ಮಲೇಬೆನ್ನೂರು ಪುರಸಭೆ: ನೀರು, ರಸ್ತೆ, ಸಮಸ್ಯೆಗಳದೇ ಚರ್ಚೆ

KannadaprabhaNewsNetwork |  
Published : Jul 16, 2026, 01:30 AM IST
 ಪಿಎಸ್‌ಐ ಶ್ರೀಪತಿ ಗಿನ್ನಿ ಮಾತನಾಡಿದರು. | Kannada Prabha

ಸಾರಾಂಶ

ಪಟ್ಟಣದ ಪುರಸಭೆಯ ಅಧ್ಯಕ್ಷೆ ಅಕ್ಕಮ್ಮ ಅಧ್ಯಕ್ಷತೆಯಲ್ಲಿ ಪೋಲೀಸ್ ಬಂದೋಬಸ್ತ್‌ನಲ್ಲಿ ಬುಧವಾರ ಸಾಮಾನ್ಯ ಸಭೆಯು ಜರುಗಿತು.

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಪಟ್ಟಣದ ಪುರಸಭೆಯ ಅಧ್ಯಕ್ಷೆ ಅಕ್ಕಮ್ಮ ಅಧ್ಯಕ್ಷತೆಯಲ್ಲಿ ಪೋಲೀಸ್ ಬಂದೋಬಸ್ತ್‌ನಲ್ಲಿ ಬುಧವಾರ ಸಾಮಾನ್ಯ ಸಭೆಯು ಜರುಗಿತು.

ಆರಂಭದಲ್ಲಿ ನಗರೋತ್ಥಾನ ಅಮೃತ ೨.೦ ಯೋಜನೆಯ ಸಹಾಯಕ ಎಂಜಿನಿಯರ್ ಕಿರಣ್‌ಕುಮಾರ್ ನೀರು ಪೂರೈಕೆಯ ನಗರದಲ್ಲಿ ಎರಡು ನೀರಿನ ಟ್ಯಾಂಕ್ ನಿರ್ಮಾಣವಾಗುತ್ತಲಿದ್ದು ಆಶ್ರಯ ಕಾಲೋನಿಯ ಟ್ಯಾಂಕ್ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಕೊಕ್ಕನೂರು ಗ್ರಾಮದಲ್ಲಿ ಟ್ಯಾಂಕ್ ನಿರ್ಮಿಸಲು ತಡವಾಗಿ ೨ ಎಕರೆ ನಿವೇಶನ ಮಂಜೂರಾಗಿದೆ. ತಾತ್ಕಾಲಿಕವಾಗಿ ಹಳೇ ಪೈಪ್‌ನಲ್ಲಿ ನೀರು ಹರಿಸಲಾಗುತ್ತದೆ. ಕಾಮಗಾರಿ ಪೂರ್ಣಗೊಂಡ ನಂತರ ಸಭೆಯ ನಿರ್ಣಯದಂತೆ ಹೊಸ ಪೈಪ್‌ನ ಮೂಲಕ ನೀರು ಹರಿಸಲಾಗುವುದು ಎಂದು ಸಭೆಗೆ ತಿಳಿಸಿದರು.

ಸದಸ್ಯ ಬಿ ವೀರಯ್ಯ ಟ್ಯಾಂಕ್ ನಿರ್ಮಿಸುವ ಲೇಔಟ್ ಪುರಸಭೆಗೆ ವಶಕ್ಕೆ ಬಂದಿಲ್ಲ. ಆಗಲೇ ಟ್ಯಾಂಕ್ ನಿರ್ಮಾಣ ಮಾಡುತ್ತಿರುವುದು ಸೂಕ್ತವೇ ಎಂದು ಪ್ರಶ್ನಿಸಿ, ಮಳೆ ಬಾರದೇ ನೀರಿನ ಪರಿಸ್ಥಿತಿ ಬಿಗಡಾಯಿಸಿದೆ. ನಿಯಮದಂತೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸದೇ ಎರಡು ತಿಂಗಳು ಕಾಮಗಾರಿ ಸ್ಥಗಿತವಾಗಿದೆ ಎಂದು ದೂರಿದರು.

೨೧ನೇ ಸದಸ್ಯ ಷಾಅಬ್ರಾರ್ ಮಾತನಾಡಿ, ಜಿಗಳಿ ವೃತ್ತ, ಜಾಮಿಯಾ ಶಾಲೆ, ನಂದಿಗುಡಿ ರಸ್ತೆ, ಬಸ್ ನಿಲ್ದಾಣ, ಹಳೇ ಸರ್ಕಲ್,ಬಸವೇಶ್ವರ ದೇವಾಲಯ ಹಾಗೂ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಇಲ್ಲ, ಯುವಕರು ಸುಮ್ನೆ ಬೈಕ್‌ನಲ್ಲಿ ಭಾರೀ ಶಬ್ದ ಮಾಡಿಕೊಂಡು ತೆರಳುವುದು ನಡೀತಿದೆ, ಹಾಗಾಗಿ ಬೀಟ್ ಪೋಲೀಸ್ ಹಾಕುವ ಅಗತ್ಯವಿದೆ. ಆಸ್ಪತ್ರೆ ಆವರಣದಲ್ಲಿ ಹಮಾಲರು ವಾಹನಗಳನ್ನು ನಿಲುಗಡೆ ಮಾಡುತ್ತಿದ್ದು ಆ್ಯಂಬುಲೆನ್ಸ್ ಸಾಗಲು ಸ್ಥಳವಿರಲ್ಲ. ಅಂಥವರಿಗೆ ಸೂಚನೆ ನೀಡಬೇಕು ಎಂದು ಸಭೆಯಲ್ಲಿ ಹಾಜರಿದ್ದ ಪಿಎಸ್‌ಐರವರಿಗೆ ಒತ್ತಾಯಿಸಿದರು.

ಮತ್ತೋರ್ವ ಸದಸ್ಯ ಖಲೀಲ್ ಮಾತನಾಡಿ, ಪ್ರತಿ ಗುರುವಾರ ಪಟ್ಟಣದಲ್ಲಿ ಸಂತೆ ನಡೆಯುತ್ತಿದ್ದು ಸಂತೆ ರಸ್ತೆಯಲ್ಲಿ ಭಾರೀ ವಾಹನಗಳನ್ನು ತಡೆಯುವಂತೆ , ಪಾದಚಾರಿ ಮಾರ್ಗದಲ್ಲಿ ವಾಹನಗಳನ್ನು ನಿಲ್ಲಿಸುವುದು ಮತ್ತು ಅಂಗಡಿ ಹಾಕುವುದನ್ನು ತಡೆದು ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲು ಸಭೆಯಲ್ಲಿ ಹಾಜರಿದ್ದ ಪಿಎಸ್‌ಐರವರಿಗೆ ತಿಳಿಸಿದರು.

ಪಿಎಸ್‌ಐ ಶ್ರೀಪತಿ ಗಿನ್ನಿ ಮಾತನಾಡಿ, ಪಟ್ಟಣದ ಮುಖ್ಯ ರಸ್ತೆ, ಹಳೇ ಸರ್ಕಲ್, ಬಸ್ ನಿಲ್ದಾಣ, ಆಸ್ಪತ್ರೆಗಳ ಬಳಿ ಪಾಯಿಂಟ್ ಗುರುತಿಸಿ ಪೋಲಿಸರನ್ನು ನಿಯೋಜನೆ ಮಾಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ತೆಗೆದುಕೊಳ್ಳುತ್ತೇನೆ, ಕರ್ಕಶ ಶಬ್ದ ಮಾಡುವ ಬೈಕ್‌ಗಳ ಫೋಟೊ ಹಾಕಿದಲ್ಲಿ ಕರೆದು ಆ ಬೈಕ್‌ಗಳ ಸೈಲೆನ್ಸ್‌ರ್‌ಗಳನ್ನು ನಾಶ ಮಾಡಲಾಗುವುದು ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ಟಿ ಶಿವು, ಸದಸ್ಯರಾದ ವಿಜಯಲಕ್ಷ್ಮಿ, ಮಂಜುಳಾ, ನಫ್ಷಿಯಾಬಾನು, ಸುಧಾ, ಲೋಕೇಶ್, ಸಾಬಿರ್‌ಅಲಿ, ನಯಾಜ್, ಶಬ್ಬೀರ್,ದಾದಾಪೀರ್ ಮತ್ತಿತರರು ತಮ್ಮ ವಾರ್ಡ್‌ಗಳ ಸಮಸ್ಯೆ ಹೇಳಿಕೊಂಡರು. ಮುಖ್ಯಾಧಿಕಾರಿ ರವಿಪ್ರಕಾಶ್, ಶಿವರಾಜ್ ಸದಸ್ಯರ ಅಭಿಪ್ರಾಯ ದಾಖಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ರಮವಾಗಿ ಬಂದು ಸಿಂಧನೂರಲ್ಲಿ ನೆಲೆಸಿದ್ದ ಬಾಂಗ್ಲಾ ನಿವಾಸಿ
ಕಾಯೋ ಮಳೆರಾಯ ಬಿಡಬೇಡ ಜನರ ಕೈಯ್ಯ