ಮಾಲಿಂಗಣ್ಣ., ಚಿತ್ರದುರ್ಗದಲ್ಲಿ ಗೊಲ್ಲರ ಹಾಸ್ಟೆಲ್ ಎಲ್ಲೈತಣ್ಣ!

KannadaprabhaNewsNetwork |  
Published : Apr 02, 2025, 01:01 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್ (ಅನುದಾನ ಅದ್ವಾನ-ಭಾಗ-2) | Kannada Prabha

ಸಾರಾಂಶ

ಇಪ್ಪತ್ತು ವರ್ಷಗಳ ಹಿಂದೆ ಚಿತ್ರದುರ್ಗದ ಯಾವುದೇ ಮೂಲೆಯಲ್ಲಿ ನಿಂತು ಗೊಲ್ಲರ ಹಾಸ್ಟೆಲ್ ಎಲ್ಲಿದೆ ಎಂದು ಯಾರನ್ನಾದರೂ ಕೇಳಿದರೆ ರಂಗಯ್ಯನ ಬಾಗಿಲು ಬಳಿ ಹೋಗಿ. ಕುರುಬರದು, ಗೊಲ್ಲರದು ಅಕ್ಕಪಕ್ಕದಲ್ಲಿ ಇವೆ ಎನ್ನುತ್ತಿದ್ದರು.

ಕಮರ್ಷಿಯಲ್ ಕಾಂಪ್ಲೆಕ್ಸ್ ಆಗಿ ಪರಿವರ್ತನೆ । ಸಂಸದರ ಅನುದಾನ ದುರ್ಬಳಕೆ । ಇತರ ಸಮುದಾಯಕ್ಕೂ ಆಶ್ರಯವಾಗಿದ್ದ ತಾಣ

ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭ ವಾರ್ತ ಚಿತ್ರದುರ್ಗ

ಇಪ್ಪತ್ತು ವರ್ಷಗಳ ಹಿಂದೆ ಚಿತ್ರದುರ್ಗದ ಯಾವುದೇ ಮೂಲೆಯಲ್ಲಿ ನಿಂತು ಗೊಲ್ಲರ ಹಾಸ್ಟೆಲ್ ಎಲ್ಲಿದೆ ಎಂದು ಯಾರನ್ನಾದರೂ ಕೇಳಿದರೆ ರಂಗಯ್ಯನ ಬಾಗಿಲು ಬಳಿ ಹೋಗಿ. ಕುರುಬರದು, ಗೊಲ್ಲರದು ಅಕ್ಕಪಕ್ಕದಲ್ಲಿ ಇವೆ ಎನ್ನುತ್ತಿದ್ದರು.

ರಂಗಯ್ಯನ ಬಾಗಿಲು ಪ್ರದೇಶವೆಂದರೆ ಒಂದು ಕಾಲದಲ್ಲಿ ಹಾಸ್ಟೆಲ್‌ಗಳ ಹಬ್ ಎಂದೇ ಖ್ಯಾತಿ. ಸಿರಿಗೆರೆ ಹಾಸ್ಟೆಲ್, ಕುರುಬರ ಹಾಸ್ಟೆಲ್, ಗೊಲ್ಲರ ಹಾಸ್ಟೆಲ್, ದೇವಾಂಗರ ಹಾಸ್ಟೆಲ್, ಜಯದೇವ ಹಾಸ್ಟೆಲ್ ಎಲ್ಲ ಒಂದೇ ಕಡೆ ಇದ್ದವು. ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗೆ ಕಾರಣವಾಗಿದ್ದವು. ಹಳ್ಳಿಯಿಂದ ಬರುವ ವಿದ್ಯಾರ್ಥಿಗಳು ಕೈಯಲ್ಲೊಂದು ಟ್ರಂಕ್ ಹಿಡಿದು ನೇರವಾಗಿ ಹಾಸ್ಟೆಲ್ ಪ್ರವೇಶಿಸುತ್ತಿದ್ದರು.ಇದಕ್ಕಾಗಿ ಸರ್ಕಾರವೇ ನಿವೇಶನ ನೀಡಿತ್ತು.

ಕೇವಲ ಹದಿನೈದು ವರ್ಷಗಳ ಅಂತರದಲ್ಲಿ ಎಲ್ಲವೂ ಬದಲಾಗಿದೆ. ಗೊಲ್ಲರ ಹಾಸ್ಟೆಲ್ ಎಲ್ಲಿದೆ ಎಂದು ಹುಡುಕಿದರೂ ಸಿಗುತ್ತಿಲ್ಲ. ಗೊಲ್ಲರ ಸಂಘದ ಆಡಳಿತ ಮಂಡಳಿಯ ಧನದಾಹ ಪ್ರವೃತ್ತಿಯಿಂದಾಗಿ ಹಾಸ್ಟೆಲ್ ಕೊಠಡಿಗಳ ಬಾಗಿಲುಗಳ ಕೀಳಿಸಿ ಶಟರ್ ಇಟ್ಟು ವಾಣಿಜ್ಯ ಸಮುಚ್ಛಯಗಳನ್ನಾಗಿ ಮಾಡಲಾಗಿದೆ. ಸಮುದಾಯದ ಕಾಳಜಿಗಳ ಮೂಲೆಗುಂಪು ಮಾಡಿ ವೈಯುಕ್ತಿಕ ಅಭಿವೃದ್ಧಿಗೆ ನೆಲೆ ಮಾಡಿಕೊಳ್ಳಲಾಗಿದೆ.

ಚಿತ್ರದುರ್ಗದಲ್ಲಿ ಗೊಲ್ಲರ ಹಾಸ್ಟೆಲ್ ಆರಂಭವಾದಾಗ 12 ಕೊಠಡಿಗಳಿದ್ದವು. ಯಾದವ ಸಮುದಾಯವಲ್ಲದೇ ಇತರೆ ಸಮುದಾಯದ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಆಶ್ರಯ ಪಡೆದು ವಿದ್ಯಾಭ್ಯಾಸಕ್ಕೆ ಮಾರ್ಗ ಕಂಡುಕೊಂಡಿದ್ದರು. ಆರಂಭದಲ್ಲಿ ಗೊಲ್ಲ ಸಮುದಾಯದ ಹಿರಿಯರು ಕೈಯಿಂದ ದುಡ್ಡು ಹಾಕಿಕೊಂಡು ಹಾಸ್ಟೆಲ್ ನಿರ್ವಹಣೆ ಮಾಡಿದರು. ನಂತರ ಬಿಸಿಎಂ ಇಲಾಖೆ ನೆರವು ಪಡೆಯಲಾಯಿತು. 56 ಮಂದಿ ವಿದ್ಯಾರ್ಥಿಗಳು ಅಲ್ಲಿದ್ದರು.

ಬೆಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಆಗಿದ್ದ ಪಿ.ಕೋದಂಡ ರಾಮಯ್ಯ ಸ್ವಯಂ ನಿವೃತ್ತಿ ಪಡೆದು ಚಿತ್ರದುರ್ಗ ಕ್ಷೇತ್ರದಿಂದ ಗೆದ್ದು ಲೋಕಸಭೆ ಪ್ರವೇಶಿಸಿದಾಗ ಗೊಲ್ಲರ ಹಾಸ್ಟೆಲ್‌ಗೂ ಅದೃಷ್ಟ ಖುಲಾಯಿಸಿತು. ಅಂದಿನ ರಾಜ್ಯ ಸಭಾ ಸದಸ್ಯ ಪ್ರೊ.ಎ.ಲಕ್ಷ್ಮಿಸಾಗರ್ ಅವರನ್ನು ಸಂಪರ್ಕಿಸಿ ಗೊಲ್ಲರ ವಿದ್ಯಾರ್ಥಿನಿಲಯಕ್ಕೆ ಹೆಚ್ಚುವರಿಯಾಗಿ 10 ಕೊಠಡಿ ನಿರ್ಮಾಣ ಮಾಡಲು ಕೋದಂಡರಾಮಯ್ಯ 15 ಲಕ್ಷ ರುಪಾಯಿ ಸಂಸದರ ಪ್ರದೇಶಾಭಿವೃದ್ದಿ ನಿಧಿಯಡಿ ಅನುದಾನ ಮಂಜೂರು ಮಾಡಿಸಿ ಕಟ್ಟಡದ ಉದ್ಗಾಟನೆ ನೆರವೇರಿಸಿದರು.

ಗೊಲ್ಲ ಸಮುದಾಯದ ವಚನಕಾರ ತುರುಗಾಹಿ ರಾಮಣ್ಣನ ಹೆಸರನ್ನು ಮಹಾದ್ವಾರಕ್ಕೆ ಇಟ್ಟು ಅದ್ಧೂರಿ ಹಾಸ್ಟೆಲ್ ಉದ್ಘಾಟನೆ ನೆರವೇರಿಸಲಾಗಿತ್ತು. ಹತ್ತು ಸಹಸ್ರಕ್ಕೂ ಹೆಚ್ಚು ಮಂದಿ ಅಂದಿನ ಹಾಸ್ಟೆಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಟ್ಟಡವ ಕಣ್ತುಂಬಿಕೊಂಡಿದ್ದರು. ಸ್ವತಃ ಲಕ್ಷ್ಮಿಸಾಗರ್ ಆಗಮಿಸಿ ಹಾಸ್ಟೆಲ್ ಕಟ್ಟಡ ಉದ್ಘಾಟನೆ (7-1-2009) ನೆರವೇರಿಸಿದ್ದರು.

ಹತ್ತು ಕೊಠಡಿಗಳ ನೂತನ ಹಾಸ್ಟೆಲ್ ನಿರ್ಮಾಣವಾದ ಬರೋಬ್ಬರಿ ಹದಿನೈದು ವರ್ಷಗಳಲ್ಲಿ ಚಿತ್ರಣವೇ ಬದಲಾಗಿದೆ. ಹಾಸ್ಟೆಲ್ ಕೊಠಡಿಗಳ ಬಾಗಿಲುಗಳ ಕಿತ್ತು ವಾಣಿಜ್ಯ ಸಮುಚ್ಛಯ ಮಾಡಲಾಗಿದೆ. ತಿಂಗಳಿಗೆ ಲಕ್ಷಾಂತರ ರುಪಾಯಿ ಬಾಡಿಗೆ ಬರುವ ಹಾಗೆ ಮಾಡಿಕೊಳ್ಳಲಾಗಿದೆ. ಮಂಚ, ಚಾಪೆ, ಬುಕ್ ರ್‍ಯಾಕ್‌ ಕಾಣಿಸಬೇಕಾಗಿದ್ದ ಹಾಸ್ಟೆಲ್ ಕೊಠಡಿಗಳು ಈಗ ಮೆಡಿಕಲ್ ಶಾಪ್, ಸ್ಕ್ಯಾನಿಂಗ್ ಸೆಂಟರ್, ಕನ್ನಡಕದ ಅಂಗಡಿಗಳಾಗಿ ಗೋಚರಿಸುತ್ತಿವೆ.

ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಯಿಂದ ಹಾಸ್ಟೆಲ್ ನಿರ್ಮಾಣಕ್ಕೆ ಅನುದಾನ ಪಡೆದು ನಂತರ ಅದನ್ನು ವಾಣಿಜ್ಯ ಮಳಿಗೆಗಳಾಗಿ ರೂಪಾಂತರ ಮಾಡಿರುವುದು ನಿಯಮದ ಉಲ್ಲಂಘನೆ. ಕೇಂದ್ರ ಸರ್ಕಾರದ ಅನುದಾನವನ್ನು ವಾಣಿಜ್ಯ ಚಟುವಟಿಕೆಗಳಿಗೆ ಬಳಸಿಕೊಳ್ಳುವಂತಿಲ್ಲ.

ಪ್ರೊ.ಲಕ್ಷ್ಮಿಸಾಗರ್ ಅನುದಾನದಲ್ಲಿ ನಿರ್ಮಿಸಲಾದ ಹತ್ತು ಕೊಠಡಿಗಳು ವಾಣಿಜ್ಯ ಕಾಂಪ್ಲೆಕ್ಸ್‌ಗಳಾಗಿದ್ದರೆ ಗೊಲ್ಲರ ಹಾಸ್ಟೆಲ್‌ ಹಳೆಯ ಹನ್ನೆರಡು ಕೊಠಡಿಗಳ ನೆಲಸಮ ಮಾಡಿ ಅಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ನೀಲನಕ್ಷೆ ತಯಾರಿಸಲಾಗಿದೆ.

ಹಿಂದೆ ಹಾಸ್ಟೆಲ್ ಆರಂಭಿಸುವಾಗ ನಾವೆಲ್ಲರೂ ಪ್ರತಿ ತಿಂಗಳು ಕೈಯಿಂದ ದುಡ್ಡು ಹಾಕಿದ್ದೇವೆ. ಹಾಸ್ಟೆಲ್‌ಗೆಂದೇ ಸರ್ಕಾರ ನಿವೇಶನ ಮಂಜೂರು ಮಾಡಿದ್ದು ಅನ್ಯ ಉದ್ದೇಶಗಳಿಗೆ ಬಳಕೆ ಮಾಡುವಂತಿಲ್ಲ. ಹಾಸ್ಟೆಲ್ ಕಟ್ಟಡಗಳ ನೆಲಸಮ ಮಾಡಿ ಬೇಕಾಬಿಟ್ಟಿಯಾಗಿ ವರ್ತಿಸಲಾಗಿದೆ.

ಸಿದ್ದಪ್ಪ, ಗೊಲ್ಲರ ಸಂಘದ ಮಾಜಿ ಅಧ್ಯಕ್ಷ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ