ಚಂದ್ರು ಕೊಂಚಿಗೇರಿ
ಸಿಂಗಟಾಲೂರು ಬ್ಯಾರೇಜ್ 509 ಮೀಟರ್‌ಗೆ ಗೇಟ್ ಅಳವಡಿಸಿದ್ದು ಒಟ್ಟು 3.117 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಪೂರ್ಣ ಪ್ರಮಾಣದಲ್ಲಿ ನೀರು ನಿಲುಗಡೆಗೆ ಪುನರ್ ನಿರ್ಮಾಣ ಮತ್ತು ಪುನರ್ ವಸತಿ ಯೋಜನೆಯ ಕಾಮಗಾರಿಗಳ ಬಾಕಿ ಇರುವುದೇ ಅಡ್ಡಿಯಾಗಿದೆ. ಆದ್ದರಿಂದ ಸದ್ಯ 507.70 ಮೀಟರ್‌ಗೆ ನೀರು ನಿಲ್ಲಿಸಲಾಗಿದೆ. ಇದರಿಂದ 2.300 ಟಿಎಂಸಿ ನೀರು ಸಂಗ್ರಹವಾಗಿದೆ. ಭಾನುವಾರ ಬ್ಯಾರೇಜ್‌ಗೆ 32100 ಕ್ಯೂಸೆಕ್ ನೀರು ಒಳ ಹರಿವು ಇದ್ದು, ಅಷ್ಟೇ ಪ್ರಮಾಣದಲ್ಲಿ ಹೊರ ಹರಿವು ಇದೆ. ಯೋಜನೆಯ ಕೆಳ ಭಾಗದಲ್ಲಿ ಕೂಡ್ಲಿಗಿಯ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ಹಗರಿಬೊಮ್ಮನಹಳ್ಳಿಯ ಮಾಲ್ವಿ ಜಲಾಶಯಕ್ಕೆ, ನೀರು ತುಂಬಿಸುವ ಯೋಜನೆಯ ಜಾಕ್ವೆಲ್‌ಗಳಿಗೂ ನೀರು ಲಭ್ಯವಿದ್ದು, ಆ ಭಾಗಕ್ಕೂ ನೀರು ಪೂರೈಕೆ ಮಾಡಲಾಗುತ್ತಿದೆ.
ತಾಲೂಕಿನ ಎಲ್ಲ ಹಳ್ಳಿಗಳಿಗೂ ತುಂಗಭದ್ರ ನದಿಯೇ ನೀರಿನ ಮೂಲವಾಗಿದೆ. ಈ ಬಾರಿ ಬರಕ್ಕೆ ತುತ್ತಾಗಿ ನೀರಿನ ತತ್ವಾರದಲ್ಲಿದ್ದ ಅನ್ನದಾತರಿಗೆ, ಸಿಂಗಟಾಲೂರು ಯೋಜನೆ ನೀರು ಆಸರೆಯಾಗಿ ನೀರಿನ ಬರ ನೀಗಿಸಿದೆ.ಇಲ್ಲಿನ 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ದೂರವಿರುವ ಹಳ್ಳಿಗಳ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಈಗಾಗಲೇ ಹಿರೇಹಡಗಲಿ ಕೆರೆ, ಅರಳಿಹಳ್ಳಿ ಕೆರೆ, ಹಗರನೂರು ಕೆರೆ, ಮುದೇನೂರು ಕೆರೆ, ದೇವಗೊಂಡನಹಳ್ಳಿ ಕೆರೆ, ಮಾನ್ಯರ ಮಸಲವಾಡ ಕೆರೆ, ಕಗ್ಗಲಗಟ್ಟಿ ತಾಂಡಾ ಕೆರೆ, ನಾಗತಿ ಬಸಾಪುರ ಕೆರೆ, ಹ್ಯಾರಡ ಗ್ರಾಮದ ಹಳೆ ಮಲಿಯಮ್ಮ ಕೆರೆ, ಹೊಸ ಮಲಿಯಮ್ಮ ಕೆರೆ, ಹಗರಿಬೊಮ್ಮನಹಳ್ಳಿ ತಾಲೂಕಿನ ಬನ್ನಿಕಲ್ಲು ಕೆರೆ, ದಾಸನಹಳ್ಳಿ ಬಳಿಯ ಪೋತಲಗಟ್ಟಿ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಉಳಿದಂತೆ ಮಲ್ಲನಕೆರೆ ಗ್ರಾಮದ ಕೆರೆ, ತಳಕಲ್ಲು ಗ್ರಾಮದ ಕೆರೆಗಳಿಗೂ ನೀರು ಹರಿಸುತ್ತೇವೆಂದು ಅಧಿಕಾರಿಗಳು ಹೇಳುತ್ತಾರೆ.
ತುಂಗಭದ್ರಾ ನದಿಯಲ್ಲಿ ಸಾಕಷ್ಟು ನೀರಿದೆ. ಕೂಡಲೇ ಅಧಿಕಾರಿಗಳು ಕೆರೆ, ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ, ತಳಕಲ್ಲು ಕೆರೆ ಹೋರಾಟ ಸಮಿತಿ ಸೇರಿದಂತೆ ಈ ಯೋಜನೆಯ, ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರೂ ನೀರು ಹರಿಸುವಂತೆ ಪ್ರತಿಭಟನೆ, ಧರಣಿ ಸತ್ಯಾಗ್ರಹ ಮಾಡಿದ್ದರು.
ಹ್ಯಾರಡ ಕಾಯ್ದಿಟ್ಟ ಅರಣ್ಯ ಪ್ರದೇಶದ ಪಕ್ಕದಲ್ಲೇ ಇರುವ ಕೆರೆಗೆ ನೀರು ಹರಿದು ಬರುತ್ತಿದೆ. ವನ್ಯ ಜೀವಿಗಳಿಗೆ ಮತ್ತು ಜನ ಜಾನುವಾರು ನೀರಿನ ದಾಹ ನೀಗಿಸಿದೆ ಎನ್ನುತ್ತಾರೆ ಶಾಂತರಾಜ್ ಜೈನ್.