ಮಂಡ್ಯ ನಗರಸಭೆ ವ್ಯಾಪ್ತಿಯೊಳಗೆ ೬೭ ಆಸ್ತಿ ಮಾಲೀಕರು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ. ಅಲ್ಲದೇ, ಎರಡೂ ದೊಡ್ಡ ಚರಂಡಿಗಳೂ ಅಲ್ಲಲ್ಲಿ ಒತ್ತುವರಿಯಾಗಿವೆ. ಪ್ರಭಾವಿ ರಾಜಕಾರಣಿಗಳು, ಮುಖಂಡರೇ ಅತಿಕ್ರಮಣ ಮಾಡಿಕೊಂಡಿದ್ದಾರೆ. ಒತ್ತುವರಿ ತೆರವುಗೊಳಿಸುವಂತೆ ಅಂತಿಮ ನೋಟಿಸ್‌ಗಳನ್ನು ನೀಡಿದ್ದರೂ ಇದುವರೆಗೂ ಅತಿಕ್ರಮಣವನ್ನು ತೆರವುಗೊಳಿಸಿಲ್ಲ.
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯ
ನಗರಸಭೆ ವ್ಯಾಪ್ತಿಯೊಳಗೆ ೬೭ ಆಸ್ತಿ ಮಾಲೀಕರು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ. ಅಲ್ಲದೇ, ಎರಡೂ ದೊಡ್ಡ ಚರಂಡಿಗಳೂ ಅಲ್ಲಲ್ಲಿ ಒತ್ತುವರಿಯಾಗಿವೆ. ಪ್ರಭಾವಿ ರಾಜಕಾರಣಿಗಳು, ಮುಖಂಡರೇ ಅತಿಕ್ರಮಣ ಮಾಡಿಕೊಂಡಿದ್ದಾರೆ. ಒತ್ತುವರಿ ತೆರವುಗೊಳಿಸುವಂತೆ ಅಂತಿಮ ನೋಟಿಸ್‌ಗಳನ್ನು ನೀಡಿದ್ದರೂ ಇದುವರೆಗೂ ಅತಿಕ್ರಮಣವನ್ನು ತೆರವುಗೊಳಿಸಿಲ್ಲ.
ರಾಜ ಕಾಲುವೆ ಒತ್ತುವರಿ ಮಾಡಿಕೊಂಡಿರುವ ೬೭ ಆಸ್ತಿ ಮಾಲೀಕರ ಪೈಕಿ ೧೮ ಮಂದಿ ಆಸ್ತಿ ಮಾಲೀಕರು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇಬ್ಬರು ಆಸ್ತಿ ಮಾಲೀಕರು ಮೈಸೂರಿನ ಪ್ರಾದೇಶಿಕ ಆಯುಕ್ತರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ತಡೆಯಾಜ್ಞೆ ತಂದಿದ್ದಾರೆ. ಇವೆಲ್ಲ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವುದಾಗಿ ತಿಳಿದುಬಂದಿದೆ.
ಒತ್ತುವರಿ ತೆರವಿಗೆ ಡೋಂಟ್ ಕೇರ್:
ಶಂಕರನಗರ ವ್ಯಾಪ್ತಿಯಲ್ಲಿ ಪ್ರಭಾವಿ ರಾಜಕೀಯ ಮುಖಂಡರೊಬ್ಬರು ಖಾತೆ ಸಂಖ್ಯೆ ಡಿ೪/೧೭೨೫/೩೯೫೬ರಲ್ಲಿ ರಾಜ ಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಡವನ್ನು ನಿರ್ಮಿಸಿದ್ದಾರೆ. ಇದರಿಂದ ನೀರಿನ ಮುಕ್ತ ಹರಿವಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಬೆಂಗಳೂರಿನ ಲೋಕಾಯುಕ್ತರಿಗೆ ದೂರು ನೀಡಲಾಗಿದೆ. ಇದರ ಬಗ್ಗೆ ಭೂ ದಾಖಲೆಗಳ ಹೆಚ್ಚುವರಿ ನಿರ್ದೇಶಕರು ಹಾಗೂ ಇತರೆ ಅಧಿಕಾರಿಗಳು ರಾಜಕಾಲುವೆಯ ನಾಲಾದಲ್ಲಿ ಸಮೀಕ್ಷೆ ನಡೆಸಿದಾಗ ಕಾಲುವೆ ವ್ಯಾಪ್ತಿಯ ಭೂಮಿಯ ಒಂದು ಭಾಗದಲ್ಲಿ ಅತಿಕ್ರಮಣವಾಗಿರುವುದು ಕಂಡುಬಂದಿದೆ.
ಈ ವಿಷಯವಾಗಿ ಆಸ್ತಿ ಮಾಲೀಕರಿಗೆ ನೋಟಿಸ್ ನೀಡಿ ಅವರಿಂದ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆದು ಪರಿಶೀಲಿಸಿದಾಗ ಕಟ್ಟಡವನ್ನು ರಾಜಕಾಲುವೆಯ ಭೂಮಿಯಲ್ಲಿ ಕಾನೂನುಬಾಹಿರವಾಗಿ ನಿರ್ಮಿಸಿರುವುದು ಕಂಡುಬಂದಿದೆ. ಬಳಿಕ ಆ ಜಾಗದಲ್ಲಿ ನಿರ್ಮಿಸಿರುವ ಕಡ್ಡವನ್ನು ಖಾಲಿ ಮಾಡುವಂತೆ ೧೫ ದಿನಗಳ ಗಡುವು ನೀಡಿ ಐದು ತಿಂಗಳಾದರೂ ಇದುವರೆಗೆ ತೆರವುಗೊಳಿಸಿಲ್ಲ. ಕಟ್ಟಡಗಳನ್ನು ತೆರವುಗೊಳಿಸದಿದ್ದರೆ ನಗರಸಭೆಯಿಂದಲೇ ತೆರವುಗೊಳಿಸಲಾಗುತ್ತದೆ. ವೆಚ್ಚವನ್ನು ಆಸ್ತಿ ಮಾಲೀಕರಿಂದಲೇ ವಸೂಲಿ ಮಾಡುವ ಎಚ್ಚರಿಕೆ ನೀಡಿದ್ದರೂ ಡೋಂಟ್ ಕೇರ್ ಎನ್ನುತ್ತಾ ಅಲ್ಲೇ ಮುಂದುವರೆದಿದ್ದಾರೆ.
ಡಿಜಿಪಿಎಸ್ ಉಪಕರಣದಿಂದ ಸಮೀಕ್ಷೆ:
ಮಂಡ್ಯ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಬಳಿ ಇಉವ ದೊಡ್ಡ ಚರಂಡಿಗಳ ನಕ್ಷೆಯಲ್ಲಿ ದಾಖಲಿಸಿರುವ ಆಸ್ತಿ ಗುರುತುಗಳನ್ನು ಡಿಜಿಪಿಎಸ್ ಉಪಕರಣದ ಮೂಲಕ ಸಮೀಕ್ಷೆ ನಡೆಸಿ ಸಮೀಕ್ಷೆಯಲ್ಲಿರುವ ಅಂಶಗಳ ಆಧಾರದ ಮೇಲೆ ಕ್ಯಾಡ್ ಮುಖಾಂತರ ಮ್ಯಾಪ್ ತಯಾರಿಸಿ ಇದನ್ನು ಉಪಗ್ರಹಗಳ ಉಪಯೋಗಿಸಿ ವೀಕ್ಷಿಸುವಂತಹ ಗೂಗಲ್ ಮ್ಯಾಪ್ ಮೇಲೆ ಇಂಪೋಸ್ ಮಾಡಿ ಒತ್ತುವರಿಯಾಗಿರುವ ಸರ್ವೇ ನಂಬರ್‌ಗಳನ್ನು ತಿಳಿಸಲಾಗಿದೆ.
ಆದರೆ, ಒತ್ತುವರಿಯಾಗಿರುವ ಆಸ್ತಿ ವಿವರಗಳ ನಿರ್ದಿಷ್ಟ ಅಳತೆ ಮಾಹಿತಿಗಳನ್ನು ನೀಡಿಲ್ಲ. ನಂತರದಲ್ಲಿ ಒತ್ತುವರಿ ಪ್ರದೇಶಗಳಿಗೆ ನಗರಸಭೆ ಮತ್ತು ಇತರೆ ಇಲಾಖೆಗಳ ನೆರವಿನೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ನಿರ್ದಿಷ್ಟ ಒತ್ತುವರಿಯಾಗಿರುವ ಉದ್ದ, ಅಗಲ, ವಿಸ್ತೀರ್ಣಗಳ ಸ್ವರೂಪ, ಒತ್ತುವರಿದಾರರ ಹೆಸರು, ವಿಳಾಸಗಳೊಡನೆ ಕರ್ನಾಟಕ ಪುರಸಭೆ ಕಾಯ್ದೆ ೧೯೬೪ ರೀತ್ಯಾ ಒತ್ತುವರಿ ತೆರವುಗೊಳಿಸಲು ನಗರಸಭೆಗೆ ಸೂಚಿಸಲಾಗಿತ್ತು. ಅದರಂತೆ ನಗರಸಭೆ ಅಧಿಕಾರಿಗಳು ಕ್ರಮ ವಹಿಸಿ ಆಸ್ತಿ ಮಾಲೀಕರಿಗೆ ನೋಟಿಸ್ ಕೂಡ ಜಾರಿಗೊಳಿಸಿದ್ದರು. ಒತ್ತುವರಿ ಮಾಡಿಕೊಂಡಿರುವ ೬೭ ಆಸ್ತಿ ಮಾಲೀಕರಲ್ಲಿ ೨೦ ಮಂದಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಉಳಿದವರು ಮಾಡಿಕೊಂಡಿರುವ ಒತ್ತುವರಿ ತೆರವಿಗೆ ನಗರಸಭೆ ಅಧಿಕಾರಿಗಳು ಇದುವರೆಗೂ ಮುಂದಾಗಿಲ್ಲ. ರಾಜಕೀಯ ಒತ್ತಡ, ಪ್ರಭಾವ ಒತ್ತುವರಿ ತೆರವಿಗೆ ಪ್ರಮುಖ ಅಡ್ಡಿಯಾಗಿದೆ.
ಎರಡು ಮಳೆ ನೀರು ಚರಂಡಿ ಒತ್ತುವರಿ:
ಮಂಡ್ಯ ನಗರಸಭೆ ವ್ಯಾಪ್ತಿಯಲ್ಲಿ ಗುರುತಿಸಿರುವ ಏಳು ದೊಡ್ಡ ಮೋರಿ (ಮಳೆ ನೀರು ಚರಂಡಿ)ಗಳಲ್ಲಿ ಎರಡು ಮಳೆ ನೀರು ಚರಂಡಿಗಳು ಒತ್ತುವರಿಯಾಗಿರುವುದು ಕಂಡುಬಂದಿದೆ. ಚಾಮುಂಡೇಶ್ವರಿ ನಗರದಲ್ಲಿ ಪ್ರಾರಂಭಗೊಂಡು ಶಂಕರನಗರ, ಕಿತ್ತೂರು ರಾಣಿ ಚೆನ್ನಮ್ಮ ವತ್ತದ ಮೂಲಕ ಗಾಂಧಿನಗರ, ಹೊಸಹಳ್ಳಿ, ಹಾಲಹಳ್ಳಿ ಮೂಲಕ ಗುತ್ತಲು ಕೆರೆ ಸೇರುವಂತಹ ಮೂರು ಹಂತದ ಚರಂಡಿಗಳು ಹಾಗೂ ಅಶೋಕನಗರದಲ್ಲಿ ಪ್ರಾರಂಭಗೊಂಡು ಓಲ್ಡ್ ಟೌನ್ ಮೂಲಕ ನಾಲಬಂದವಾಡಿ ಹತ್ತಿರ ಹೆಬ್ಬಳ್ಳಕ್ಕೆ ಸೇರುವ ಚರಂಡಿಗಳು ಒತ್ತುವರಿಯಾಗಿರುವುದು ಕಂಡುಬಂದಿದೆ. ಇದರ ಜೊತೆಗೆ ತಾವರೆಗೆರೆಯಲ್ಲಿ ಪ್ರಾರಂಭಗೊಂಡು ಸ್ವರ್ಣಸಂದ್ರದ ಮೂಲಕ ಮೈಷುಗರ್ ಶಾಲೆ ಹಿಂಭಾಗದಲ್ಲಿ ಹಾದು ಹೆಬ್ಬಳ್ಳಕ್ಕೆ ಸೇರುವ ಒಂದು ದೊಡ್ಡ ಚರಂಡಿಯ ನಕಾಶೆಯು ಶಿಥಿಲವಾಗಿದ್ದು, ಅದನ್ನು ಪುನರ್‌ನಿರ್ಮಾಣ ಮಾಡಿಕೊಂಡು ಅಳತೆ ಮಾಡಬೇಕಾಗಿರುತ್ತದೆ ಎಂದು ವರದಿ ನೀಡಿದ್ದಾರೆ.
ರಾಜಕಾಲುವೆ ಮತ್ತು ಮಳೆ ನೀರು ಚರಂಡಿ ಒತ್ತುವರಿ ಮಾಡಿಕೊಂಡಿರುವ ಆಸ್ತಿ ಮಾಲೀಕರಿಗೆ ನಾವು ಈಗಾಗಲೇ ಅಂತಿಮ ನೋಟಿಸ್ ಕೂಡ ಜಾರಿಗೊಳಿಸಿದ್ದೇವೆ. ಆದರೆ, ಅದರಲ್ಲಿ ಹಲವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ತಡೆಯಾಜ್ಞೆ ತಂದಿದ್ದಾರೆ. ಅದೀಗ ವಿಚಾರಣೆ ಹಂತದಲ್ಲಿರುವುದರಿಂದ ಸದ್ಯಕ್ಕೆ ಯಾವುದೇ ಕ್ರಮ ವಹಿಸಲಾಗುತ್ತಿಲ್ಲ. ನ್ಯಾಯಾಲಯದ ಆದೇಶ ಹೊರಬಿದ್ದ ಬಳಿಕ ಅದರಂತೆ ಕ್ರಮ ವಹಿಸುತ್ತೇವೆ.
- ಯು.ಪಿ.ಪಂಪಾಶ್ರೀ, ಆಯುಕ್ತರು, ನಗರಸಭೆ
ಪ್ರಭಾವಿಗಳು, ರಾಜಕಾರಣಿಗಳು ರಾಜಕಾಲುವೆ ಮತ್ತು ದೊಡ್ಡ ಮೋರಿಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ಕಾಲುವೆ ಜಾಗದಲ್ಲಿ ನಿರ್ಮಾಣಗೊಂಡಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಮೂಲಕ ಚರಂಡಿ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಬೇಕು. ಜಿಲ್ಲಾಡಳಿತ, ನಗರಸಭೆ, ಕಂದಾಯ ಇಲಾಖೆ ಅಧಿಕಾರಿಗಳು ತುರ್ತು ಕ್ರಮ ವಹಿಸಬೇಕು.
- ಎಂ.ಬಿ.ನಾಗಣ್ಣಗೌಡ, ರಾಜ್ಯಾಧ್ಯಕ್ಷರು, ಕರುನಾಡ ಸೇವಕರು ಸಂಘಟನೆ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.