನುಭವಿಸಿದ ಗ್ರಾಮಸ್ಥರು ಆತಂಕದಲ್ಲಿ ಇದ್ದು, ಬೆಣ್ಣೆಹಳ್ಳಕ್ಕೆ ನೀರು ಬರುವ ಪ್ರದೇಶದಲ್ಲಿ ಮಳೆ ಕಡಿಮೆ ಇರುವುದರಿಂದ ಸ್ವಲ್ಪಮಟ್ಟಿಗೆ ಸಮಾಧಾನ ತಂದಿದೆ. ಇಲ್ಲವಾದರೆ ಬೆಣ್ಣೆಹಳ್ಳದ ರಭಸಕ್ಕೆ ಮಲಪ್ರಭಾ ನದಿಯ ನೀರಿನ ಮಟ್ಟ ಏರಿಕೆಯಾಗಿ ರೋಣ ತಾಲೂಕಿನ ಸುಮಾರು 16 ಹಳ್ಳಿಗಳಿಗೆ ಸಮಸ್ಯೆ ಎದುರಾಗುತ್ತಿತ್ತು. ಬೆಣ್ಣೆ ಹಳ್ಳದ ಒತ್ತಡ ಇಲ್ಲದಿದ್ದರೂ ಹೋಬಳಿಯ ಗ್ರಾಮಗಳ ರೈತರ ಜಮೀನುಗಳಿಗೆ ನೀರು ಆವರಿಸಿದ್ದು, ನದಿ ತೀರಿದ ದಡದಲ್ಲಿರುವ ಜನರ ಆತಂಕ ಹೆಚ್ಚಿಸಿದೆ.

5 ಸಾವಿರ, 17 ಸಾವಿರ, 10 ಸಾವಿರ ಕ್ಯುಸೆಕ್‌ ಡ್ಯಾಂ ನೀರು ನೀರು ಬಿಟ್ಟಿದ್ದರಿಂದ ನದಿ ನೀರು ಹೆಚ್ಚಾಗಿದ್ದು, ಜಮೀನುಗಳಿಗೆ ನೀರು ನುಗ್ಗಿದೆ. ಗ್ರಾಪಂ ಸಿಬ್ಬಂದಿ ಹಾಗೂ ಗ್ರಾಮಸ್ಥರು, ಹಿರಿಯ ಅಧಿಕಾರಿಗಳ ಸಂಪರ್ಕದಲ್ಲಿ ಇದ್ದೇವೆ. ಕ್ಷಣಕ್ಷಣದ ಮಾಹಿತಿ ಒದಗಿಸಲಾಗುತ್ತಿದೆ ಎಂದು ಮೆಣಸಗಿ ಪಿಡಿಒ ಮೈಲಾರಪ್ಪ ಜಂಗಣ್ಣವರ ತಿಳಿಸಿದ್ದಾರೆ.

ಸುತ್ತಮುತ್ತಲಿನ ಜಮೀನುಗಳಲ್ಲಿ ನದಿ ನೀರು ಆವರಿಸಿಕೊಂಡಿದೆ. ಗ್ರಾಮದ ಸಮೀಪ ಇರುವ ಮುದಿಯಪ್ಪಜ್ಜ ದೇವಸ್ಥಾನ ಹತ್ತಿರದ ವರೆಗೆ ನೀರು ಬಂದಿದೆ. ಜಮೀನಿನಲ್ಲಿರುವ ರೈತರ ಶೆಡ್ ಜಲಾವೃತಗೊಂಡಿವೆ ಎಂದು ಗ್ರಾಪಂ ಮಾಜಿ ಸದಸ್ಯ ಕೇದಾರಗೌಡ ಮಣ್ಣೂರ ಹೇಳಿದ್ದಾರೆ.

PREV

Recommended Stories

ಊರ ಹಬ್ಬ ಮಾದರಿಯಲ್ಲಿ ಬಪ್ಪನಾಡು ಗಣೇಶೋತ್ಸವ ಸುವರ್ಣ ಸಂಭ್ರಮ: ಸುನಿಲ್ ಆಳ್ವ
ಉಡುಪಿ ನಗರ ಬಿಜೆಪಿಯಿಂದ ‘ಕಮಲ ಕಲರವ - ಕೆಸರ್ಡ್ ಒಂಜಿ ದಿನ’ ಕ್ರೀಡಾಕೂಟ