ಹೆಣ್ಣು ಮಕ್ಕಳಿಗೆ ಧ್ವನಿಯಿಲ್ಲದ ಕಾಲವೊಂದಿತ್ತು. ಹೆಣ್ಣು ಹುಟ್ಟಿದರೇ ಹೊನ್ನ ಹುಟ್ಟಿದ ಭಾವವಾಗಿ ಈಗ ಕಾಲ ಬದಲಾಗುತ್ತಿದೆ. ಭಾರತದಲ್ಲಿ ಯಾವಾಗಲೂ ಹೆಣ್ಣಿಗೆ ಗೌರವ ಇದೆ ಎಂದು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಇಂಡಿ
ಹೆಣ್ಣು ಮಕ್ಕಳಿಗೆ ಧ್ವನಿಯಿಲ್ಲದ ಕಾಲವೊಂದಿತ್ತು. ಹೆಣ್ಣು ಹುಟ್ಟಿದರೇ ಹೊನ್ನ ಹುಟ್ಟಿದ ಭಾವವಾಗಿ ಈಗ ಕಾಲ ಬದಲಾಗುತ್ತಿದೆ. ಭಾರತದಲ್ಲಿ ಯಾವಾಗಲೂ ಹೆಣ್ಣಿಗೆ ಗೌರವ ಇದೆ ಎಂದು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ನಗರದ ಸ್ಪಂದನಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆವರಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತವಾಗಿ ಹೆಣ್ಮಗು ಜನಿಸಿದರೆ ಹೆರಿಗೆ, ಚಿಕಿತ್ಸೆ ಉಚಿತ ಕಾರ್ಯಕ್ಕೆ ಚಾಲನೆ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಮಗು ಜನಿಸಿದರೇ ಹುಣ್ಣು ಹುಟ್ಟಿದಂತೆ ಎನ್ನುವ ಕಾಲವಿತ್ತು, ಈಗ ಹಾಗಿಲ್ಲ. ಹೆಣ್ಮಗು ಜನಿಸಿದರೇ ಹೊನ್ನ ಸಿಕ್ಕಂತೆ ಬಿಂಬಿತವಾಗಿದೆ. ಲಿಂಗ ಭೇದಷ್ಟೆ ಅಲ್ಲದೇ ಎಲ್ಲ ರಂಗದಲ್ಲಿಯೂ ಸಮಾನತೆ ಕಂಡಿರುವ ಬಸವಣ್ಣನವರು ಜನಿಸಿದ ನಾಡು ನಮ್ಮದು. 12ನೇ ಶತಮಾನದಲ್ಲಿ ಬಸವಣ್ಣನವರು ಕೂಡಾ ಹೆಣ್ಣಿಗೆ ಈ ಸಮಾಜದಲ್ಲಿ ಸಮಾನತೆ ಸ್ವಾತಂತ್ರ್ಯ ಇದೆ ಎಂದು ಪ್ರತಿಪಾದಿಸಿ, ನ್ಯಾಯ ದೊರಕಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.ಮುಂದುವರೆದ ರಾಷ್ಟ್ರಗಳನ್ನು ಗಮನಿಸಿದರೇ ಪ್ರೀತಿ, ವಿಶ್ವಾಸ ನಮ್ಮ ದೇಶದಲ್ಲಿ ಕಾಣುತ್ತಿವೆ ಎಂಬುವುದು ಹೆಮ್ಮೆಯ ಸಂಗತಿ. ಹಲವು ಜನ ಮಹಿಳೆಯರು ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ. ಮಹಿಳಾ ದಿನಾಚರಣೆಯಂದು ವೈದ್ಯಕೀಯ ಲೋಕದಲ್ಲಿ ಕೆಲಸ ಮಾಡುವವರು ಹಾಗೂ ಕುಟುಂಬದವರು ಹೆಣ್ಣು ಭ್ರೂಣ ಹತ್ಯೆ ಮಾಡುವುದಿಲ್ಲ ಎಂಬ ಆತ್ಮಸಾಕ್ಷಿಯಾಗಿ ದೃಢಸಂಕಲ್ಪ ಮಾಡಬೇಕು. ಅದು ಶ್ರೇಷ್ಠ ಕೆಲಸ. ಭ್ರೂಣ ಹತ್ಯೆ ತುಂಬಾ ಅಪರಾಧ. ಅದಕ್ಕೆ ಎಲ್ಲಿಯೂ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.ಡಾ.ಪ್ರೀತಿ ಕೊಳೆಕರ ಮಾತನಾಡಿ, ಹೆಣ್ಣು ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಮುಂದೆ ಬರಬೇಕು. ಹೆಣ್ಣಿನ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಭ್ರೂಣ ಹತ್ಯೆ, ಅನಕ್ಷರತೆ, ಕಿರುಕುಳ, ತಾರತಮ್ಯ, ಅವಮಾನ, ಅಗೌರವ, ಅತ್ಯಾಚಾರ ಮೊದಲಾದ ಅನ್ಯಾಯಗಳು ಹತೋಟಿಗೆ ಬರಬೇಕಾದರೆ ಅವಳಿಗೆ ಬಾಲ್ಯದಿಂದಲೇ ತನ್ನ ಅಧಿಕಾರ, ಹಕ್ಕುಗಳ ಅರಿವಿರಬೇಕಾಗುತ್ತದೆ. ಈ ಅರಿವು ಮೂಡಿಸುವ ಜವಾಬ್ದಾರಿ ಪೋಷಕರದ್ದು ಎಂದರು.ಸ್ಪಂದನಾ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಲಕ್ಷ್ಮೀಕಾಂತ ಮೇತ್ರಿ ಮಾತನಾಡಿ, ಸ್ಪಂದನಾ ಆಸ್ಪತ್ರೆಯ ಎಲ್ಲ ತರಹದ ಚಿಕಿತ್ಸೆ ಇದ್ದು, ಇದರ ಸದುಪಯೋಗ ಇಂಡಿ ತಾಲೂಕಿನ ಜನರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಗುರುಣಾಪೂರ ಆಶ್ರಮದ ಯೋಗೇಶ್ವರಿ ಅಮ್ಮನವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿ, ಹೆಣ್ಣು ಮಗು ಕುಟುಂಬದ ಹೆಮ್ಮೆ ಮತ್ತು ಬೆಳಕು. ಅವಳ ರಕ್ಷಣೆ, ಶಿಕ್ಷಣ ಮತ್ತು ಸಮಾನ ಹಕ್ಕುಗಳು ಅತ್ಯಂತ ಮುಖ್ಯ. ಪೋಷಕರು ಹೆಣ್ಣು ಮಕ್ಕಳಿಗೆ ಆರ್ಥಿಕ ಸ್ವಾತಂತ್ರ್ಯ ಮತ್ತು ಆತ್ಮವಿಶ್ವಾಸ ಬೆಳೆಸಬೇಕು. ಹೆಣ್ಣು ಮಗು ನಮಗೆ ಅತ್ಯಂತ ಅಮೂಲ್ಯವಾಗಿದೆ. ಇಂಡಿ ನಗರದಲ್ಲಿರುವ ಸ್ಪಂದನಾ ಆಸ್ಪತ್ರೆಯವರು ಆಸ್ಪತ್ರೆಯಲ್ಲಿ ಬಂದ ಗರ್ಭಿಣಿಯರ ಹೆರಿಗೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರೆ ಉಚಿತವಾಗಿ ಹೆರಿಗೆ, ಚಿಕಿತ್ಸೆ ಮಾಡಿಕೊಳ್ಳಲಾಗುವುದು ಹಾಗೂ ಆ ಹೆರಿಗೆ ಸಹಜವಾಗಿಯೇ ಆಗಿರಲಿ ಅಥವಾ ಸೀಜರಿಂಗ್ ಆಗಲ್ಲಿ ಉಚಿತವಾಗಿರುತ್ತದೆ ಎಂಬ ಸಮಾಜಮುಖಿ ನಿರ್ಣಯ ಕೈಗೊಂಡಿರುವುದು ಶ್ಲಾಘನೀಯ ಎಂದು ತಿಳಿಸಿದರು.ಸ್ಪಂದನಾ ಆಸ್ಪತ್ರೆ ಆಡಳಿತ ಮಂಡಳಿ ಅಧ್ಯಕ್ಷ ಭೀಮಾಶಂಕರ ಮುರಗುಂಡಿ ಮಾತನಾಡಿದರು. ಈ ಸಂದರ್ಭದಲ್ಲಿ ರಾಜೇಶ್ವರಿ ಕ್ಷತ್ರಿ, ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಅಜೀತ ಧನಶೆಟ್ಟಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ರಾವೂರ, ಸರ್ಕಾರಿ ಆರೋಗ್ಯ ವೈದ್ಯಾಧಿಕಾರಿ ಡಾ.ರಾಜೇಶ ಕೋಳೆಕರ, ಡಾ.ಐಶ್ವರ್ಯ ಹೊನವಾಡ.ಡಾ.ರಮೇಶ ಪೂಜಾರಿ, ಡಾ.ಮಯೂರಿ ಧನಶೆಟ್ಟಿ, ಸಂಗಮೇಶ ಕಕ್ಕಳಮೇಲಿ, ಯಾಸಿನ್ ಅರಬ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಮಹಿಳೆಯರನ್ನು ಗೌರವದಿಂದ ಕಾಣುವ ಸಂಸ್ಕೃತಿ ಭಾರತೀಯರದ್ದು, ನಮ್ಮ ಪೂರ್ವಜ್ಜರು ಈ ಸಂಸ್ಕೃತಿ ನೀಡಿದ್ದಾರೆ. ತಾಯಿ, ತಂಗಿ, ಮಡದಿಯಾಗಿ ಕಾಣುತ್ತೇವೆ. ತಾಯಿಯಾದವಳು ಒಂದು ಮನೆಯಲ್ಲಿ ಜನಿಸಿ, ಇನ್ನೊಂದು ಮನೆ ಬೆಳಗುತ್ತಾಳೆ ಎಂದರೇ ಅವಳಲ್ಲಿ ಎಷ್ಟು ಶಕ್ತಿ, ತಾಳ್ಮೆ, ತ್ಯಾಗದ ಭಾವನೆ ಇದೆ. ಅದಕ್ಕಾಗಿಯೇ ನಾವೆಲ್ಲ ಮಹಿಳೆಯರನ್ನು ವಿಶೇಷವಾಗಿ ಗೌರವಿಸುವ ಸಂಸ್ಕೃತಿ ಹೊಂದಿದವರಾಗಿದ್ದೇವೆ.
-ಯಶವಂತರಾಯಗೌಡ ಪಾಟೀಲ, ಶಾಸಕರು.