ರಾಮಕೃಷ್ಣನನ್ನು ಕೊಂದು ಪೊಲೀಸರಿಗೆ ಶರಣಾದ ಆರೋಪಿ ಮಲ್ಲಿಕಾರ್ಜುನ
ತಾಲೂಕಿನ ಸುರಾಪುರ ಗ್ರಾಮದ ಜಮೀನೊಂದರಲ್ಲಿ ಹಳೇ ದ್ವೇಷದಿಂದಾಗಿ ಕುಣಗಳ್ಳಿ, ಸುರಾಪುರ ಸೇರಿ ಹಲವು ಗ್ರಾಮಗಳಲ್ಲಿನ ಅಪರಾಧಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ಪೊಲೀಸ್ ಮಾಹಿತಿದಾರನೋರ್ವನನ್ನು ರಾಡಿನಿಂದ ಹೊಡೆದು ಕೊಲೆಗೈದ ಆರೋಪಿಯು ಅಗರ ಮಾಂಬಳ್ಳಿ ಪೊಲೀಸ್ ಠಾಣೆಗೆ ಶರಣಾಗಿರುವ ಘಟನೆ ಜರುಗಿದೆ.
ಕುಣಗಳ್ಳಿ ಗ್ರಾಮದ ರಾಮಕೃಷ್ಣ(50) ಎಂಬಾತ ಕೊಲೆಯಾದ ವ್ಯಕ್ತಿ. ಅದೇ ಗ್ರಾಮದ ಜೆಸಿಬಿ ಚಾಲಕ ಮಲ್ಲಿಕಾರ್ಜುನಎಂಬಾತ ಕೊಲೆಗೈದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡು ಶರಣಾದ ಆರೋಪಿ.
ಆರೋಪಿ ನಾಡಾ ಬಂದೂಕು ಇರಿಸಿಕೊಂಡಿದ್ದ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿ ಆತನ ಬಂಧನಕ್ಕೂ ಕಾರಣವಾಗಿದ್ದ. ಮಾತ್ರವಲ್ಲ, ಅನೇಕ ಅಪರಾಧ ಪ್ರಕರಣಗಳ ಬಗ್ಗೆಯೂ ಸಹ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಎಂದು ಹೇಳಲಾಗಿದೆ. ಅಲ್ಲದೆ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ನಾನೇ ಆತನ ಬಂಧನಕ್ಕೂ ಕಾರಣವಾಗಿದ್ದೆ ಎಂದು ಹೇಳಿಕೊಂಡಿದ್ದ ಎನ್ನಲಾಗಿದೆ.
ವಿಷಯ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಉಪವಿಭಾಗ ಡಿವೈಎಸ್ಪಿ ಧರ್ಮೇಂದ್ರ, ಯಳಂದೂರು ಸಿಪಿಐ ಸುಬ್ರಹ್ಮಣ್ಯ, ಅಗರ ಮಾಂಬಳ್ಳಿ ಪೊಲೀಸ್ ಠಾಣೆಯ ಎಸ್ಐ ಕರಿಬಸಪ್ಪ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲಿಸಿ, ಮೃತದೇಹವನ್ನು ಚಾ.ನಗರದ ಆಸ್ಪತ್ರೆಗೆ ರವಾನಿಸಿದರು.