)
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಾರತ್ತಹಳ್ಳಿ ಸಮೀಪದ ಖಾಸಗಿ ಆಸ್ಪತ್ರೆಯ ಸ್ವಚ್ಛತಾ ವಿಭಾಗದಲ್ಲಿ ಧಾರವಾಡ ಜಿಲ್ಲೆಯ ಪರಶುರಾಮ್ ಹಾಗೂ ರಾಮು ಕೆಲಸ ಮಾಡುತ್ತಿದ್ದರು. ಆಸ್ಪತ್ರೆಯ ಸಮೀಪದಲ್ಲೇ ಅವರು ಬಾಡಿಗೆ ರೂಮ್‌ನಲ್ಲಿ ನೆಲೆಸಿದ್ದರು. ರೂಮ್‌ನಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಈ ಗೆಳೆಯರು ಗಲಾಟೆ ಮಾಡಿಕೊಳ್ಳುತ್ತಿದ್ದರು. ಅಂತೆಯೇ ಮೇ.10 ರಂದು ರೂಮ್‌ನಲ್ಲಿ ರಾತ್ರಿ ಅವರು ಮದ್ಯ ಸೇವಿಸಿದ್ದರು. ಆಗ ಪರಶುರಾಮ್‌ನ ಮೊಬೈಲ್ ಅನ್ನು ರಾಮು ಬಚ್ಚಿಟ್ಟಿದ್ದ. ತನ್ನ ಮೊಬೈಲ್ ಕೊಡುವಂತೆ ಆತ ಕೇಳಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೋಪಗೊಂಡ ರಾಮು, ಪರಶುರಾಮ್‌ಗೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಗಾಯಾಳುವನ್ನು ಆತನ ಮತ್ತೊಬ್ಬ ಸ್ನೇಹಿತ ಆಸ್ಪತ್ರೆಗೆ ದಾಖಲಿಸಿದ್ದ. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಊರಿಗೆ ಹೋಗಿದ್ದ ಪರಶುರಾಮ್ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದೆ. ತಕ್ಷಣವೇ ಹುಬ್ಬಳ್ಳಿ ನಗರದ ಖಾಸಗಿ ಆಸ್ಪತ್ರೆಗೆ ಆತನನ್ನು ಕುಟುಂಬದವರು ಚಿಕಿತ್ಸೆ ಕರೆದೊಯ್ದಿದ್ದರು. ಆದರೆ ಚಿಕಿತ್ಸೆ ಫಲಿಸದೆ ಪರಶುರಾಮ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.