;Resize=(412,232))
ಮಂಡ್ಯ ಮಂಜುನಾಥ್
ಮಂಡ್ಯ : ‘ನೀವು ಎರಡು ವರ್ಷದ ಹಿಂದೆಯೇ ಮೃತಪಟ್ಟಿದ್ದೀರಿ’ ಎಂದು 50 ವರ್ಷದ ವ್ಯಕ್ತಿಯೊಬ್ಬನಿಗೆ ಮಂಡ್ಯ ಜಿಲ್ಲಾಡಳಿತ ಮರಣ ಪ್ರಮಾಣಪತ್ರ ವಿತರಿಸಿರುವ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ.
ಈ ವಿಷಯ ತಿಳಿದು ಹೌಹಾರಿದ ಆ ವ್ಯಕ್ತಿ ಮತ್ತಷ್ಟು ವಿಚಾರಣೆ ನಡೆಸಿದಾಗ, ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಆತನಿಗೆ ‘ಮರಣೋತ್ತರ ಪರೀಕ್ಷೆ’ಯೂ ನಡೆದಿರುವುದೂ ಪತ್ತೆಯಾಗಿದೆ!
ಮಂಡ್ಯದ ಗುತ್ತಲು ಬಡಾವಣೆ ನಿವಾಸಿ ಶಫೀಉಲ್ಲಾ ಖಾನ್ (50) ತಾನು ಬದುಕಿದ್ದರೂ ಸರ್ಕಾರಿ ದಾಖಲೆಯಲ್ಲಿ ಮರಣ ಹೊಂದಿದ್ದಾರೆ. ಹೀಗಾಗಿ ಅವರು ತಾನಿನ್ನೂ ಬದುಕಿದ್ದೇನೆ ಎಂದು ನಿರೂಪಿಸಲು ಸರ್ಕಾರಿ ಕಚೇರಿಗಳಿಗೆ ಅಲೆಯುವಂತಾಗಿದೆ. ಶಫೀ ಮರಣ ಹೊಂದಿದ್ದಾರೆ ಎಂದು ಸರ್ಕಾರಿ ದಾಖಲೆಗಳೇ ಹೇಳುತ್ತಿರುವುದರಿಂದ ಅವರಿಗೆ ಪಡಿತರ ಸಿಗುತ್ತಿಲ್ಲ, ಬ್ಯಾಂಕ್ ವ್ಯವಹಾರವನ್ನೂ ಮಾಡಲು ಆಗುತ್ತಿಲ್ಲ.
ಜೀವಂತ ವ್ಯಕ್ತಿ ಹಾಗೂ ಮರಣ ಪತ್ರದಲ್ಲಿರುವ ವ್ಯಕ್ತಿಯ ವಿಳಾಸ ಎರಡೂ ಒಂದೇ ಆಗಿವೆ. ಆದಾಗ್ಯೂ ಜೀವಂತ ವ್ಯಕ್ತಿ ಮರಣ ಹೊಂದಿದ್ದಾನೆ ಎಂದು ದಾಖಲೆಗಳು ಹೇಳುತ್ತಿವೆ. ಆದರೆ ಮೃತರಾದ ವ್ಯಕ್ತಿ ಯಾರು? ಈ ರೀತಿ ಹೇಗೆ ಆಯಿತು ಎಂಬುದಕ್ಕೆ ಉತ್ತರ ದೊರಕದೆ ಶಫೀ ಹಾಗೂ ಅವರ ಕುಟುಂಬ ಕಂಗಾಲಾಗಿದೆ.
ಶಫೀ ಉಲ್ಲಾ ಖಾನ್ ಅವರು ಮಂಡ್ಯ ನಿವಾಸಿ. ಸಮೀಪದ ಕೆ.ಎಂ. ದೊಡ್ಡಿಯಲ್ಲಿ ಮೆಕ್ಯಾನಿಕ್ ಆಗಿದ್ದಾರೆ. ಮೂರು ತಿಂಗಳಿನಿಂದ ಪಡಿತರ ಸ್ಥಗಿತಗೊಂಡಿತ್ತು. ಈ ಬಗ್ಗೆ ವಿಚಾರಿಸಲು ನ್ಯಾಯಬೆಲೆ ಅಂಗಡಿಗೆ ಹೋದಾಗ, ಕೆವೈಸಿ ಮಾಡಿಸುವಂತೆ ಸಲಹೆ ಬಂತು. ಕೆವೈಸಿ ಮಾಡಿಸಲು ಹೋದಾಗ ಶಫೀ ಉಲ್ಲಾ ಖಾನ್‌ಮರಣ ಹೊಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದರು. ಇದನ್ನು ಕೇಳಿ ಶಫೀ ಅವರು ಆಘಾತಗೊಂಡಾಗ, ಮರಣ ಪ್ರಮಾಣಪತ್ರವನ್ನೇ ಅಧಿಕಾರಿಗಳು ಕೈಗಿಟ್ಟರು!
ಆದಾಯ ಪ್ರಮಾಣಪತ್ರ ತೆಗೆದುಕೊಳ್ಳಲು ಶಫೀ ಅವರು ತಾಲೂಕು ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಿದರು. ಮರಣ ಹೊಂದಿದವರಿಗೆ ಪ್ರಮಾಣಪತ್ರ ಕೊಡುವುದಿಲ್ಲ ಎಂಬ ಉತ್ತರ ಬಂತು. ಜಿಲ್ಲಾಧಿಕಾರಿ ಕಚೇರಿ ಸೇರಿ, ಹಲವು ಸರ್ಕಾರಿ ಕಚೇರಿಗಳಿಗೆ ಅಲೆದಾಡಿದ ಬಳಿಕ ನಗರಸಭೆಗೆ ಹೋದರು. ಅಲ್ಲೂ 2024ರಲ್ಲೇ ಸಾವಿಗೀಡಾಗಿರುವ ಮಾಹಿತಿ ಹೊಂದಿದ್ದ ಮರಣಪತ್ರ ಸಿಕ್ಕಿತು. ಬಳಿಕ ಶಫೀ ಅವರು ಮಂಡ್ಯ ವೈದ್ಯ ವಿಜ್ಞಾನ ಸಂಸ್ಥೆ (ಮಿಮ್ಸ್) ತೆರಳಿದಾಗ ಅಲ್ಲಿನ ಬೇರೆಯದೇ ಸಂಗತಿ ಪತ್ತೆಯಾಯಿತು. ಶಫೀ ಉಲ್ಲಾಗೆ ನಮ್ಮ ಆಸ್ಪತ್ರೆಯಲ್ಲಿ 3 ತಿಂಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿ ಶವ ಹಸ್ತಾಂತರಿಸಲಾಗಿದೆ ಎಂದು ದಾಖಲಾಗಿರುವುದು ಪತ್ತೆಯಾಯಿತು.
ಬದುಕಿರುವ ಶಫೀಉಲ್ಲಾ ಖಾನ್ ಕಣ್ಣೆದುರಿಗೆ ನಿಂತಿದ್ದರೂ ಕಾಗದದ ಮೇಲೆ ಮಾತ್ರ ಶವವಾಗಿದ್ದಾರೆ. ಹಾಗಾದರೆ ಮಿಮ್ಸ್‌ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ವ್ಯಕ್ತಿ ಯಾರು ಎನ್ನುವುದು ನಿಗೂಢ. ಇದು ತನಿಖೆಯಿಂದ ಹೊರಬೀಳಬೇಕಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋದರೆ ದೂರನ್ನು ಸ್ವೀಕರಿಸುತ್ತಿಲ್ಲ. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅಲ್ಲಿ ಹೋಗಿ, ಇಲ್ಲಿ ಹೋಗಿ ಎಂದು ಅಲೆದಾಡಿಸುತ್ತಿದ್ದಾರೆ. ಕಚೇರಿಯಿಂದ ಕಚೇರಿಗೆ ಅಲೆದಾಡಿ ಸುಸ್ತಾಗಿರುವ ಶಫೀಉಲ್ಲಾ ಖಾನ್ ನ್ಯಾಯ ಸಿಗದೆ ಕಣ್ಣೀರಿಡುತ್ತಿದ್ದಾರೆ.
ನಾನು ಜೀವಂತವಾಗಿದ್ದರೂ ನನ್ನನ್ನು ಸತ್ತವನೆಂದು ದಾಖಲೆಗಳಲ್ಲಿ ನಮೂದಿಸಿದ್ದಾರೆ. ಈಗ ನನಗೆ ಪಡಿತರ ಸಿಗುತ್ತಿಲ್ಲ. ಬ್ಯಾಂಕ್ ವಹಿವಾಟುಗಳೂ ಸ್ಥಗಿತಗೊಂಡಿವೆ. ಎಲ್ಲಿಗೇ ಹೋದರೂ ನೀನು ಮೃತಪಟ್ಟಿರುವುದಾಗಿ ದಾಖಲೆಗಳನ್ನು ತೋರಿಸುತ್ತಿದ್ದಾರೆ. ಅಧಿಕಾರಿಗಳ ಬಳಿ ನ್ಯಾಯ ಕೇಳಿದರೆ ಯಾರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ನನಗೆ ಹೃದಯ ಸಂಬಂಧಿ ಕಾಯಿಲೆಯಿದ್ದು, ಪಡಿತರ ಚೀಟಿ ತೆಗೆದುಕೊಂಡು ಹೋದರೂ ಚಿಕಿತ್ಸೆಗೆ ಪ್ರಯೋಜನವಾಗುತ್ತಿಲ್ಲ. ಜೀವಂತ ಮನುಷ್ಯ ಸತ್ತಂತೆ ಅಲೆಯುವಂತಾಗಿದೆ.
- ಶಫೀಉಲ್ಲಾ ಖಾನ್, ಸಂತ್ರಸ್ತ
ಇಂತಹ 4 ದಾಖಲೆಗಳು ನನ್ನ ಬಳಿ ಇವೆ. ಮತ್ತಷ್ಟು ಮಾಹಿತಿಯನ್ನು ಕಲೆಹಾಕುತ್ತಿದ್ದೇನೆ. ಶೀಘ್ರದಲ್ಲೇ ಉನ್ನತ ತನಿಖಾ ಸಂಸ್ಥೆಗೆ ದೂರು ನೀಡುತ್ತೇನೆ. ೨೦೨೪ರಲ್ಲಿ ಮಿಮ್ಸ್‌ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ವ್ಯಕ್ತಿ ಯಾರು ಎನ್ನುವುದು ಬಹಿರಂಗವಾಗಬೇಕಿದೆ. ಇದರಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಕೈವಾಡವಿರುವ ಶಂಕೆ ಇದೆ.
- ಫಿಲಿಪ್ಸ್, ಸಾಮಾಜಿಕ ಹೋರಾಟಗಾರ
- ಮೆಕ್ಯಾನಿಕ್ ಆಗಿರುವ ಮಂಡ್ಯದ ಶಫೀ ಉಲ್ಲಾ ಖಾನ್‌ಗೆ 3 ತಿಂಗಳಿನಿಂದ ಪಡಿತರ ಬರುತ್ತಿರಲಿಲ್ಲ
- ವಿಚಾರಿಸಲು ನ್ಯಾಯಬೆಲೆ ಅಂಗಡಿಗೆ ಹೋದಾಗ ಕೆವೈಸಿ ಮಾಡಿಸುವಂತೆ ಸಿಬ್ಬಂದಿಯಿಂದ ಸಲಹೆ
- ಕೆವೈಸಿ ವೇಳೆ ಸಾವಿನ ಮಾಹಿತಿ ಪತ್ತೆ. 2024ರಲ್ಲೇ ಮರಣ ಹೊಂದಿರುವುದಾಗಿ ನಗರಸಭೆ ಮಾಹಿತಿ
- ಮಿಮ್ಸ್ ಆಸ್ಪತ್ರೆಯಲ್ಲಿ ಕೇಳಿದಾಗ ಮರಣೋತ್ತರ ಪರೀಕ್ಷೆ ನಡೆಸಿರುವುದಾಗಿ ದಾಖಲೆಗಳಲ್ಲಿ ಉಲ್ಲೇಖ
- ಮರಣ ಪತ್ರ ಸೃಷ್ಟಿಯಾಗಿರುವುದು ಶಫೀ ಉಲ್ಲಾ ಇರುವ ವಿಳಾಸಕ್ಕೆ, ಅದೇ ಹೆಸರಿಗೆ. ಇದು ಹೇಗೆ ಸಾಧ್ಯ?