ಮಂಡ್ಯ ಜಿಲ್ಲಾ ಗೃಹರಕ್ಷಕ ದಳದ ಸಿಬ್ಬಂದಿ ತರಬೇತೀಲಿ ನಂಗನಾಚ್ ಆರೋಪ

KannadaprabhaNewsNetwork |  
Published : Jun 19, 2025, 11:49 PM IST
16ಕೆಎಂಎನ್ ಡಿ18 | Kannada Prabha

ಸಾರಾಂಶ

ಪಾಂಡವಪುರ ತಾಲೂಕಿನ ಕುಂತಿಬೆಟ್ಟದಲ್ಲಿ ಗೃಹ ರಕ್ಷಕ ದಳದ 10 ದಿನದ ತರಬೇತಿ ಶಿಬಿರದಲ್ಲಿ ತರಬೇತಿಯಲ್ಲಿ ಭಾಗವಹಿಸಿದ್ದ ಗೃಹರಕ್ಷಕ ಹಾಗೂ ಗೃಹರಕ್ಷಕಿಯರು ಮದ್ಯ ಸೇವನೆ ಮಾಡುತ್ತಾ ಅಶ್ಲೀಲವಾಗಿ ಮಾತನಾಡುತ್ತಾ ಹಾಡು ಹಾಕಿಕೊಂಡು ಸಿಳ್ಳೆ, ಕಿರುಚಾಟ ಮಾಡುತ್ತಾ ಅರೆಬೆತ್ತಲೆಯಾಗಿ ಕುಣಿಯುತ್ತಾ ಮೋಜು ಮಾಡಿದ್ದಾರೆ. ಅದರ ವಿಡಿಯೋ, ಫೋಟೋಗಳು ಲಭ್ಯವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾ ಗೃಹರಕ್ಷಕ ದಳದ ಸಿಬ್ಬಂದಿ ತರಬೇತಿ ಸಮಯದಲ್ಲಿ ಸರ್ಕಾರಿ ಕಚೇರಿಯಲ್ಲಿ ಮದ್ಯ ಸೇವನೆ ಮಾಡಿ ಅಶ್ಲೀಲವಾಗಿ ಪುರುಷ ಹಾಗೂ ಮಹಿಳಾ ಸಿಬ್ಬಂದಿ ಅರೆಬೆತ್ತಲೆಯಾಗಿ ಕುಣಿಯುತ್ತಾ ಮೋಜು ಮಸ್ತಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಗೃಹರಕ್ಷಕ ದಳದ ಪ್ಲಟೂನ್ ಕಮಾಂಡರ್ ಬಿ.ಎಂ.ಯೋಗೇಶ್, ಸಮಾದೇಷ್ಟ ವಿನೋದ್ ಖನ್ನಾ, ಬೋಧಕ ಉಮೇಶ್, ಉಪ ಸಮಾದೇಷ್ಟ ಪುರುಷೋತ್ತಮ್, ಸಹಾಯಕ ಬೋಧಕರಾದ ಶರತ್, ಶ್ರೀನಿವಾಸ್, ಸೂಪರಿಡೆಂಟ್ ಶಂಕರ್ ನಾಯಕ್, ಪಿಎಲ್‌ಸಿ ಮನುಕುಮಾರ್, ಗೃಹ ರಕ್ಷಕರಾದ ಅಶೋಕ, ಗುರುಲಿಂಗು, ಡಿ ಗ್ರೂಪ್ ನೌಕರ ಮೋಹನ್, ಗೃಹ ರಕ್ಷಕಿಯರಾದ ಸೌಮ್ಯ, ಭಾಗ್ಯಲಕ್ಷ್ಮೀ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಿಶ್ವ ದಲಿತ ಮಹಾಸಭಾ ಸಂಸ್ಥಾಪಕ ಅಧ್ಯಕ್ಷ ಎಸ್.ಪೂರ್ಣಚಂದ್ರ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ದೂರು ಸಲ್ಲಿಸಿದ್ದಾರೆ.

ಪಾಂಡವಪುರ ತಾಲೂಕಿನ ಕುಂತಿಬೆಟ್ಟದಲ್ಲಿ ಗೃಹ ರಕ್ಷಕ ದಳದ 10 ದಿನದ ತರಬೇತಿ ಶಿಬಿರದಲ್ಲಿ ತರಬೇತಿಯಲ್ಲಿ ಭಾಗವಹಿಸಿದ್ದ ಗೃಹರಕ್ಷಕ ಹಾಗೂ ಗೃಹರಕ್ಷಕಿಯರು ಮದ್ಯ ಸೇವನೆ ಮಾಡುತ್ತಾ ಅಶ್ಲೀಲವಾಗಿ ಮಾತನಾಡುತ್ತಾ ಹಾಡು ಹಾಕಿಕೊಂಡು ಸಿಳ್ಳೆ, ಕಿರುಚಾಟ ಮಾಡುತ್ತಾ ಅರೆಬೆತ್ತಲೆಯಾಗಿ ಕುಣಿಯುತ್ತಾ ಮೋಜು ಮಾಡಿದ್ದಾರೆ. ಅದರ ವಿಡಿಯೋ, ಫೋಟೋಗಳು ಲಭ್ಯವಾಗಿದೆ ಎಂದು ದೂರಿನ ಜೊತೆಯಲ್ಲಿ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ.

ಗೃಹರಕ್ಷಕ ದಳದ ಮೇಲಧಿಕಾರಿಗಳು ಸರ್ಕಾರಿ ವಾಹನವನ್ನು ಕೆಲವು ಸಿಬ್ಬಂದಿಯೊಂದಿಗೆ ಖಾಸಗಿ ಕಾರ್ಯಕ್ರಮಗಳಿಗೆ ಹಾಗೂ ಮೋಜು ಮಸ್ತಿ ಮಾಡಲು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ, ಗೃಹರಕ್ಷಕ ದಳ ಕಚೇರಿಯಲ್ಲಿಯೇ ಹುಟ್ಟುಹಬ್ಬ ಆಚರಣೆ, ಮಧ್ಯಪಾನ, ಮೋಜು ಮಸ್ತಿ ಮಾಡುವ ಮೂಲಕ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕೆಲವು ಮಹಿಳಾ ಸಿಬ್ಬಂದಿಗಳನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಮುಂದಾಗುತ್ತಾರೆ. ಅವರಿಗೆ ಸಹಕರಿಸದ ಸಿಬ್ಬಂದಿಗಳ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿ ನೋಟಿಸ್ ನೀಡಿ ಏಕಾಏಕಿ ಕೆಲಸದಿಂದ ತೆಗೆದು ಹಾಕುತ್ತಾರೆ.

ಈ ವಿಚಾರವನ್ನು ಮೇಲಾಧಿಕಾರಿಗಳಿಗೆ ದೂರು ಕೊಟ್ಟರೆ ಅಥವಾ ಮಾಧ್ಯಮದ ಮುಂದೆ ಹೋದರೆ ಮಾನಸಿಕ ಕಿರುಕುಳ ಹಾಗೂ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಆದ್ದರಿಂದ ಇವರನ್ನು ಕರ್ತವ್ಯದಿಂದ ವಜಾ ಮಾಡಿ ತನಿಖೆ ನಡೆಸಬೇಕು ಎಂದು ಪೂರ್ಣಚಂದ್ರ ದೂರಿನಲ್ಲಿ ಒತ್ತಾಯಿಸಿದ್ದಾರೆ.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''