ಕನಕಗಿರಿ: ತಾಲೂಕಿನ ಮಲ್ಲಿಗೆವಾಡ ಗ್ರಾಮಸ್ಥರಿಗೆ ಊರಿಂದ ಊರಿಗೆ ಹೋಗಿ ಕುಡಿಯವ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದಲ್ಲಿನ ಶುದ್ಧೀಕರಣ ಘಟಕದ ಯಂತ್ರಗಳು ಕೆಟ್ಟಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ನೀರಿನ ಸಮಸ್ಯೆ ಉಲ್ಬಣಿಸಿದೆ. ಗ್ರಾಮದಿಂದ ಕೂಗಳತೆ ದೂರದಲ್ಲಿ ಬೃಹತ್ ಕೆರೆ ಇದ್ದರೂ ಮಲ್ಲಿಗೆವಾಡಕ್ಕೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವುದು ಅಚ್ಚರಿ ಮೂಡಿಸಿದೆ.
ಬೋರ್‌ವೆಲ್ ನೀರು ಸಿಗದ ಕಾರಣ ಗ್ರಾಮಸ್ಥರು ಅಕ್ಕಪಕ್ಕದ ಹೊಲ, ತೋಟಗಳಿಗೆ ಹೋಗಿ ನೀರು ತರುತ್ತಿದ್ದಾರೆ. ದಿನ ನಿತ್ಯ ಖಾಲ್ಸಾ ಕಾಟಾಪುರದ ಶುದ್ಧೀಕರಣ ಘಟಕದ ಮುಂದೆ ಸರದಿಯಲ್ಲಿ ನಿಂತು ನೀರು ತುಂಬಿಕೊಳ್ಳುವ ಪರಿಸ್ಥಿತಿ ಮಲ್ಲಿಗೆವಾಡದ ಗ್ರಾಮಸ್ಥರಿಗೆ ಬಂದಿದೆ. ಈ ಕುರಿತು ಪಿಡಿಒ ಹಾಗೂ ಪಂಚಾಯಿತಿ ಸದಸ್ಯರ ಗಮನಕ್ಕೆ ತಂದರೂ ಸ್ಪಂದಿಸಿಲ್ಲ. ಕುಡಿಯುವ ನೀರಿಗೆ ಇನ್ನೊಂದು ಗ್ರಾಮಕ್ಕೆ ಹೋಗಿ ನೀರು ತರುತ್ತಿರುವುದು ಅನಿವಾರ್ಯವಾಗಿದೆ. ಜಿಪಂ ಸಿಇಒ ಅವರು ತಕ್ಷಣವೇ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಸರಿಪಡಿಸಬೇಕು ಎಂದು ಗ್ರಾಮಸ್ಥ ಮಾರುತಿ ನಾಯಕ ಆಗ್ರಹಿಸಿದ್ದಾರೆ.ಬೋರ್‌ವೆಲ್ ನೀರು ಪೂರೈಸಲು ಕ್ರಮ: ಮಲ್ಲಿಗೆವಾಡದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ನಾಳೆ ಅಥವಾ ನಾಡಿದ್ದು ನೀರಿನ ಸಮಸ್ಯೆ ನೀಗಿಸಲಾಗುವುದು. ಗ್ರಾಮಕ್ಕೆ ಭೇಟಿ ನೀಡಿ ಖಾಸಗಿಯವರ ಕಡೆಯಿಂದ ಬೋರ್‌ವೆಲ್ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಾಪಂ ಇಒ ರಾಜಶೇಖರ ಹೇಳಿದರು.