ಮಲ್ಪೆ ಮಹಿಳೆಗೆ ಥಳಿತ: ಆರೋಪಿಗಳ ಬಿಡುಗಡೆಗೆ ಹೈಕೋರ್ಟ್ ಆದೇಶ

KannadaprabhaNewsNetwork |  
Published : Mar 28, 2025, 12:31 AM IST
32 | Kannada Prabha

ಸಾರಾಂಶ

ಮೀನು ಕದ್ದ ಆರೋಪದ ಮೇಲೆ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಲಕ್ಷ್ಮೀ ಸಾಲಿಯಾನ್‌ ಮತ್ತು ಲಕ್ಷ್ಮೀ ಬಾಯಿ ಮತ್ತು ಸುಂದರ್‌ ಅವರನ್ನು ಕೂಡಲೇ ಜೈಲಿನಿಂದ ಬಿಡುಗಡೆ ಮಾಡಲು ಹೈಕೋರ್ಟ್‌ ಆದೇಶಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮೀನು ಕದ್ದ ಆರೋಪದ ಮೇಲೆ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಲಕ್ಷ್ಮೀ ಸಾಲಿಯಾನ್‌ ಮತ್ತು ಲಕ್ಷ್ಮೀ ಬಾಯಿ ಮತ್ತು ಸುಂದರ್‌ ಅವರನ್ನು ಕೂಡಲೇ ಜೈಲಿನಿಂದ ಬಿಡುಗಡೆ ಮಾಡಲು ಹೈಕೋರ್ಟ್‌ ಆದೇಶಿಸಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಮಲ್ಪೆ ಪೋಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಲಕ್ಷ್ಮೀ ಸಾಲಿಯಾನ್‌ ಮತ್ತು ಶಿಲ್ಪಾ ಬಾಯಿ ಮತ್ತು ಸಂದರ್‌ ಸಲ್ಲಿಸಿದ್ದ ತಕರಾರು ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಹೇಮಂತ ಚಂದನ ಗೌಡರ್‌ ಅವರ ಪೀಠ ಈ ಆದೇಶ ಮಾಡಿದೆ.

ಪ್ರಕರಣದ ಹಿನ್ನೆಲೆ:

ಮಲ್ಪೆ ಬಂದರಿನಿನಲ್ಲಿ ಮೀನು ಕದ್ದ ಆರೋಪದ ಮೇಲೆ ಲಂಬಾಣಿ ಸಮುದಾಯಕ್ಕೆ ಸೇರಿದ ಲಕ್ಕಿ ಬಾಯಿ ಅವರನ್ನು 2025ರ ಮಾ.18ರಂದು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಲಕ್ಷ್ಮೀ ಸಾಲಿಯಾನ್‌, ಶಿಲ್ಪ, ಆರಾಧನ ಬೋಟಿನ ಚಂದ್ರ , ಸುಂದರ್‌ ಸೇರಿದಂತೆ ಹಲವರ ವಿರುದ್ಧ ಮಲ್ಪೆ ಠಾಣಾ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು.

ಇದರಿಂದ ತಮ್ಮ ವಿರುದ್ಧ ಎಫ್‌ಐಆರ್‌ ರದ್ದು ಕೋರಿ ಲಕ್ಷ್ಮೀ, ಶಿಲ್ಪಾ ಮತ್ತು ಸುಂದರ್‌ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ಪುರಸ್ಕರಿಸಿದ ಹೈಕೋರ್ಟ್‌, ಪ್ರಕರಣದಲ್ಲಿ ಪೊಲೀಸರು ನೀಡಿರುವ ಅರೆಸ್ಟ್‌ ಮೆಮೋವಿನಲ್ಲಿ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂಬ ಕಾರಣಕ್ಕೆ ವಿಚಾರಣೆಗೆ ಹಾಜರಾಗುವಂತೆ ಅರ್ಜಿದಾರಿಗೆ ನೋಟಿಸ್‌ ನೀಡಲಾಗಿದೆ.ವಿಚಾರಣೆಗೆ ಹಾಜರಾದ ವೇಳೆ ಬಂಧಿಸಲಾಗಿದೆ. ಆದರೆ, ವಿಚಾರಣೆಗೆ ಹಾಜರಾಗಲು ಸೂಚಿಸಿ ಪೊಲೀಸರು ನೀಡಿದ್ದ ನೋಟಿಸ್‌ ಅನ್ನು ಉಲ್ಲಂಘಿಸಿದ ಬಗ್ಗೆ ಅರೆಸ್ಟ್‌ ಮೆಮೊದಲ್ಲಿ ಯಾವುದೇ ಉಲ್ಲೇಖವಿಲ್ಲ. ಹೀಗಿದ್ದರೂ ಅರ್ಜಿದಾರರನ್ನು ಬಂಧಿಸಿರುವ ಕ್ರಮ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಸ್‌) ಸೆಕ್ಷನ್‌ 35(3) ಉಲ್ಲಂಘನೆಯಾಗಿದೆ ಎಂದು ಪೀಠ ಹೇಳಿದೆ.

ಅರ್ಜಿದಾರರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸುವ ಮುನ್ನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಸೂಕ್ತ ರೀತಿಯಲ್ಲಿ ವಿವೇಚನೆ ಬಳಸಿಲ್ಲ. ಬಿಎನ್‌ಎಸ್‌ಎಸ್‌ ಸೆಕ್ಷನ್‌ 47 ಹೇಳಿರುವಂತೆ ಬಂಧನ ಮಾಡಿದ ಕೂಡಲೇ ಪೊಲೀಸರು ಅರ್ಜಿದಾರರಿಗೆ ಬಂಧನಕ್ಕೆ ಸೂಕ್ತ ಕಾರಣ ನೀಡಿಲ್ಲ ಮತ್ತು ಅವರ ಜಾಮೀನು ಹಕ್ಕಿನ ಬಗ್ಗೆ ತಿಳಿಸಿಕೊಟ್ಟಿಲ್ಲ. ಆದ್ದರಿಂದ ಅರ್ಜಿದಾರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆದೇಶಿಸಿದೆ.

ಹಲವು ಷರತ್ತು:

ಅರ್ಜಿದಾರರು ಒಂದು ಲಕ್ಷ ರು. ಮೊತ್ತದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತಾ ಖಾತರಿ ನೀಡಬೇಕು. ಅಗತ್ಯವಿದ್ದಾಗ ತನಿಖಾಧಿಕಾರಿ ಮುಂದೆ ಹಾಜರಾಗಬೇಕು. ಪ್ರಾಸಿಕ್ಯೂಷನ್‌ ಸಾಕ್ಷ್ಯಿಗಳನ್ನು ಬೆದರಿಸಬಾರದು. ಇದೇ ಮಾದರಿಯ ಅಪರಾಧದಲ್ಲಿ ಭಾಗಿಯಾಗಬಾರದು. ತನಿಖಾಧಿಕಾರಿಯ ಪೂರ್ವಾನುಮತಿಯಿಲ್ಲದೆ ಮಲ್ಪೆ ಪೊಲೀಸ್ ಠಾಣೆಯ ಸರಹದ್ದು ಬಿಟ್ಟು ಹೊರ ಹೋಗಬಾರದು. ತಮ್ಮ ಬಿಡುಗಡೆ ಕುರಿತು ಅರ್ಜಿದಾರರು ಯಾವುದೇ ರೀತಿಯಲ್ಲಿ ಸಂಭ್ರಮಾಚರಣೆ ಮಾಡಬಾರದು ಎಂದು ಷರತ್ತು ವಿಧಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ