ಮಂಡಕ್ಕಿ ಭಟ್ಟಿ-ಬೇತೂರು ರಿಂಗ್‌ರಸ್ತೆ ಅವ್ಯವಸ್ಥೆಯ ಆಗರ

KannadaprabhaNewsNetwork | Published : Jun 8, 2024 12:35 AM

ಸಾರಾಂಶ

ಮಂಡಕ್ಕಿ ಭಟ್ಟಿಯಿಂದ ಬೇತೂರು ಗ್ರಾಮದ ಹಳ್ಳದ ಕಡೆಗೆ ಸಾಗುವ ರಸ್ತೆಯ ಅಕ್ಕ-ಪಕ್ಕ ಪ್ರಾಣಿವಧೆ, ಎಲ್ಲೆಂದರಲ್ಲಿ ಸತ್ತ ಪ್ರಾಣಿಗಳ ಕಳೇಬರ ಕಾಣ ಸಿಗುತ್ತವೆ. ಈ ರಸ್ತೆಯಲ್ಲಿ ಹಾದು ಹೋಗುವಾಗ ಪ್ರಯಾಣಿಕರಿಗೆ ನರಕ ದರ್ಶನವಾಗುತ್ತದೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಜಿಲ್ಲಾ ಕೇಂದ್ರದ ವರ್ತುಲ ರಸ್ತೆಯ ಮಂಡಕ್ಕಿ ಭಟ್ಟಿಯಿಂದ ಬೇತೂರು ಗ್ರಾಮದ ಹಳ್ಳದ ಕಡೆಗೆ ಸಾಗುವ ರಸ್ತೆಯು ಅವ್ಯವಸ್ಥೆಯ ಆಗರವಾಗಿದ್ದು, ಎಗ್ಗಿಲ್ಲದೇ ಕಸದ ರಾಶಿ ಸುರಿಯುವ ಜೊತೆಗೆ ಅಕ್ರಮ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ ತಾಣವಾಗಿ ಮಾರ್ಪಡುತ್ತಿದೆ.

ನಗರದ ಮಂಡಕ್ಕಿ ಭಟ್ಟಿ ಲೇಔಟ್‌ನ್ನು ಹಾದು ಹೊರ ವಲಯದ ಬೇತೂರು ರಸ್ತೆವರೆಗೆ ಸಾಗುವ ವರ್ತುಲ ರಸ್ತೆಯಂತೂ ಅಕ್ಷರಶಃ ನರಕದ ಹಾದಿಯಂತೆ ಭಾಸವಾಗುತ್ತಿದೆ. ವರ್ತುಲ ರಸ್ತೆಯ ಇಕ್ಕೆಲಗಳಲ್ಲಿ ಕೆಡವಿದ ಮನೆ, ಕಟ್ಟಡಗಳ ಅವಶೇಷಗಳ ಲೋಡ್‌ಗಳನ್ನು ಹಗಲಿರುಳು ತಂದು ಸುರಿಯುವ ಮೂಲಕ ಪಾಲಿಕೆಗೆ ಮತ್ತಷ್ಟು ಆರ್ಥಿಕ ಹೊರೆ ಜೊತೆಗೆ ಪರಿಸರಕ್ಕೂ ಹಾನಿ ಮಾಡಲಾಗುತ್ತಿದೆ.

ವರ್ತುಲ ರಸ್ತೆಯು ಸಂಪರ್ಕ ಕಲ್ಪಿಸುವ ಮಂಡಕ್ಕಿ ಭಟ್ಟಿ-ಬೇತೂರು ಗ್ರಾಮಗಳ ಹಳ್ಳದವರೆಗೆ ಸಾಗುವ ಮಾರ್ಗದ ಖಾಸಗಿ ಲೇಔಟ್‌ಗಳಲ್ಲಿ ಜಾಲಿ ಮರ, ಮುಳ್ಳು ಗಿಡಗಂಟೆಗಳು ಅಪಾರವಾಗಿ ಬೆಳೆದಿದ್ದು, ಸಂಜೆ, ರಾತ್ರಿ ವೇಳೆ ಹಾಗೂ ಹಗಲು ಹೊತ್ತಿನಲ್ಲೇ ಯಾರೂ ಸಹ ಒಬ್ಬಂಟಿಯಾಗಿ ಸಾಗಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆಯೆಂಬ ಮಾತುಗಳು ಕೇಳಿ ಬರುತ್ತಿವೆ.

ನಿತ್ಯವೂ ಲೋಡ್‌ ಗಟ್ಟಲೇ ಮನೆ, ಕಟ್ಟಡಗಳ ತ್ಯಾಜ್ಯ, ಮಾಂಸದಂಗಡಿಗಳ ತ್ಯಾಜ್ಯ, ಕೋಳಿ ಮಾಂಸದಂಗಡಿ ತ್ಯಾಜ್ಯ, ಹೊಟೆಲ್‌, ಇತರೆ ತಿನಿಸುಗಳ ವ್ಯರ್ಥ ಪದಾರ್ಥ ತಂದು ಸುರಿಯಲಾಗುತ್ತಿದೆ. ಅಲ್ಲದೇ. ಇದೇ ರಸ್ತೆಯ ನಿರ್ಜನ ಪ್ರದೇಶದಲ್ಲಿ ಪ್ರಾಣಿಗಳನ್ನು ಕೊಯ್ದು, ಮಾಂಸ ಮಾತ್ರ ಒಯ್ದು, ಉಳಿದ ಭಾಗಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಿದ್ದಾರೆ. ಇದರಿಂದಾಗಿ ಬೀದಿ ನಾಯಿಗಳ ಹಾವಳಿಯೂ ಅಲ್ಲಿ ಮಿತಿ ಮೀರುವಂತಿದೆ. ಹೀಗೆ ಸತ್ತ ಪ್ರಾಣಿಗಳ ಮಾಂಸದ ರುಚಿ ಕಂಡ ನಾಯಿಗಳ ಹಿಂಡು ಒಬ್ಬಂಟಿಯಾಗಿ ಸಾಗುವವರು, ದಾರಿಹೋಕರ ಮೇಲೆ ದಾಳಿ ಮಾಡುವುದಿಲ್ಲ ಎನ್ನವುದಕ್ಕೆ ಏನು ಗ್ಯಾರಂಟಿ ಎಂಬುದು ಜನರ ಪ್ರಶ್ನೆ.

ಸತ್ತ ಹಂದಿ, ನಾಯಿಗಳು, ದನ ಕರುಗಳು, ಕೋಳಿಗಳನ್ನು ಇಲ್ಲಿ ಬಿಸಾಡಲಾಗುತ್ತಿದೆ. ಇಡೀ ವರ್ತುಲ ರಸ್ತೆಯಲ್ಲಿ ಸಾಗುತ್ತಿದ್ದರೆ ವಿದ್ಯಾನಗರಿ, ಸ್ಮಾರ್ಟ್ ಸಿಟಿ ಅಂದೆಲ್ಲಾ ಬಿರುದು ಬಾವಲಿಗಳನ್ನೆಲ್ಲಾ ಮುಡಿಗೇರಿಸಿಕೊಂಡಿರುವ ದಾವಣಗೆರೆ ಜಿಲ್ಲಾ ಕೇಂದ್ರದ ಮತ್ತೊಂದು ಮುಖದ ದರ್ಶನವಾಗುತ್ತದೆ. ಪರಿಸರ ಅಧಿಕಾರಿಗಳು, ಪಾಲಿಕೆ ಅಧಿಕಾರಿಗಳು, ಬೇತೂರು ಗ್ರಾಪಂ ಅಧಿಕಾರಿಗಳು ಇದಕ್ಕೂ ತಮಗೆ ಯಾವುದೇ ಸಂಬಂಧ ಇಲ್ಲದೇ ಕೈತೊಳೆದು ಕುಳಿತಿದ್ದಾರೆ. ಹಿಂದೆ ವರ್ತುಲ ರಸ್ತೆ ನಿರ್ಮಿಸಿದ್ದಷ್ಟೇ. ಮತ್ತೆ ಅಲ್ಲಿ ಏನಾಗುತ್ತಿದೆ ಯೆಂಬ ಪರಿವೆಯಾಗಲೀ, ಕಾಳಜಿಯಾಗಲೀ ಯಾವೊಬ್ಬ ಅಧಿಕಾರಿಗಳಿಗೂ ಇಲ್ಲ ಎಂಬ ಅಸಮಾಧಾನ ಜನರದ್ದು.

ಇದೇ ವರ್ತುಲ ರಸ್ತೆಯಲ್ಲಿ ಅಕ್ರಮ ರೀಫಿಲ್ಲಿಂಗ್‌, ಪರಿಸರಕ್ಕೆ ಮಾರಕ ಕೃತ್ಯ ನಡೆಯುತ್ತಲೇ ಇದೆ. ಮಾಂಸದಂಗಡಿಗಳ ತ್ಯಾಜ್ಯವನ್ನೂ ಇಲ್ಲಿ ಸುರಿಯಲಾಗುತ್ತಿದೆ. ಪ್ರತಿ ದಿನ ಹಳೆಯ ಟೈಯರ್‌ಗಳನ್ನು ರಾಶಿ ರಾಶಿಯಾಗಿ ತಂದು, ಇಲ್ಲಿ ರಸ್ತೆಯಲ್ಲೇ ಸುಡಲಾಗುತ್ತಿದೆ. ಹೀಗೆ ಟೈಯರ್‌ಗಳನ್ನು ಸುಡುವುದು ಪರಿಸರಕ್ಕೆ, ಜನಾರೋಗ್ಯಕ್ಕೆ ಮಾರಕವಾದರೂ ಯಾರಿಗೂ ಚಿಂತೆ ಇಲ್ಲ. ಹೀಗೆ ಸುಟ್ಟ ಟೈಯರ್‌ಗಳಿಂದ ಕಪ್ಪು ಬೂದಿಯಲ್ಲಿ ಸಿಗುವ ಕಬ್ಬಿಣದ ತಂತಿಗಾಗಿ ಇಷ್ಟೆಲ್ಲಾ ಪರಿಸರಕ್ಕೆ ಕೇಡು ಬಗೆಯಲಾಗುತ್ತಿದೆ. ಎಲೆಕ್ಟ್ರಿಕ್ ವೈಯರ್‌ ಗಳನ್ನೂ ಸುಡಲಾಗುತ್ತದೆ. ಟೈಯರ್‌, ವೈಯರ್‌ ಸುಟ್ಟ ನಂತರ ಸಿಗುವ ಕಾಪರ್‌, ಸಿಲ್ವರ್‌ ತಂತಿ, ಕಬ್ಬಿಣದ ತಂತಿಗಳನ್ನು ಸಂಗ್ರಹಿಸಿಟ್ಟು, ಮಾರಿಕೊಳ್ಳುವವರ ಸಂಖ್ಯೆ ಕಡಿಮೆ ಇಲ್ಲ. ಆದರೆ, ಪರಿಸರ ಅಧಿಕಾರಿಗಳು, ಇನ್ನು ಖಾಸಲಿ ಲೇಔಟ್‌ನಲ್ಲಿ ನಿವೇಶನಗಳನ್ನು ಮಾಡಿ, ಪಾರ್ಕ್‌ ಜಾಗಕ್ಕೆಂದು ಹಾಕಿದ್ದ ಕಬ್ಬಿಣದ ಗ್ರಿಲ್‌ಗಳನ್ನೇ ಕಳವು ಮಾಡಲಾಗಿದೆ. ಪಾರ್ಕ್‌ಗೆ ಮೀಸಲಿಟ್ಟ ಜಾಗಕ್ಕೆ ಅಳವಡಿಸಿದ್ದ ಕಬ್ಬಿಣದ ತಡೆಗೋಡೆಗಳನ್ನು ಒಂದು ತುಂಡು ಸಹ ಬಿಡದಂತೆ ಕಿತ್ತುಕೊಂಡು ಹೋಗಿದ್ದಾರೆಂದರೆ ಏನು ಮಾಡಬೇಕೆಂಬ ಪ್ರಶ್ನೆ ಸಹಜವಾಗಿದೆ. ಮೊದಲು ಗ್ರಾಪಂ, ದೂಡಾ ಹಾಗೂ ಪಾಲಿಕೆ ಅಧಿಕಾರಿಗಳು ರಸ್ತೆಯ ಇಕ್ಕೆಲಗಳಲ್ಲಿ ಬೆಳೆದ ಗಿಡ ಗಂಟೆಗಳನ್ನು ತೆರವು ಮಾಡಿಸಲಿ. ಗುಂಡಿ ಆಗಿರುವ ಕಡೆ ದುರಸ್ಥಿ ಮಾಡಿಸಿ, ವಾಹನಗಳ ಸಂಚಾರಕ್ಕೆ ಅನುವು ಮಾಡಲಿ. ರಸ್ತೆ ಬಳಕೆಯಾ ಗುತ್ತಿದ್ದರೆ ಇಂತಹದ್ದಕ್ಕೆಲ್ಲಾ ಬ್ರೇಕ್ ಬೀಳುತ್ತದೆ ಎಂಬ ಸಲಹೆ ಜನರದ್ದು.

Share this article