ಮಲ್ಪೆ: ಕೆಲಸಗಾರರಿಂದಲೇ ರೌಡಿಶೀಟರ್‌ನ ಕಡಿದು ಕೊಲೆ!

KannadaprabhaNewsNetwork |  
Published : Sep 28, 2025, 02:00 AM IST
27ರೌಡಿ | Kannada Prabha

ಸಾರಾಂಶ

ಸೈಫುದ್ದೀನ್ ಪತ್ನಿ ಮತ್ತು ಮಗನೊಂದಿಗೆ ಮಣಿಪಾಲದಲ್ಲಿ ಸ್ವಂತ ಮನೆಯಲ್ಲಿ ವಾಸವಾಗಿದ್ದಾನೆ. ಆದರೂ ಹಣಕಾಸಿನ ವ್ಯವಹಾರಕ್ಕಾಗಿ ಕೊಡವೂರಿನಲ್ಲೊಂದು ಬಾಡಿಗೆ ಮನೆ ಮಾಡಿಕೊಂಡಿದ್ದು, ಅಲ್ಲಿ ಒಂಟಿಯಾಗಿ ಇರುತ್ತಿದ್ದ. ಆತನ ಗೆಳೆಯರು, ನೌಕರರು ಅಲ್ಲಿಯೇ ಭೇಟಿಯಾಗುತಿದ್ದರು.

 ಮಲ್ಪೆ : ಇಲ್ಲಿನ ಕೊಡವೂರು ಗ್ರಾಮದಲ್ಲಿ ರೌಡಿಶೀಟರೊಬ್ಬನನ್ನು ಆತನ ಕೆಲಸಗಾರರೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ಶನಿವಾರ ನಡೆದಿದೆ. ಕೊಲೆಯಾದ ರೌಡಿ ಇಲ್ಲಿನ ಆತ್ರಾಡಿಯ ನಿವಾಸಿ ಸೈಫುದ್ದೀನ್ ಯಾನೆ ಸೈಪು (52). ಫೈಜಲ್‌ಖಾನ್, ಶರೀಫ್ ಮತ್ತು ಶುಕೂರ್ ಕೊಲೆಮಾಡಿದವರು.  

ಈ ಆರೋಪಿಗಳು ಸೈಫುದ್ದೀನ್ ಮಾಲಿಕನಾಗಿರುವ ಎಕೆಎಂಎಸ್ ಬಸ್‌ಗಳ ಚಾಲಕರೇ ಆಗಿದ್ದಾರೆ.ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಆರೋಪಿಗಳು ಕೊಡವೂರಿನ ನಾಗಬನದಲ್ಲಿರುವ ಬಂಗಲೆಯಂತಹ ಮನೆಯಲ್ಲಿ ತಲವಾರಿನಿಂದ ಕಡಿದು, ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಕಾರಿನಲ್ಲಿ ಪರಾರಿಯಾಗಿದ್ದಾರೆ. 

 ಸೈಫುದ್ದೀನ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ಮೃತಪಟ್ಟಿದ್ದಾನೆ.ಸೈಫುದ್ದೀನ್ ಪತ್ನಿ ಮತ್ತು ಮಗನೊಂದಿಗೆ ಮಣಿಪಾಲದಲ್ಲಿ ಸ್ವಂತ ಮನೆಯಲ್ಲಿ ವಾಸವಾಗಿದ್ದಾನೆ. ಆದರೂ ಹಣಕಾಸಿನ ವ್ಯವಹಾರಕ್ಕಾಗಿ ಕೊಡವೂರಿನಲ್ಲೊಂದು ಬಾಡಿಗೆ ಮನೆ ಮಾಡಿಕೊಂಡಿದ್ದು, ಅಲ್ಲಿ ಒಂಟಿಯಾಗಿ ಇರುತ್ತಿದ್ದ. ಆತನ ಗೆಳೆಯರು, ನೌಕರರು ಅಲ್ಲಿಯೇ ಭೇಟಿಯಾಗುತಿದ್ದರು. 

ಉಡುಪಿ ಕುಕ್ಕಿಕಟ್ಟೆಯ ನಿವಾಸಿಯಾದ ಫೈಜಲ್‌ ಖಾನ್‌, ಶನಿವಾರ ಬೆಳಗ್ಗೆ 10 ಗಂಟೆಗೆ ಬಸ್‌ನ ವ್ಯವಹಾರದ ಮಾತನಾಡಲೆಂದು ಸೈಫುದ್ದೀನ್‌ನನ್ನು ಮಣಿಪಾಲದಲ್ಲಿರುವ ಮನೆಯಿಂದ ಕಾರಿನಲ್ಲಿ ಕೊಡವೂರಿನ ಮನೆಗೆ ಕರೆದುಕೊಂಡು ಬಂದಿದ್ದ. ಅಲ್ಲಿಗೆ ದೊಡ್ಡಣಗುಡ್ಡೆಯ ನಿವಾಸಿ ಶರೀಫ್ ಮತ್ತು ದ.ಕ. ಜಿಲ್ಲೆಯ ಬೊಕ್ಕಪಟ್ಣದ ಶುಕೂರ್ ಎಂಬವರು ಬಂದಿದ್ದಾರೆ. ನಂತರ ಸೈಫುದ್ದೀನ್‌ನನ್ನು ಮೂವರು ಸೇರಿ ಕೊಲೆ ಮಾಡಿದ್ದಾರೆ. ಕೊಲೆಗೆ ಸೈಫುದ್ದೀನ್‌ನ ಕಾರಿನಲ್ಲಿದ್ದ ತಲವಾರುಗಳನ್ನೇ ಬಳಸಲಾಗಿದೆ ಎಂದು ತಿಳಿದು ಬಂದಿದೆ. 

ಸೈಫುದ್ದೀನ್ ಮೇಲೆ 2 ಕೊಲೆ, ಜೀವಬೆದರಿಕೆ, ಹಲ್ಲೆ, ಬ್ಲಾಕ್‌ಮೇಲ್ ಸೇರಿದಂತೆ 18 ಪ್ರಕರಣಗಳಿವೆ. ಈ ಮೂವರು ಆರೋಪಿಗಳು ಆತನ ಪ್ರಕರಣಗಳಲ್ಲಿ ಸಹಭಾಗಿಯಾಗಿದ್ದವರು. ಅವರೀಗ ಹಣದ ವ್ಯವಹಾರಕ್ಕೆ ಸಂಬಂಧಿಸಿ ಜಗಳ ನಡೆದು ಅಥವಾ ಸುಫಾರಿ ಪಡೆದು ಈ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.

ಉಡುಪಿ ಎಸ್ಪಿ ಹರಿರಾಮ್ ಶಂಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರೋಪಿಗ‍ಳ‍ ಪತ್ತೆಗೆ 3 ತಂಡಗಳನ್ನು ರಚಿಸಲಾಗಿದೆ ಎಂದವರು ತಿಳಿಸಿದ್ದಾರೆ.

PREV
Read more Articles on

Recommended Stories

45 ನಿಮಿಷದಲ್ಲಿ 12 ಮುದ್ದೆ ತಿಂದು ಟಗರು ಗೆದ್ದ!
ಪ್ರಾಣಿ ಪ್ರೇಮಿಗಳನ್ನು ಬೆಚ್ಚಿ ಬೀಳಿಸಿದ ಕೃಷ್ಣಮೃಗಗಳ ಸರಣಿ ಸಾವು