ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ದೀಪಾವಳಿಯಂದು ಹಿರಿಯನ್ನು ನೆನೆಯಲೆಂದು ಶನಿವಾರ, ಕೋಳಿ ಖರೀದಿಸಿ ಮನೆಯತ್ತ ಸಂಚರಿಸುತ್ತಿದ್ದ ವೇಳೆ ಕಡಬ-ಪಂಜ ರಸ್ತೆಯ ಕೋಡಿಂಬಾಳ ಸಮೀಪ ಚಲಿಸುತ್ತಿದ್ದ ಸ್ಕೂಟಿಯ ಮೇಲೆ ಧೂಪದ ಮರ ಬಿದ್ದು ಬೈಕ್ ಸವಾರ ಎಡಮಂಗಲ ಗ್ರಾಮದ ದೇವಸ್ಯ ನಿವಾಸಿ ಸೀತಾರಾಮ ಸ್ಥಳದಲ್ಲಿ ಮೃತಪಟ್ಟಿದ್ದರು. ಈ ಸಂದರ್ಭ, ಕೋಳಿ ಅಪಾಯದಿಂದ ಪಾರಾಗಿತ್ತು. ಮನೆಯ ಯಜಮಾನನನ್ನು ಕಳೆದುಕೊಂಡ ಮನೆ ಮಂದಿ ದುಃಖದಿಂದ ಈ ಕೋಳಿಯನ್ನು ಕಡೆಗಣಿಸಿದ್ದು, ಕಳೆದರಡು ದಿನಗಳಿಂದ ಘಟನಾ ಸ್ಥಳದ ಪಕ್ಕದ ಮರದ ಗೆಲ್ಲೊಂದರಲ್ಲಿ ಕೂತು ತನಗೊದಗಿದ ಅದೃಷ್ಟವೋ ನತದೃಷ್ಟವೋ ಯಾವುದರದ್ದೂ ಅರಿವಿಲ್ಲದೆ ಮೌನವಾಗಿದೆ. ಹಿರಿಯರಿಗೆ ಬಡಿಸುವ ಕಾರ್ಯಕ್ರಮದಲ್ಲಿ ಭಕ್ಷ್ಯವಾಗಿ ರೂಪಾಂತರಗೊಳ್ಳಬೇಕಾಗಿದ್ದ ಕೋಳಿ ವಿಧಿಯ ಲೀಲೆಗೆ ಸಿಲುಕಿ ತಾನು ಬದುಕಿ ಉಳಿದರೂ ಅನಾಥವಾಗಿದೆ.