)
ಕನ್ನಡಪ್ರಭ ವಾರ್ತೆ ಚೇಳೂರುಪಟ್ಟಣದಲ್ಲಿ ಅನೈತಿಕ ಸಂಬಂಧದ ಸಂಶಯದ ಹಿನ್ನೆಲೆ ಮಹಿಳೆಯನ್ನು ಕತ್ತು ಕೊಯ್ದು ಕೊಲೆ ಮಾಡಿ, ಬಳಿಕ ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿರುವ ಭೀಕರ ಘಟನೆ ಶುಕ್ರವಾರ ಸಂಜೆ ನಡೆದಿದೆ.ಪಟ್ಟಣದ ಪದ್ಮನಾಭರಾವ್ ಬಡಾವಣೆಯ ನಿವಾಸಿ ಬಾವಾಜಾನ್ (42) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇದೇ ಪಟ್ಟಣದ ಗೆರಿಗಿರೆಡ್ಡಿಪಾಳ್ಯ ಬಡಾವಣೆಯ ಸಲ್ಮಾ (40) ಕೊಲೆಯಾದ ಮಹಿಳೆ.ಘಟನೆಯ ವಿವರ:
ಶುಕ್ರವಾರ ಸಂಜೆ ಸಲ್ಮಾ ಮನೆಗೆ ತೆರಳಿದ ಬಾವಾಜಾನ್ ಅಕ್ರಮ ಸಂಬಂಧದ ಕುರಿತು ಪ್ರಶ್ನಿಸಿ ಗಲಾಟೆ ಮಾಡಿದ್ದಾನೆ. ಮಾತಿಗೆ ಮಾತು ಬೆಳೆದು ಆಕೆಯ ಮೇಲೆ ಹಲ್ಲೆ ನಡೆಸಿ, ಕತ್ತನ್ನು ಕೊಯ್ದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಅಲ್ಲಿಂದ ಪದ್ಮನಾಭರಾವ್ ಬಡಾವಣೆಯಲ್ಲಿರುವ ತನ್ನ ಬಾಡಿಗೆ ಮನೆಗೆ ಬಂದು ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಕ್ಕದ ಮನೆಯವರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಪರಸ್ಪರ ದೂರು ದಾಖಲು:ಘಟನೆಗೆ ಸಂಬಂಧಿಸಿದಂತೆ ಚೇಳೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಾಗಿವೆ. ನನ್ನ ಪತ್ನಿಯನ್ನು ಬಾವಾಜಾನ್ ಕೊಲೆ ಮಾಡಿದ್ದಾನೆ ಎಂದು ಮೃತಳ ಪತಿ ಮಸ್ತಾನ್ ದೂರು ನೀಡಿದ್ದಾರೆ. ಇತ್ತ ಬಾವಾಜಾನ್ ಪತ್ನಿ ತಸ್ಲೀಮ್ ದೂರು ನೀಡಿ, ಸಲ್ಮಾ ನನ್ನ ಗಂಡನೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡು ನಮ್ಮನ್ನು ದೂರ ಮಾಡಿದ್ದಳು. ನನ್ನ ಪತಿಯ ಸಾವಿಗೆ ಅವಳೇ ಪ್ರಚೋದನೆ ನೀಡಿದ್ದಾಳೆ ಎಂದು ಆರೋಪಿಸಿದ್ದಾರೆ.
ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಡಿವೈಎಸ್ಪಿ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚೇಳೂರು ವೃತ್ತ ನಿರೀಕ್ಷಕ ಎಂ. ಶ್ರೀನಿವಾಸ್ ಮತ್ತು ಪಿಎಸ್ಐ ಹರೀಶ್ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.