ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯ ವೈದ್ಯಕೀಯ ಪ್ರಕೋಷ್ಠದ ಸಹ ಸಂಚಾಲಕ ಡಾ. ಸದಾನಂದ್ ಅವರ ನೇತೃತ್ವದಲ್ಲಿ ಮಿಮ್ಸ್‌ನ ವೈದ್ಯಕೀಯ ಅಧೀಕ್ಷಕರ ಕಚೇರಿ ಬಳಿ ಸೇರಿದ ಕಾರ್ಯಕರ್ತರು ರಾಜ್ಯಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ನಂತರ ಮಾತನಾಡಿದ ಅವರು, ದೇಶಾದ್ಯಂತ ಮಾದರಿಯಾಗಿ ಹೊರಹೊಮ್ಮಿರುವ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳು ಕಡಿಮೆ ವೆಚ್ಚದಲ್ಲಿ ಲಕ್ಷಾಂತರ ಜನರಿಗೆ ಉತ್ತಮ ಗುಣಮಟ್ಟದ ಔಷಧವನ್ನು ಒದಗಿಸುತ್ತಿವೆ. ಕರ್ನಾಟಕದಲ್ಲಿಯೂ ನೂರಾರು ಜನೌಷಧ ಕೇಂದ್ರಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಇಲಾಖೆಯು ಕುಂಟು ನೆಪ ಹೇಳಿ ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು ೨೦೦ಕ್ಕೂ ಹೆಚ್ಚು ಜನೌಷಧ ಕೇಂದ್ರಗಳನ್ನು ಮುಚ್ಚಿಸುವ ಮೂಲಕ ಬಡವರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.ಈ ಕೇಂದ್ರಗಳು ಉದ್ಯೋಗ ಸೃಷ್ಟಿಯಲ್ಲೂ ಮಹತ್ವದ ಪಾತ್ರ ವಹಿಸಿವೆ. ಜನೌಷಧ ಕೇಂದ್ರಗಳನ್ನು ನಡೆಸುವ ಮೂಲಕ ಅನೇಕರು ಸ್ವಯಂ ಉದ್ಯೋಗಿಗಳಾಗಿದ್ದು, ಇತರರಿಗೂ ಕೆಲಸ ನೀಡುವ ಮೂಲಕ ಆರ್ಥಿಕತೆಗೆ ಕೊಡುಗೆ ನೀಡಿದ್ದಾರೆ. ಸರ್ಕಾರದ ಈ ನಿರ್ಧಾರವು ನೂರಾರು ಕುಟುಂಬಗಳ ಭವಿಷ್ಯದ ಮೇಲೆ ಕರಿ ನೆರಳು ಬೀರಲಿದೆ. ಇದು ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನಿಲುವಿಗೆ ಸ್ಪಷ್ಟ ನಿದರ್ಶನ ಎಂದು ಆರೋಪಿಸಿದರು.
ಜನೌಷಧ ಕೇಂದ್ರಗಳು ಬಡವರ ಪಾಲಿನ ವರದಾನ. ಆದರೆ ಬಡವರ ಆರೋಗ್ಯದಲ್ಲೂ ರಾಜಕೀಯ ಮಾಡುವ ಈ ಭ್ರಷ್ಟ ಕರ್ನಾಟಕ ಕಾಂಗ್ರೆಸ್‌ಗೆ ಜನರೇ ಬುದ್ದಿ ಕಲಿಸುವ ದಿನ ದೂರವಿಲ್ಲ. ರಾಜ್ಯ ಸರ್ಕಾರವು ಕಾಣದ ಕೈಗಳ ಹಿತಾಸಕ್ತಿಗಾಗಿ ಈ ರೀತಿಯ ನಿರ್ಧಾರ ಕೈಗೊಂಡಿರುವುದು ಅನುಮಾನ ಮೂಡಿಸಿದೆ . ಜನೌಷಧ ಕೇಂದ್ರಗಳನ್ನು ಮುಚ್ಚುವ ಕಾಂಗ್ರೆಸ್ ಸರ್ಕಾರದ ಈ ಬಡ ವಿರೋಧಿ ನಿರ್ಧಾರವನ್ನು ಬಲವಾಗಿ ವಿರೋಧಿಸುತ್ತೇವೆ. ಹೀಗಾಗಿ ಸಿದ್ದರಾಮಯ್ಯ ಸರ್ಕಾರ ಈ ಆದೇಶ ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಎಚ್.ಆರ್.ಅರವಿಂದ್, ಸಿ.ಟಿ. ಮಂಜುನಾಥ್, ವಸಂತ್ ಕುಮಾರ್, ನರಸಿಂಹಾಚಾರಿ, ಹರ್ಷ, ಆನಂದ, ಶಿವು, ಸಿದ್ದರಾಜುಗೌಡ, ನಾಗಾನಂದ, ನಿತ್ಯಾನಂದ, ಶಿವಕುಮಾರ ಆರಾಧ್ಯ, ಹನುಮಂತು, ಮಹಾಂತಪ್ಪ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.