ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ಯಾನ್ಸರ್‌ ಕುರಿತಾದ ಮೂಲಭೂತ ಜಾಗೃತಿ ಹಾಗೂ ಕ್ಯಾನ್ಸರ್‌ ಪತ್ತೆ ಹಚ್ಚುವ ಮಹತ್ವದ ಅರಿವು ಉತ್ತಮ ಮಟ್ಟದಲ್ಲಿದ್ದರೂ, ನಿಯಮಿತವಾಗಿ ಕ್ಯಾನ್ಸರ್‌ ತಪಾಸಣೆಗೆ ಒಳಗಾಗುವವರು ಶೇ.15ಕ್ಕಿಂತ ಕಡಿಮೆ!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ಯಾನ್ಸರ್‌ ಕುರಿತಾದ ಮೂಲಭೂತ ಜಾಗೃತಿ ಹಾಗೂ ಕ್ಯಾನ್ಸರ್‌ ಪತ್ತೆ ಹಚ್ಚುವ ಮಹತ್ವದ ಅರಿವು ಉತ್ತಮ ಮಟ್ಟದಲ್ಲಿದ್ದರೂ, ನಿಯಮಿತವಾಗಿ ಕ್ಯಾನ್ಸರ್‌ ತಪಾಸಣೆಗೆ ಒಳಗಾಗುವವರು ಶೇ.15ಕ್ಕಿಂತ ಕಡಿಮೆ!ಸಂಜೀವಿನಿ ಕ್ಯಾನ್ಸರ್‌ ಸೇವಾ ಟ್ರಸ್ಟ್‌, ಮಂಗಳೂರು ಇನ್ಸ್ಟಿಟ್ಯೂಟ್‌ ಆಫ್‌ ಆಂಕಾಲಜಿ (ಎಂಐಒ) ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 10 ಸಾವಿರ ಮಂದಿಯನ್ನೊಳಗೊಂಡ ಸಮೀಕ್ಷಾ ವರದಿಯ ಫಲಿತಾಂಶ ಇದು. ಈ ವರದಿಯ ಪುಸ್ತಕ ಬಿಡುಗಡೆ ಸಮಾರಂಭ ಮಂಗಳೂರು ಇನ್ಸ್ಟಿಟ್ಯೂಟ್‌ ಆಫ್‌ ಆಂಕಾಲಜಿಯಲ್ಲಿ ಶನಿವಾರ ನಡೆಯಿತು.

ಸಮೀಕ್ಷೆಯ ಫಲಿತಾಂಶಗಳ ಕುರಿತು ಮಾತನಾಡಿದ ಸಂಸ್ಥೆಯ ನಿರ್ದೇಶಕ ಡಾ.ಸುರೇಶ್‌ ರಾವ್‌, ಕ್ಯಾನ್ಸರ್‌ ಜಾಗೃತಿಯ ಕುರಿತು 10 ಸಾವಿರಕ್ಕೂ ಅಧಿಕ ಮನೆಗಳಿಗೆ ತೆರಳಿ 20 ಪ್ರಶ್ನೆಗಳಿರುವ ಪಶ್ನಾವಳಿಗೆ ಉತ್ತರ ಪಡೆಯಲಾಯಿತು. ಸಮೀಕ್ಷೆಯಲ್ಲಿ, ಶೇ.90ಕ್ಕಿಂತ ಹೆಚ್ಚು ಮಂದಿ ತಂಬಾಕು ಸೇವನೆಯು ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂಬುದನ್ನು ಅರಿತುಕೊಂಡಿದ್ದಾರೆ. ಅಲ್ಲದೆ, ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಕ್ಯಾನ್ಸರ್‌ ಚಿಕಿತ್ಸೆ ಹೆಚ್ಚು ಫಲಕಾರಿ ಎಂಬುದನ್ನೂ ತಿಳಿದುಕೊಂಡಿದ್ದಾರೆ. ಇಷ್ಟು ಜಾಗೃತಿ ಇದ್ದರೂ ಕ್ಯಾನ್ಸರ್‌ ತಪಾಸಣೆ ಮಾಡುವವರ ಪ್ರಮಾಣ ಅತಿ ಕಡಿಮೆ ಪ್ರಮಾಣದಲ್ಲಿರುವುದು ಆತಂಕಕಾರಿ ವಿಷಯ ಎಂದು ಹೇಳಿದರು.

ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಗರ್ಭಕಂಠದ ಕ್ಯಾನ್ಸರ್‌ ಸೇರಿದಂತೆ ಕೆಲವು ಗಂಟಲು ಕ್ಯಾನ್ಸರ್‌ ತಡೆಗಟ್ಟಲು ಸಹಾಯಕವಾಗುವ ಎಚ್‌ಪಿವಿ ಲಸಿಕೆ ಕುರಿತು ಜನರ ಅರಿವು ಮಧ್ಯಮ ಮಟ್ಟದಲ್ಲಿದೆ. ಅನೇಕರು ಗಂಭೀರ ಹಂತದ ರೋಗ ಲಕ್ಷಣಗಳು ಕಾಣಿಸಿಕೊಂಡ ಬಳಿಕವೇ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸಬ್ಸಿಡಿ ಆಧಾರಿತ ಕ್ಯಾನ್ಸರ್‌ ತಪಾಸಣಾ ಶಿಬಿರಗಳು, ಭಯ ನಿವಾರಣೆ ಮಾಡುವ ಸಲಹಾ ಸೇವೆಗಳು, ಎಚ್‌ಪಿವಿ ಲಸಿಕೆ ಜಾಗೃತಿ ಅಭಿಯಾನ ಇತ್ಯಾದಿಗಳನ್ನು ಕಾರ್ಯರೂಪಕ್ಕೆ ತಂದರೆ ಕೊನೆ ಹಂತದಲ್ಲಿ ಕ್ಯಾನ್ಸರ್‌ ಪತ್ತೆ ಹಚ್ಚುವ ಪ್ರಕರಣಗಳ ಸಂಖ್ಯೆ ಇಳಿಮುಖವಾಗಬಹುದು ಎಂದು ಡಾ.ಸುರೇಶ್‌ ರಾವ್‌ ಅಭಿಪ್ರಾಯಪಟ್ಟರು.

ಪುಸ್ತಕ ಬಿಡುಗಡೆಗೊಳಿಸಿದ ವಿಧಾನ ಪರಿಷತ್‌ ಶಾಸಕ ಐವನ್ ಡಿಸೋಜ ಮಾತನಾಡಿ, ಭಾರತದಲ್ಲಿ ಕ್ಯಾನ್ಸರ್‌ ವೇಗವಾಗಿ ಬೆಳೆಯುತ್ತಿದ್ದು, ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆಯುವಂತೆ ಮಾಡುವ ಅಗತ್ಯವಿದೆ. ಈ ಸಮೀಕ್ಷಾ ವರದಿಯ ಫಲಿತಾಂಶಗಳ ಕುರಿತು ವಿಧಾನ ಮಂಡಲ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.

ದಾಯ್ಜಿವರ್ಲ್ಡ್‌ ಸಂಸ್ಥಾಪಕ ವಾಲ್ಟರ್‌ ನಂದಳಿಕೆ, ಎಂಐಒ ನಿರ್ದೇಶಕರಾದ ಡಾ.ರೋಹನ್‌ಚಂದ್ರ ಗಟ್ಟಿ, ಡಾ.ಜಲಾಲುದ್ದೀನ್‌ ಅಕ್ಬರ್‌, ಸಂಜೀವಿನಿ ಕ್ಯಾನ್ಸರ್‌ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಡಾ.ವೆಂಕಟರಮಣ ಕಿಣಿ ಮತ್ತಿತರರಿದ್ದರು.