ಸಿ.ಸಿದ್ದರಾಜು, ಮಾದಹಳ್ಳಿ
ತಾಲೂಕಿನ ಜನರಲ್ಲಿ ಚಿರತೆಗಳ ದಾಳಿಯು ತೀವ್ರ ಭೀತಿ ಮತ್ತು ಆತಂಕವನ್ನು ಸೃಷ್ಟಿಸಿವೆ. ರೈತರು ಸಾಕುಪ್ರಾಣಿಗಳನ್ನು ರಕ್ಷಿಸುವ ಜೊತೆಗೆ ತಮ್ಮ ಪ್ರಾಣವನ್ನು ಕಾಪಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮೊದ ಮೊದಲು ಬರೀ ಕಾಡಂಚಿನ ಗ್ರಾಮಗಳಿದ್ದ ಚಿರತೆಗಳ ಆತಂಕ ಇದೀಗ ಎಲ್ಲೆಡೆ ಕಾಡತೊಡಗಿದೆ.
ಕಳೆದ ನಾಲ್ಕೈದು ವರ್ಷಗಳಿಂದ ತಾಲೂಕಿನ ಕುಂದೂರು, ದಡಮಳ್ಳಿ, ಅಂತರವಳ್ಳಿ, ಗಾಣಾಳು, ಬಸವನಬೆಟ್ಟ, ಧನಗೂರು, ಬಾಳೆಹೊನ್ನಿಗ, ಜವನಗಹಳ್ಳಿ ಗುಡ್ಡ, ಸೊಪ್ಪಿನ ಗುಡ್ಡ, ನೆಟ್ಕಲ್, ಶಿಂಷಾ ಅರಣ್ಯ ಪ್ರದೇಶಗಳಲ್ಲಿ ಚಿರತೆಗಳ ಸಂತತಿ ಹೆಚ್ಚಿದ್ದವು, ರೈತರ ನೂರಾರು ಕುರಿ, ಮೇಕೆ, ಎಮ್ಮೆ, ಹಸು-ಕರುಗಳನ್ನು ತಿಂದು ಹಾಕಿವೆ. ನಾಲ್ಕೈದು ಮಂದಿ ರೈತರನ್ನು ಸಹ ಗಾಯಗೊಳಿಸಿವೆ. ಇದೀಗ ಚಿರತೆಗಳ ಹಾವಳಿ ಪಟ್ಟಣಕ್ಕೂ ಆವರಿಸಿದ್ದು, ಜನರಲ್ಲಿ ಸಾಕಷ್ಟು ಆತಂಕ ಸೃಷ್ಟಿಸಿದೆ.ವನ್ಯ ಜೀವಿಗಳು ಹಳ್ಳಿಗಳಿಗೆ ಆಹಾರ ಅರಸಿ ಬಂದು ಜನ-ಜಾನುವಾರುಗಳ ಮೇಲೆ ದಾಳಿ ನಡೆಸುವುದರೊಂದಿಗೆ ಭಯದ ವಾತಾವರಣ ಸೃಷ್ಟಿಸುತ್ತಿವೆ. ಇತ್ತೀಚಿಗೆ ತಾಲೂಕಿನಾದ್ಯಂತ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಕಳೆದೊಂದು ತಿಂಗಳಿಂದ ತಾಲೂಕಿನ ತಳಗವಾದಿ, ಮಾದಹಳ್ಳಿ, ಕೊರೇಗಾಲ, ಕಾಳಕೆಂಪನದೊಡ್ಡಿ, ತಮ್ಮನಹಳ್ಳಿ, ಗಾಜನೂರು, ಚೊಟ್ಟನಹಳ್ಳಿ, ಚಂದಹಳ್ಳಿ, ಪಂಡಿತಹಳ್ಳಿ, ಕಲ್ಕುಣಿ, ಹಂಗ್ರಾಪುರ ಗ್ರಾಮಗಳಲ್ಲಿ ಹಲವಾರು ಸಾಕು ಪ್ರಾಣಿಗಳನ್ನು ಬಲಿ ಪಡೆದಿವೆ. ಚಿರತೆಗಳ ದಾಳಿಗೆ ಹೆದರಿ ಹಲವೆಡೆ ಜನರು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ.
ಕಳೆದ ಮೂರು ವರ್ಷಗಳಿಂದ ತಾಲೂಕಿನ ಉತ್ತೂರು, ದಾಸನದೊಡ್ಡಿ, ವಡ್ಡರಕಾಲೋನಿ ಗ್ರಾಮಗಳಲ್ಲಿ ಮೂರು ವ್ಯಕ್ತಿಗಳ ಮೇಲೆ ಚಿರತೆ ಗಾಯಗೊಳಿಸಿದರೆ, ಕಿರಂಗಸೂರಿನಲ್ಲಿ ಕಾಡುಹಂದಿ ದಾಳಿಯಿಂದ ಇಬ್ಬರು ಗಾಯಗೊಂಡಿದ್ದಾರೆ. ಜನರು ಜಮೀನುಗಳಿಗೆ ತೆರಳಲು ಜೀವ ಭಯ ಎದುರಿಸುವಂತಾಗಿದೆ. ಮೂರು ವರ್ಷಗಳಿಂದ ಐದು ಚಿರತೆಗಳು ಬೋನಿಗೆ ಬಿದ್ದಿವೆ. ಕಳೆದ ಮೂರು ವರ್ಷಗಳಲ್ಲಿ ಚಿರತೆಗಳ ಹಾವಳಿ ತಪ್ಪಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದ್ದು, ಗ್ರಾಮೀಣ ಪ್ರದೇಶದ ಜನತೆ ಧೈರ್ಯವಾಗಿ ತಮ್ಮ ಜಮೀನುಗಳಿಗೆ ಹೋಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಚಿರತೆಗಳ ಕಾಟದಿಂದ ರೈತರ ಬದುಕು ಶೋಚನೀಯವಾಗಿದೆ.
ತಾಲ್ಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಿರುವ ಹಂಗ್ರಾಪುರ, ಬೆನಮನಹಳ್ಳಿ, ಮೇಗಳಾಪುರ, ಕಗ್ಗಳ, ಕಿರಂಗಸೂರು ಹಾಗೂ ಮಾದಹಳ್ಳಿ ಗ್ರಾಮಗಳ ಬಳಿ ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನಿನ ವ್ಯವಸ್ಥೆ ಮಾಡಿದೆ. 2024-25ರಲ್ಲಿ 68 ಸಾಕು ಪ್ರಾಣಿ ಬಲಿ ಪ್ರಕರಣಗಳಲ್ಲಿ 6 ಲಕ್ಷ ರೂ. ಹಾಗೂ 2025-26ರಲ್ಲಿ 55 ಪ್ರಕರಣಲ್ಲಿ 28ಕ್ಕೆ 1.80 ಲಕ್ಷ ರು.ಪರಿಹಾರವನ್ನು ಅರಣ್ಯ ಇಲಾಖೆ ನೀಡಿದೆ.ಚಿರತೆ ಕಾಣಿಸಿಕೊಂಡಿರುವ ಆರು ಪ್ರದೇಶಗಳಲ್ಲಿ ಬೋನಿನ ವ್ಯವಸ್ಥೆ ಮಾಡಲಾಗಿದೆ. ಮತ್ತಷ್ಟು ಬೋನಿಗಾಗಿ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಕ್ರಮ ವಹಿಸಲಾಗುವುದು.