ಮಳವಳ್ಳಿ: ಪಟ್ಟಣದ ಹೊರವಲಯದ ಮಾರೇಹಳ್ಳಿ ಬಳಿ ವಾಹನವೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಗ್ರಾಮಾಂತರ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ. ತಾಲೂಕಿನ ಕಂದೇಗಾಲ ಗ್ರಾಮದ ಶಿವರಾಜ್ ಹಾಗೂ ಕೊಪ್ಪದ ನಂದಿನಿ ಬಂಧಿತ ಆರೋಪಿಗಳು. ಚನ್ನರಾಯಪಟ್ಟಣ ಮೂಲದ ಯುವತಿಯೊಬ್ಬಳನ್ನು ರಕ್ಷಿಸಿ ಸ್ವಾಂತನ ಕೇಂದ್ರಕ್ಕೆ ಕಳುಹಿಸಲಾಗಿದೆ. ಬಂಧಿತ ನಂದಿನಿ ಯುವತಿಯನ್ನು ಕರೆದುಕೊಂಡು ಬಂದು ಶಿವರಾಜ್ ಮೂಲಕ ಗಿರಾಕಿಗಳನ್ನು ಸಂಪರ್ಕಿಸಿ ಟಾಟಾ ಎಸಿ ವಾಹನದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರೂ ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಸಿಪಿಐ ಬಿ.ಜಿ.ಮಹೇಶ್, ಪಿಎಸ್ ಐ ಶ್ರವಣ ದಾಸರಡ್ಡಿ ನೇತೃತ್ವದಲ್ಲಿ ತಂಡ ಶುಕ್ರವಾರ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಉಮೇಶ್, ಕೌಶಿಕ್, ಮಾನಸಾ, ಬಿಂದುಶ್ರೀ ಇದ್ದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.