ದಾಂಡೇಲಿಯಲ್ಲಿ ವ್ಯಕ್ತಿ ಆತ್ಮಹತ್ಯೆ, ಪತ್ನಿ ವಿರುದ್ಧ ದೂರು ದಾಖಲು

KannadaprabhaNewsNetwork |  
Published : May 03, 2026, 02:30 AM IST
ರಾಘವೇಂದ್ರ ವಾಡಕರ | Kannada Prabha

ಸಾರಾಂಶ

ದಾಂಡೇಲಿ ನಗರದ ಬಾಂಬೆಚಾಳದ ನಿವಾಸಿ, ಮಲೇಷ್ಯಾದಲ್ಲಿ ಉದ್ಯೋಗದಲ್ಲಿದ್ದ ರಾಘವೇಂದ್ರ ವಾಡಕರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ವಿರುದ್ಧ ದೂರು ದಾಖಲಾಗಿದ್ದು, ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.

ದಾಂಡೇಲಿ: ನಗರದ ಬಾಂಬೆಚಾಳದ ನಿವಾಸಿ, ಮಲೇಷ್ಯಾದಲ್ಲಿ ಉದ್ಯೋಗದಲ್ಲಿದ್ದ ರಾಘವೇಂದ್ರ ವಾಡಕರ ಆತ್ಮಹತ್ಯೆ ಪ್ರಕರಣವೀಗ ಗಂಭೀರ ತಿರುವು ಪಡೆದುಕೊಂಡಿದೆ.

ತನ್ನ ಸಾವಿಗೆ ಪತ್ನಿ ಮತ್ತು ಅತ್ತೆಯೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಏ. ೩೦ರಂದು ನೇಣಿಗೆ ಶರಣಾಗಿದ್ದ ರಾಘವೇಂದ್ರ ವಾಡಕರ ಅಂತ್ಯಕ್ರಿಯೆ ಶುಕ್ರವಾರ ಪೊಲೀಸರ ಬಿಗಿ ಭದ್ರತೆಯಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೃತನ ಪತ್ನಿಯನ್ನು ವಶಕ್ಕೆ ಪಡೆದಿದ್ದಾರೆ.

ಮಲೇಷ್ಯಾದಲ್ಲಿ ಕೆಲಸ ನಿರ್ವಹಿಸುತ್ತಿದ್ದ ರಾಘವೇಂದ್ರ ವಾಡಕರ ನಾಲ್ಕೈದು ದಿನಗಳ ಹಿಂದೆಯಷ್ಟೇ ತಮ್ಮ ಹುಟ್ಟುರಾದ ದಾಂಡೇಲಿಗೆ ಬಂದಿದ್ದರು. ಕಳೆದ ಮೂರ್ನಾಲ್ಕು ವರ್ಷಗಳಿಂದ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಪತ್ನಿ ಮೇಘಾ ಮಕ್ಕಳೊಂದಿಗೆ ಧಾರವಾಡ ತಾಲೂಕಿನ ಸಲಕಿನಕೊಪ್ಪದ ತವರು ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ಮನನೊಂದಿದ್ದ ರಾಘವೇಂದ್ರ ವಾಡಕರ ಏ. ೩೦ ರಂದು ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮೊದಲು ಕೈ ಕೊಯ್ದುಕೊಂಡು, ಆನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾಯುವ ಮುನ್ನ ರಾಘವೇಂದ್ರ ವಾಡಕರ ಬರೆದಿಟ್ಟಿರುವ ಡೆತ್ ನೋಟ್ ಪೊಲೀಸರಿಗೆ ಲಭ್ಯವಾಗಿದ್ದು, ಅದರಲ್ಲಿ ತನ್ನ ಸಾವಿಗೆ ಪತ್ನಿ ಮೇಘಾ ಮತ್ತು ಅತ್ತೆಯೇ ನೇರ ಕಾರಣ ಎಂದು ಉಲ್ಲೇಖಿಸಿದ್ದಾರೆ. ಮೃತನ ಸಹೋದರ ನೀಡಿದ ದೂರಿನ ಮೇರೆಗೆ ದಾಂಡೇಲಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತನ ಮೊಬೈಲ್ ಮತ್ತು ಡೆತ್ ನೋಟ್ ವಶಕ್ಕೆ ಪಡೆದಿದ್ದಾರೆ. ಈ ಸಾಕ್ಷ್ಯಗಳ ಆಧಾರದ ಮೇಲೆ ಪತ್ನಿ ಮೇಘಾಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. 15 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ರಾಘವೇಂದ್ರ ವಾಡಕರ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಈ ನಡುವೆ ಮೃತನ ಕುಟುಂಬದವರು ಆತನ ಮಡದಿ ವಿರುದ್ಧವೇ ದೂರು ದಾಖಲಿಸಿದ್ದರು. ಮಡದಿ ಮೇಘಾ ತನ್ನ ಕುಟುಂಬದವರ ಜತೆ ಶುಕ್ರವಾರ ದಾಂಡೇಲಿಗೆ ಆಗಮಿಸಿ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಸಿಪಿಐ ಶಿವಾನಂದ ಅಂಬಿಗೇರ, ಪಿಎಸ್‌ಐ ಜಗದೀಶ ನಾಯಕ, ಪೊಲೀಸ್‌ ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಮಾಯಣದ ಭಕ್ತಿರಸದಲ್ಲಿ ಮಿಂದೆದ್ದ ಗೋಕುಲಂ ಗೋಶಾಲೆ
ದುಬೈನಿಂದ ಪತಿ ಪಾರ್ಸೆಲ್‌ ಕಳುಹಿಸಿದ್ದಾರೆ ಎಂದು ನಂಬಿಸಿ ಮಹಿಳೆಗೆ ವಂಚನೆ