ಪೆನ್‌ಡ್ರೈವ್‌ ತೋರಿಸಿ ರವಿ ಬಾಂಬ್‌ : ಸಿಎಂ, 10 ಸಚಿವರ ಸ್ಟಿಂಗ್‌ಗೆ ಕೋಲ್ಕತಾ, ದೆಹಲಿ ಟೀಂ

Published : Oct 10, 2026, 07:22 AM IST
ravi ganiga

ಸಾರಾಂಶ

ಸ್ಟಿಂಗ್‌ ಆಪರೇಷನ್‌ ವಿಚಾರವು ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸುತ್ತಿರುವ ನಡುವೆಯೇ ಮಂಡ್ಯದ ಕಾಂಗ್ರೆಸ್‌ ಶಾಸಕ ಪಿ. ರವಿಕುಮಾರ್‌ ಗೌಡ (ಗಣಿಗ) ಅವರು ಪೆನ್‌ಡ್ರೈವ್‌ವೊಂದನ್ನು ತೋರಿಸಿ ಹೊಸ ಬಾಂಬ್‌ ಸಿಡಿಸಿದ್ದಾರೆ.

ಮಂಡ್ಯ : ಸ್ಟಿಂಗ್‌ ಆಪರೇಷನ್‌ ವಿಚಾರವು ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸುತ್ತಿರುವ ನಡುವೆಯೇ ಮಂಡ್ಯದ ಕಾಂಗ್ರೆಸ್‌ ಶಾಸಕ ಪಿ. ರವಿಕುಮಾರ್‌ ಗೌಡ (ಗಣಿಗ) ಅವರು ಪೆನ್‌ಡ್ರೈವ್‌ವೊಂದನ್ನು ತೋರಿಸಿ ಹೊಸ ಬಾಂಬ್‌ ಸಿಡಿಸಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ಅವರ ಸಂಪುಟದ 10 ಸಚಿವರ ಗೌಪ್ಯ ಮಾಹಿತಿ ಸಂಗ್ರಹಿಸಲು ದೆಹಲಿ ಹಾಗೂ ಕೋಲ್ಕತಾದಿಂದ ಖಾಸಗಿ ತಂಡಗಳು ಬೆಂಗಳೂರಿಗೆ ಬಂದಿವೆ ಎಂದು ಆರೋಪಿಸಿದ್ದಾರೆ.

ಸುದ್ದಿಗಾರರಿಗೆ ಶುಕ್ರವಾರ ಸ್ಟಿಂಗ್‌ ಆಪರೇಷನ್‌ನ ದಾಖಲೆಗಳು ಇವೆ ಎನ್ನಲಾದ ಪೆನ್‌ಡ್ರೈವ್‌ವೊಂದನ್ನು ತೋರಿಸಿ ಮಾತನಾಡಿದ ಅವರು, ಬಿಜೆಪಿಗರು ಕಾಂಗ್ರೆಸ್‌ ವಿರುದ್ಧ ಸ್ಟಿಂಗ್‌ ಆಪರೇಷನ್‌ ನಡೆಸಲು ದೆಹಲಿ ಮತ್ತು ಕೋಲ್ಕತಾ ಏಜೆನ್ಸಿಗಳಿಗೆ ಸುಪಾರಿ ಕೊಟ್ಟಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿ ಹಣ ಕೊಟ್ಟಿದ್ದಾರೆ. 2 ತಿಂಗಳಿನಿಂದ ತಂಡ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸಚಿವರೊಬ್ಬರು ಮತ್ತು ರಾಜ್ಯ ಬಿಜೆಪಿ ನಾಯಕರೊಬ್ಬರು ಈ ಕುತಂತ್ರದ ಹಿಂದೆ ಇದ್ದಾರೆ. ಅವರೇ ಸುಪಾರಿಯನ್ನೂ ಕೊಟ್ಟಿದ್ದಾರೆ. ಡಿಕೆಶಿ ಸಂಪುಟದ 10 ಸಚಿವರನ್ನು ಟಾರ್ಗೆಟ್‌ ಮಾಡಿದ್ದಾರೆ. ನಮ್ಮ ಸಚಿವರ ಖಾಸಗಿ ಕ್ಷಣಗಳು, ವಿಡಿಯೋಗಳು, ಚಿತ್ರಗಳನ್ನು ಸಂಗ್ರಹಿಸಿ ಸರ್ಕಾರವನ್ನು ಮುಜುಗರಕ್ಕೆ ಈಡುಮಾಡುವ ಸಲುವಾಗಿ ಈ ತಂಡಗಳು ಕೆಲಸ ಮಾಡುತ್ತಿವೆ. ಆದರೆ ಸಚಿವರು ಕ್ಲೀನ್‌ ಆಗಿರುವುದರಿಂದ ಬಿಜೆಪಿಗರ ಬಲೆಗೆ ಬಿದ್ದಿಲ್ಲ. ಬಿಜೆಪಿಗರು ಸುಪಾರಿ ಕೊಟ್ಟಿರುವುದಕ್ಕೆ ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಸರ್ಕಾರಕ್ಕೆ ಮಸಿ ಬಳಿಯಲು ಸ್ಟಿಂಗ್‌:

ಕೆಲವರಿಗೆ ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗಿರುವುದನ್ನು ಸಹಿಸಲಾಗುತ್ತಿಲ್ಲ. ಸರ್ಕಾರಕ್ಕೆ ಮಸಿ ಬಳಿಯಲು ಸ್ಟಿಂಗ್‌ ಆಪರೇಷನ್‌ ತಂತ್ರ ಹೂಡಿದ್ದಾರೆ. ಸಚಿವರನ್ನು ಸ್ಟಿಂಗ್‌ ಆಪರೇಷನ್‌ಗೆ ಒಳಪಡಿಸಿ ಸರ್ಕಾರವನ್ನು ಮುಜುಗರಕ್ಕೆ ದೂಡುವುದು ಇವರ ಯೋಜನೆ. ಈ ಸ್ಟಿಂಗ್ ಆಪರೇಷನ್‌ಗೆ ಸುಪಾರಿ ಪಡೆದಿರುವ ಏಜೆನ್ಸಿಗಳು ಯಾವುವು, ಯಾರೆಲ್ಲಾ ಇದರಲ್ಲಿ ಭಾಗಿಯಾಗಿದ್ದಾರೆ. ಎಷ್ಟು ಹಣ ಕೊಟ್ಟಿದ್ದಾರೆ, ಯಾವ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡಿದ್ದರು, ಯಾವ್ಯಾವ ಸಚಿವರನ್ನು ಭೇಟಿಯಾಗಿದ್ದಾರೆ. ಯಾವ್ಯಾವ ನಾಯಕರ ಪಿಎಗಳು ಇದ್ದರು ಎಂಬುದಕ್ಕೆಲ್ಲಾ ದಾಖಲೆಗಳಿವೆ. ಸಿಸಿಟೀವಿ, ಆಡಿಯೋ, ವಿಡಿಯೋ ಸಮೇತ ದಾಖಲೆಗಳಿವೆ. ಎಲ್ಲಾ ದಾಖಲೆಗಳು ಇರುವುದರಿಂದಲೇ ಮುಖ್ಯಮಂತ್ರಿಗಳು ಕ್ಯಾಬಿನೆಟ್‌ನಲ್ಲಿ ಎಚ್ಚರಿಕೆ ನೀಡಿದ್ದರು ಎಂದರು.

ಅಲ್ಲದೆ ತಮ್ಮ ಬಳಿ ಇರುವ ದಾಖಲೆಗಳ ಸಮೇತ ಒಂದು ವಾರದೊಳಗೆ ದೂರು ಕೊಟ್ಟು ಎಲ್ಲಾ ದಾಖಲೆಗಳನ್ನು ತನಿಖಾಧಿಕಾರಿಗಳ ಮುಂದೆ ಇಡುವುದಾಗಿ ಹೇಳಿದರು.

ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ನಾವು ಹಿಟ್ ಆ್ಯಂಡ್ ರನ್ ಮಾಡುವ ಪ್ರಶ್ನೆಯೇ ಇಲ್ಲ. ಮಾಧ್ಯಮಗಳೆದುರೇ ದಾಖಲೆ ಬಿಡುಗಡೆ ಮಾಡುತ್ತೇನೆ. ಏಜೆನ್ಸಿಗಳು ನಾನಾ ರೀತಿಯ ಆಮಿಷಗಳನ್ನು ಒಡ್ಡಿದ್ದರೂ ನಮ್ಮ ಸಚಿವರು ಬಲಿಯಾಗಿಲ್ಲ. ಆದರೂ ಇದು ಎಐ ಯುಗವಾಗಿರುವುದರಿಂದ ನಕಲಿ ದಾಖಲೆಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ. ಹೀಗಾಗಿಯೇ ಸಚಿವರಿಗೆ ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಿದರು.

ಮೈಸೂರು ಮುಡಾ ಹಗರಣದಲ್ಲಿ ಸ್ನೇಹಮಯಿ ಕೃಷ್ಣ ಅವರಿಗೆ ದಾಖಲೆ ನೀಡಿದವರು ಯಾರು? ಸಿದ್ದರಾಮಯ್ಯನವರ ಮೇಲೆ ಈ ಹಿಂದೆ ಇಲ್ಲದ ಪ್ರೀತಿ ಕುಮಾರಸ್ವಾಮಿಯವರಿಗೆ ದಿಢೀರ್‌ ಅಂತ ಬಂದಿದೆಯಾ? ಸಿದ್ದರಾಮಯ್ಯ ನಿಷ್ಕಳಂಕ ವ್ಯಕ್ತಿ. ಸುಮ್ಮನೆ ಸಿದ್ದರಾಮಯ್ಯನವರ ಹೆಸರನ್ನು ಎಚ್‌ಡಿಕೆ ಪ್ರಸ್ತಾಪಿಸುತ್ತಿದ್ದಾರೆ. ವಿಪಕ್ಷದವರ ನಾಟಕ ಜನಕ್ಕೆ ಗೊತ್ತಾಗಿದೆ ಎಂದು ಹೇಳಿದರು.

ಜಾರಕಿಹೊಳಿ ಸೀಡಿ ಮಾಡಿಸಿದ್ದು ಬಿಜೆಪಿಗರು:

ಸ್ಟಿಂಗ್ ಮಾಡುವುದರಲ್ಲಿ ಬಿಜೆಪಿಗರು ನಿಸ್ಸೀಮರು. ಆಪರೇಷನ್ ಕಮಲ ಆರಂಭಿಸಿದ್ದೇ ಅವರಲ್ಲವೇ? ಅದೇ ರೀತಿ ಅವರದೇ ಪಕ್ಷದವರನ್ನು ಗೋವಾ, ಮುಂಬೈಗೆ ಕರೆದುಕೊಂಡು ಹೋಗಿ ಸೀಡಿ ಮಾಡಿಸಿದವರೂ ಅವರೇ. ರಮೇಶ್ ಜಾರಕಿಹೊಳಿ ಸೀಡಿ ಮಾಡಿಸಿದ್ದೂ ಬಿಜೆಪಿಯವರೇ ಎಂದು ಗಂಭೀರವಾಗಿ ಆರೋಪಿಸಿದರು.

ಸ್ಟಿಂಗ್ ಆಪರೇಷನ್ ಹಿಂದೆ ಕುಮಾರಸ್ವಾಮಿ ಅವರಿದ್ದಾರೆಯೇ ಎಂದು ಕೇಳಿದಾಗ, ನಾನು ಕೇಂದ್ರ ಸಚಿವರು ಹಾಗೂ ರಾಜ್ಯ ಬಿಜೆಪಿ ನಾಯಕರಿದ್ದಾರೆ ಎಂದು ಹೇಳಿದ್ದೇನೆಯೇ ವಿನಃ ಕುಮಾರಸ್ವಾಮಿ ಅವರಿದ್ದಾರೆಂದು ನಾನು ಹೇಳಿಲ್ಲ. ದಾಖಲೆ ಬಿಡುಗಡೆ ಮಾಡುವವರೆಗೆ ಕಾಯಿರಿ. ಈ ಕುತಂತ್ರದ ಹಿಂದೆ ಯಾರ್‌ ಯಾರಿದ್ದಾರೆ ಎನ್ನುವುದು ನಿಮಗೇ ಗೊತ್ತಾಗಲಿದೆ ಎಂದು ನುಡಿದರು.

ಶಾಸಕ ರವಿ ಆರೋಪ ಏನು?

- ಸಿಎಂ, 10 ಸಚಿವರ ಸ್ಟಿಂಗ್‌ ಆಪರೇಷನ್‌ ಮಾಡಲು ಖಾಸಗಿ ಸಂಸ್ಥೆಗಳಿಗೆ ಸುಪಾರಿ

- ಕೇಂದ್ರ ಸಚಿವ ಹಾಗೂ ರಾಜ್ಯದ ಬಿಜೆಪಿ ನಾಯಕರೊಬ್ಬರಿಂದ ಸ್ಟಿಂಗ್‌ ಷಡ್ಯಂತ್ರ

- ಸಚಿವರ ಖಾಸಗಿ ಕ್ಷಣಗಳು, ಇತರೆ ವಿಡಿಯೋ ಮೂಲಕ ಮುಜುಗರ ಮಾಡಲು ಯತ್ನ

- 2 ತಿಂಗಳಿನಿಂದ ಈ 2 ತಂಡಗಳ ಕಾರ್ಯಾಚರಣೆ. ಬೆಂಗಳೂರಿನಲ್ಲಿ ಟೀಂಗಳ ವಾಸ್ತವ್ಯ

- ಸಿಎಂ, ಸಚಿವರ ಸ್ಟಿಂಗ್ ಆಪರೇಷನ್‌ ನಡೆಸಲು ಸುಪಾರಿ ಕೊಟ್ಟಿರುವುದಕ್ಕೆ ಶೀಘ್ರ ದಾಖಲೆ

- 2 ವಾರದಲ್ಲಿ ದೂರು ಸಲ್ಲಿಸುತ್ತೇನೆ. ದಾಖಲೆಗಳನ್ನ ಬಹಿರಂಗ ಮಾಡುತ್ತೇನೆ ಎಂದ ಶಾಸಕ

- ಸ್ಟಿಂಗ್‌ ಆಪರೇಷನ್‌ನ ದಾಖಲೆ ಇವೆ ಎನ್ನಲಾದ ಪೆನ್‌ಡ್ರೈವ್‌ ಪ್ರದರ್ಶಿಸಿ ರವಿ ಗಣಿಗ ‘ಬಾಂಬ್‌’

PREV
Get the latest news and developments from Mandya district (ಮಂಡ್ಯ ಸುದ್ದಿ) — covering local politics, agriculture, civic issues, water conservation, tourism, community affairs and more on Kannada Prabha News.
Read more Articles on

Recommended Stories

ಶಿಕ್ಷಕರು ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸಕ್ಕೆ ಪೂರಕವಾಗಿ ಬೋಧನೆಯಲ್ಲಿ ತೊಡಗಿ: ಕೆ.ಬಿ.ಚಂದ್ರಶೇಖರ್
ದಸರಾ ಆಗಮಿಸುವ ಜನರಿಗೆ ತೊಂದರೆಯಾಗದಂತೆ ಮೂಲ ಸೌಕರ್ಯ ಕಲ್ಪಿಸಿ: ಶಾಸಕ ರಮೇಶ ಬಂಡಿಸಿದ್ದೇಗೌಡ