ಮಂಗಳೂರು : ಕೇರಳದಲ್ಲಿ 10ನೇ ತರಗತಿ ವರೆಗೆ ಮಲಯಾಳಂ ಭಾಷೆ ಕಲಿಕೆ ಕಡ್ಡಾಯ ಮಸೂದೆಗೆ ಮತ್ತೆ ಅಲ್ಲಿನ ವಿಧಾನಸಭೆ ಅನುಮೋದನೆ ನೀಡಿದೆ. ಇದರಿಂದಾಗಿ ಕನ್ನಡ ಭಾಷೆ ಕಲಿಯುವ ಗಡಿನಾಡು ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳು ಅವಕಾಶ ವಂಚಿತಗೊಳ್ಳುವ ಭೀತಿಯಲ್ಲಿದ್ದಾರೆ.
ಈ ವಿಧೇಯಕದಲ್ಲಿ ಕನ್ನಡಿಗರೇ ಅತ್ಯಧಿಕ ಸಂಖ್ಯೆಯಲ್ಲಿ ಇರುವ ಗಡಿ ಪ್ರದೇಶ ಕಾಸರಗೋಡನ್ನು ಹೊರತುಪಡಿಸಲಾಗಿದೆ ಎಂಬ ಉಲ್ಲೇಖ ಇಲ್ಲ. ಆದ್ದರಿಂದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 10ನೇ ತರಗತಿ ವರೆಗೆ ಕಲಿಯುವ ಗಡಿನಾಡ ವಿದ್ಯಾರ್ಥಿಗಳು ಮಲಯಾಳಂ ಭಾಷೆಯನ್ನು ಇನ್ನು ಮುಂದೆ ಕಡ್ಡಾಯವಾಗಿ ಅಭ್ಯಾಸ ಮಾಡಬೇಕಾಗಿದೆ. ಕನ್ನಡ ಸೇರಿದಂತೆ ಇತರೆ ಭಾಷೆಗಳು ಐಚ್ಛಿಕ ಕಲಿಕಾ ಭಾಷೆಗಳ ಸಾಲಿಗೆ ಸೇರಿದಂತಾಗಿದೆ. ಆದರೆ ಇತರ ರಾಜ್ಯಗಳಲ್ಲಿ ಕನ್ನಡ ಕಲಿತು 9 ಅಥವಾ 10ನೇ ತರಗತಿಗೆ ಕೇರಳದ ಶಾಲೆಗಳಿಗೆ ಸೇರುವ ವಿದ್ಯಾರ್ಥಿಗಳಿಗೆ ಪ್ರಸ್ತಾವಿತ ವಿಧೇಯಕದಿಂದ ವಿನಾಯ್ತಿ ನೀಡಲಾಗಿದೆ. ಅಂತಹ ವಿದ್ಯಾರ್ಥಿಗಳು ಅಪೇಕ್ಷೆ ಪಟ್ಟರೆ ಮಲಯಾಳಂ ಭಾಷೆ ಕಲಿಯಬಹುದು. ಮಲಯಾಳಂ ಭಾಷೆಗೆ ಪ್ರತ್ಯೇಕ ಇಲಾಖೆ, ಸಚಿವರು ಮತ್ತು ನಿರ್ದೇಶನಾಲಯ ಆರಂಭಿಸುವ ವಿಚಾರ ವಿಧೇಯಕದಲ್ಲಿದೆ.
ಶಿಕ್ಷಣದಲ್ಲಿ ಮಲಯಾಳಂ ಕಲಿಕೆಯನ್ನು ಕಡ್ಡಾಯಗೊಳಿಸುವ ಮಸೂದೆಗೆ ಕೇರಳ ವಿಧಾನಸಭೆ 2015ರಲ್ಲೇ ಅನುಮೋದನೆ ನೀಡಿತ್ತು. ಆದರೆ ರಾಷ್ಟ್ರಪತಿಗಳು ಅಂಗೀಕರಿಸಿರಲಿಲ್ಲ. ತಿರುವನಂತಪುರದ ಸೆಕ್ರೆಟರಿಯೇಟ್‌ನ ಆಡಳಿತ ಸುಧಾರಣೆ ಇಲಾಖೆಯ ಹೆಸರನ್ನು ಇನ್ನು ಮುಂದೆ ಮಲಯಾಳಂ ಅಭಿವೃದ್ಧಿ ಇಲಾಖೆ ಎಂದು ಬದಲಾವಣೆಯಾಗಲಿದೆ. ಹೈಕೋರ್ಟ್‌ನ ಅನುಮತಿ ಪಡೆದು ಜಿಲ್ಲಾ ನ್ಯಾಯಾಲಯದಿಂದ ಕೆಳ ನ್ಯಾಯಾಲಯ ವರೆಗೆ ಎಲ್ಲ ತೀರ್ಪು, ವ್ಯವಹಾರಗಳನ್ನು ಮಲಯಾಳಂ ಭಾಷೆಯಲ್ಲಿ ನಡೆಸುವುದು, ರಾಜ್ಯ ಸರ್ಕಾರದ ಆದೇಶ, ಅಧಿಸೂಚನೆ, ನಿಬಂಧನೆ, ಮಸೂದೆ, ಕಾನೂನು, ಆದೇಶ ಪ್ರಕಟಣೆ ಎಲ್ಲವನ್ನೂ ಮಲಯಾಳಂನಲ್ಲಿ ಹೊರಡಿಸಲು ತೀರ್ಮಾನಿಸಲಾಗಿದೆ.
ಕನ್ನಡಿಗರ ಹಿತ ಕಾಪಾಡಲು
ಶಾಸಕ ಅಶ್ರಫ್ ಪ್ರಸ್ತಾಪ!
ಭಾಷಾ ಅಲ್ಪಸಂಖ್ಯಾತರು ಇರುವ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕನ್ನಡಿಗರ ಹಿತ ಕಾಪಾಡುವಂತೆ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮಸೂದೆ ಮಂಡನೆ ವೇಳೆ ಶಾಸಕ ಅಶ್ರಫ್, ಭಾಷಾ ಅಲ್ಪಸಂಖ್ಯಾತರಿಗೆ ಇರುವ ಸವಲತ್ತು, ಸೌಲಭ್ಯವನ್ನು ಸರ್ಕಾರ ಕಿತ್ತುಕೊಳ್ಳಬಾರದು. ಇದರಿಂದಾಗಿ ಗಡಿನಾಡ ಕನ್ನಡಿಗರಿಗೆ ತೊಂದರೆಯಾಗುತ್ತದೆ. ಶೈಕ್ಷಣಿಕವಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೂ ಅಡ್ಡಿಯಾಗುತ್ತದೆ. ಹಾಗಾಗಿ ಮಸೂದೆಯನ್ನು ಮಲಯಾಳಂ ಕಲಿಕೆ ಕಡ್ಡಾಯ ವೇಳೆ ಕನ್ನಡ ಸೇರಿದಂತೆ ಬ್ಯಾರಿ, ಮರಾಠಿ ಭಾಷೆಗಳ ಕಲಿಕೆಗೆ ಅಡ್ಡಿಯಾಗಬಾರದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಆಗ್ರಹಿಸಿದ್ದಾರೆ.
ಶಬರಿಮಲೆಯಲ್ಲಿ ಚಿನ್ನ ಕಳವು ಪ್ರಕರಣ ಮುನ್ನಲೆಗೆ ಬಂದು ಆಡಳಿತ ಹಾಗೂ ವಿಪಕ್ಷಗಳ ನಡುವೆ ಗದ್ದಲ ಉಂಟಾಗಿತ್ತು. ಇಡೀ ಅಧಿವೇಶವನ್ನು ಪ್ರತಿಪಕ್ಷ ಕಾಂಗ್ರೆಸ್ ಬಹಿಷ್ಕರಿಸಿದ್ದು, ಹಾಗಾಗಿ ಈ ವಾರ ಅಧಿವೇಶನದಲ್ಲಿ ಈ ಮಸೂದೆ ಕುರಿತು ಚರ್ಚೆ ಸಾಧ್ಯವಾಗಿಲ್ಲ. ಶಾಸಕ ಅಶ್ರಫ್ ಅವರ ಮಕ್ಕಳು ಕೂಡ ಕನ್ನಡ ಮಾಧ್ಯಮ ಶಾಲೆಯಲ್ಲೇ ಕಲಿಯುತ್ತಿರುವುದು ಗಮನಾರ್ಹ.
ಅಸೆಂಬ್ಲಿಯಲ್ಲಿ ಈ ಮಸೂದೆ ಮಂಡಿಸಿದರೂ ಪೂರ್ತಿ ಚರ್ಚೆ ನಡೆಸಲು ಸಾಧ್ಯವಾಗಿಲ್ಲ. ಹಾಗಾಗಿ ಇದರ ಬಗ್ಗೆ ಸವಿಸ್ತಾರವಾದ ಮಾಹಿತಿ ನನಗೆ ಇಲ್ಲ. ಕನ್ನಡಕ್ಕೆ, ಕನ್ನಡಿಗರಿಗೆ ತೊಂದರೆಯಾದರೆ ಹೋರಾಟಕ್ಕೆ ಅಥವಾ ಕೋರ್ಟ್ ಮೆಟ್ಟಿಲೇರಲು ಸಿದ್ಧನಿದ್ದೇನೆ.
-ಎ.ಕೆ.ಎಂ.ಅಶ್ರಫ್, ಶಾಸಕ, ಮಂಜೇಶ್ವರ.