ಗದಗ: ಜನರಿಗೆ ಸಹಾಯ ಮಾಡಲು ಹೋಗಿ ನನ್ನ ಜೀವನವೇ ಹಾಳಾಯಿತು. ನನಗೆ ಕಷ್ಟ ಬಂದಾಗ ಯಾರೂ ನೆರವಿಗೆ ಬರಲಿಲ್ಲ. ದಿಕ್ಕು ತೋಚದೆ ಈ ನಿರ್ಧಾರ ಮಾಡುತ್ತಿದ್ದೇನೆ ಎಂದು ಗುರುವಾರ ಸೆಲ್ಫಿ ವಿಡಿಯೋದಲ್ಲಿ ಕಣ್ಣೀರಿಟ್ಟಿದ್ದ 38 ವರ್ಷದ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದ್ದು, ಜಿಲ್ಲೆಯಲ್ಲಿ ನಡೆಯುತ್ತಿರುವ ಬಡ್ಡಿ ದಂಧೆಯ ಕರಾಳ ಮುಖವನ್ನು ಮತ್ತೊಮ್ಮೆ ಅನಾವರಣಗೊಳಿಸಿದೆ.
ಕುಟುಂಬದವರ ಆರೋಪದ ಪ್ರಕಾರ ಬಡ್ಡಿ ದಂಧೆಯಲ್ಲಿ ತೊಡಗಿದ್ದ ಕೆಲವರು ನಿರಂತರವಾಗಿ ಹಣ ಹಾಗೂ ಬಡ್ಡಿಗಾಗಿ ಸಂಪತ್ ಅವರಿಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದರು. ಪತ್ನಿ ಸ್ನೇಹಾ ಅವರಿಗೂ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಲಾಗುತ್ತಿತ್ತು ಎನ್ನಲಾಗಿದೆ. ಈ ಮಾನಸಿಕ ಒತ್ತಡದಿಂದಲೇ ಸಂಪತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.
ಘಟನಾ ಸ್ಥಳದಲ್ಲಿ ಪತ್ತೆಯಾದ ಡೆತ್‌ನೋಟ್‌ನಲ್ಲಿ ಸುಮಾರು ₹60 ಲಕ್ಷ ಹಣವನ್ನು ಶೇ. 3.5ರ ಬಡ್ಡಿದರದಲ್ಲಿ ಪಡೆದು ಇತರರಿಗೆ ನೀಡಿದ್ದೆ ಎಂದು ಉಲ್ಲೇಖಿಸಲಾಗಿದೆ. ಆದರೆ, ತಾನು ಹಣ ನೀಡಿದವರು ಹಣವನ್ನು ಹಿಂದಿರುಗಿಸದ ಕಾರಣ, ಸಾಲ ನೀಡಿದವರ ಒತ್ತಡ ಹೆಚ್ಚಾಗಿತ್ತು ಎಂದು ಬರೆದಿರುವುದಾಗಿ ತಿಳಿದುಬಂದಿದೆ.ಡೆತ್‌ನೋಟ್‌ನಲ್ಲಿ ಧರ್ಮಗೌಡ ಕರಿಯನಗೌಡ, ಹಾಲನಗೌಡ ಕುಡಪಲಿಮಠ ಹಾಗೂ ಚಿತ್ರ ತಡಸದ ಸೇರಿದಂತೆ ಕೆಲವರ ಹೆಸರನ್ನು ಉಲ್ಲೇಖಿಸಲಾಗಿದೆ. ಜತೆಗೆ ಮಂಜುನಾಥ್ ಪವಾರ, ಕೃಷ್ಣಾಸಾ ಪವಾರ, ಛಾಯಾ ಕುಲಕರ್ಣಿ ಹಾಗೂ ಜಯರಾಮ್ ಅವರಿಗೆ ಹಣ ನೀಡಿದ್ದಾಗಿ ಉಲ್ಲೇಖಿಸಿರುವ ಮಾಹಿತಿ ಲಭ್ಯವಾಗಿದೆ.
ಆತ್ಮಹತ್ಯೆಗೆ ಮುನ್ನ ಮಾಡಿರುವ ಸೆಲ್ಫಿ ವಿಡಿಯೋದಲ್ಲಿ ಸಂಪತ್ ತಮ್ಮ ನೋವನ್ನು ಹೊರಹಾಕಿದ್ದಾರೆ. ಜನರಿಗೆ ಉಪಕಾರ ಮಾಡಲು ಹೋಗಿ ಈ ಪರಿಸ್ಥಿತಿ ಬಂದಿದೆ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದ್ದೇನೆ. ಆದರೆ, ನನಗೆ ಸಂಕಷ್ಟ ಬಂದಾಗ ಯಾರೂ ನೆರವಾಗಲಿಲ್ಲ. ಬದುಕಬೇಕು, ದುಡಿಯಬೇಕು ಎನ್ನುವಷ್ಟರಲ್ಲಿ ನಿರಂತರ ಕಿರುಕುಳ ಮತ್ತು ಬೆದರಿಕೆ ಎದುರಾಯಿತು. ಹೀಗಾಗಿ ದಿಕ್ಕು ತೋಚದೆ ಈ ನಿರ್ಧಾರ ಮಾಡುತ್ತಿದ್ದೇನೆ ಎಂದು ಭಾವುಕರಾಗಿ ಹೇಳಿದ್ದಾರೆ.
ಬಡ್ಡಿ ದಂಧೆಯ ಕರಾಳ ಮುಖ