₹5 ಕೋಟಿ ಇನ್ಶುರೆನ್ಸ್‌ ಹಣಕ್ಕಾಗಿ ವ್ಯಕ್ತಿ ಕೊಲೆ: ಮಹಿಳೆ ಸೇರಿ ಆರು ಮಂದಿ ಬಂಧನ

KannadaprabhaNewsNetwork |  
Published : Oct 03, 2025, 01:07 AM IST
2ಎಚ್‌ಪಿಟಿ7-ಎಎಸ್ಪಿ ಎಸ್‌. ಜಾಹ್ನವಿ. | Kannada Prabha

ಸಾರಾಂಶ

₹5.25 ಕೋಟಿ ಮೊತ್ತದ ಇನ್ಶುರೆನ್ಸ್‌ ಹಣಕ್ಕಾಗಿ ನಕಲಿ ಮದುವೆ ಮಾಡಿಸಿ, ಸ್ಟ್ರೋಕ್‌ನಿಂದ ಬಳಲುತ್ತಿದ್ದ ವ್ಯಕ್ತಿ ಬೈಕ್‌ ಹೊಡೆಯಲು ಹೋಗಿ ಅಪಘಾತವಾಗಿದೆ

ಹೊಸಪೇಟೆ: ₹5.25 ಕೋಟಿ ಮೊತ್ತದ ಇನ್ಶುರೆನ್ಸ್‌ ಹಣಕ್ಕಾಗಿ ನಕಲಿ ಮದುವೆ ಮಾಡಿಸಿ, ಸ್ಟ್ರೋಕ್‌ನಿಂದ ಬಳಲುತ್ತಿದ್ದ ವ್ಯಕ್ತಿ ಬೈಕ್‌ ಹೊಡೆಯಲು ಹೋಗಿ ಅಪಘಾತವಾಗಿದೆ ಎಂದು ಕಥೆ ಕಟ್ಟಿ ಕೊಲೆ ಮಾಡಿದ್ದ ಆರು ಮಂದಿಯನ್ನು ಇಲ್ಲಿನ ಪಟ್ಟಣ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಬಳ್ಳಾರಿ ಜಿಲ್ಲೆ ಕಂಪ್ಲಿ ಜಿರಿಗನೂರು ಗ್ರಾಮದ ನಿವಾಸಿ ಕೆ.ಗಂಗಾಧರ (35) ಕೊಲೆಯಾದ ವ್ಯಕ್ತಿ. ಹಿಟ್ ಆ್ಯಂಡ್ ರನ್ ಎಂದು ನಂಬಿಸಿ ಅಮಾಯಕನ ಕೊಲೆ ಮಾಡಲಾಗಿದೆ. ನಗರದ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆಯೇ ತನಿಖೆ ಜಾಡು ಹಿಡಿದ ಪೊಲೀಸರು, ಕೊಪ್ಪಳದ ಹೊಸ ಲಿಂಗಾಪುರದ ರವಿ, ಭಗತ್‌ ಸಿಂಗ್‌ ನಗರದ ಅಜಯ್, ರಿಯಾಜ್, ಹೊಸಪೇಟೆ ಆಕ್ಸಿಸ್ ಬ್ಯಾಂಕ್ ನೌಕರ ಯೋಗರಾಜ್ ಸಿಂಗ್, ಕೊಪ್ಪಳ ಗಂಗಾವತಿ ಬಾಲಕಿಯರ ಪಿಯು ಕಾಲೇಜು ಉಪ ಪ್ರಾಂಶುಪಾಲ ಕೃಷ್ಣಪ್ಪ ಮತ್ತು ನಕಲಿ ಮದುವೆಯಾದ ಭಗತ್‌ ಸಿಂಗ್‌ ನಗರದ ಹುಲಿಗೆಮ್ಮ ಎಂಬ ಮಹಿಳೆ ಸೇರಿ ಆರು ಜನರನ್ನು ಬಂಧಿಸಿದ್ದಾರೆ.

ಆಕ್ಸಿಸ್ ಬ್ಯಾಂಕ್ ನೌಕರ ಯೋಗರಾಜ್ ಸಿಂಗ್ ಈ ಕುಕೃತ್ಯಕ್ಕೆ ಯೋಜನೆ ರೂಪಿಸಿದ್ದು, ಗಂಗಾವತಿ ಬಾಲಕಿಯರ ಪಿಯು ಕಾಲೇಜು ಉಪ ಪ್ರಾಂಶುಪಾಲ ಕೃಷ್ಣಪ್ಪ ಈ ಕೊಲೆ ಮಾಸ್ಟರ್‌ ಮೈಂಡ್‌ ಆಗಿದ್ದ. ಈಗ ಆರು ಜನರನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಎಸ್‌. ಜಾಹ್ನವಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದರು.

ಸೆ.27 ರಂದು ಗಂಗಾಧರನ ಕೊಲೆ ಮಾಡಲಾಗಿದೆ. ಸೆ.28 ರಂದು ಪ್ರಕರಣ ದಾಖಲಾಗಿದ್ದು, 29 ರಂದು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಯೋಗರಾಜ್‌ ಸಿಂಗ್‌ ತನಗೆ ಮೊದಲೇ ಪರಿಚಯವಿದ್ದ ಗಂಗಾಧರನನ್ನು ಪುಸಲಾಯಿಸಿ ಕರೆದೊಯ್ದಿದ್ದ ಎನ್ನಲಾಗಿದೆ.

ಮೃತಪಟ್ಟ ಕೆ.ಗಂಗಾಧರ ಹೆಸರಿನಲ್ಲಿ ವಿವಿಧ ಇನ್ಶುರೆನ್ಸ್‌ ಕಂಪನಿಗಳಲ್ಲಿ ಆರು ವಿಮೆ ಪಾಲಿಸಿಗಳನ್ನು ಮಾಡಿಸಿದ್ದಾರೆ. ಈ ವಿಮೆಗಳ ಹಣವನ್ನು ಆರೋಪಿಗಳೇ ಪಾವತಿಸಿದ್ದಾರೆ. ಜೊತೆಗೆ ಐಟಿ ರಿಟರ್ನ್‌ ಕೂಡ ಈ ಗ್ಯಾಂಗ್‌ ಸಲ್ಲಿಕೆ ಮಾಡಿದೆ. ಗಂಗಾಧರಗೆ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಮಾಡಿ ಈ ಬ್ಯಾಂಕ್‌ ಖಾತೆಯನ್ನು ಆರೋಪಿಗಳು ಹತೋಟಿಗೆ ತೆಗೆದುಕೊಂಡಿದ್ದರು. ಗಂಗಾಧರಗೆ ಮೊದಲೇ ಮದುವೆ ಆಗಿದ್ದರೂ ಹುಲಿಗೆಮ್ಮ ಎಂಬ ಮಹಿಳೆಯೊಂದಿಗೆ ನಕಲಿ ಮದುವೆ ಮಾಡಿಸಿ; ಮದುವೆ ನೋಂದಣಿ ಕೂಡ ಈ ಗ್ಯಾಂಗ್‌ ಮಾಡಿಸಿದೆ. ಗಂಗಾಧರನ ಕೊಲೆ ಮುನ್ನ ದಿನವೇ ಟಿವಿಎಸ್‌ ಎಕ್ಸೆಲ್‌ ಹಳೇ ಬೈಕ್‌ವೊಂದನ್ನು ಖರೀದಿಸಿ ಅದಕ್ಕೆ ಇನ್ಶುರೆನ್ಸ್‌ನ್ನು ಈ ಗ್ಯಾಂಗ್‌ ಮಾಡಿಸಿದೆ ಎಂದು ಎಸ್ಪಿ ಮಾಹಿತಿ ನೀಡಿದರು.

ಸ್ಟ್ರೋಕ್‌ ಆಗಿ ಹಾಸಿಗೆ ಹಿಡಿದಿದ್ದ ಗಂಗಾಧರನನ್ನು ಎಲ್ಲೋ ಕೊಲೆ ಮಾಡಿ ನಗರ ಎಚ್‌ಎಲ್‌ಸಿ ಕಾಲುವೆ ಬಳಿ ಶವ ಬಿಸಾಕಿ ಹಿಟ್ ಆ್ಯಂಡ್ ರನ್ ಆಗಿದೆ ಎಂದು ನಂಬಿಸಲು ಹೋಗಿದ್ದಾರೆ. ತನ್ನ ಗಂಡನಿಗೆ ಸ್ಟ್ರೋಕ್‌ ಹೊಡೆದಿದ್ದು, ಬೈಕ್‌ ಚಲಾಯಿಸಲು ಬರುತ್ತಿರಲಿಲ್ಲ ಎಂದು ಅನುಮಾನ ಬಂದು, ಮೊದಲ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಎಫ್‌ಐಆರ್‌ ದಾಖಲಿಸಿಕೊಂಡ ಪಟ್ಟಣ ಠಾಣೆ ಪೊಲೀಸರು, ಎಸ್ಪಿ ಜಾಹ್ನವಿ, ಎಎಸ್ಪಿ ಮಂಜುನಾಥ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಗಳಾದ ಡಿವೈಎಸ್ಪಿ ಡಾ. ತಳವಾರ ಮಂಜುನಾಥ, ಪಿಐಗಳಾದ ಲಖನ್‌ ಮಸಗುಪ್ಪಿ, ಹುಲುಗಪ್ಪ, ಪಿಎಸ್‌ಐ ಎಸ್‌.ಪಿ. ನಾಯ್ಕ ಸೇರಿದಂತೆ ಮೂರು ತಂಡ ರಚಿಸಿದ್ದರು. ಪ್ರಕರಣ ದಾಖಲಾದ 24 ಗಂಟೆಯಲ್ಲಿ 6 ಆರೋಪಿಗಳನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಪ್ರಕರಣ ಬೆಳಕಿಗೆ ತಂದ ಹೊಸಪೇಟೆ ಪಟ್ಟಣ ಠಾಣೆ ಮತ್ತು ಸಂಚಾರ ಠಾಣೆ ಪೊಲೀಸ್‌ ಸಿಬ್ಬಂದಿಗೆ ಎಸ್ಪಿ ಎಸ್‌. ಜಾಹ್ನವಿ ವಿಶೇಷ ಬಹುಮಾನ ಘೋಷಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಕೆಲಸವನ್ನು ತಲೆಮೇಲೆ ಹೊತ್ತು ಮಾಡುವೆ
ಜಾತಿ ವೈಷಮ್ಯಕ್ಕೆ ಅವಕಾಶವಿಲ್ಲ:ಡಾ. ತೌಫೀಕ್‌ ಪಾರ್ಥನಳ್ಳಿ