ಕನ್ನಡಪ್ರಭ ವಾರ್ತೆ ಮಂಗಳೂರು
ಇವರು ಅನಿ. ಮೂಲತಃ ರಾಯಚೂರಿನವರು. ಮಂಗಳೂರಿನಲ್ಲಿ ವಿದ್ಯಾಭ್ಯಾಸಕ್ಕೆ ಬಂದವರು ಈಗ ಇಲ್ಲೇ ನೆಲೆ ನಿಂತಿದ್ದಾರೆ. ಬಿಎ ಪದವಿಯ ಬಳಿಕ ಬಿಎಡ್ ಎರಡು ಸೆಮಿಸ್ಟರ್ ಪರೀಕ್ಷೆ ಬರೆದು ಬಳಿಕ ಶಿಕ್ಷಣ ಮೊಟಕುಗೊಳಿಸಿದ್ದರು. ಮಂಗಳಮುಖಿ ಎನ್ನುವ ಕಾರಣಕ್ಕೆ ತೀವ್ರ ಸಾಮಾಜಿಕ ತಾರತಮ್ಯಕ್ಕೂ ಒಳಗಾದವರು. ಈಗ ತನ್ನದೇ ದಾರಿಯಲ್ಲಿ ಸ್ವಾವಲಂಬಿಯಾಗಿ ಗಮನ ಸೆಳೆದಿದ್ದಾರೆ.
ಅಂದು ರಿಕ್ಷಾದವರು ನಿಲ್ಲಿಸಲಿಲ್ಲ:ತನ್ನ ಹಳೆಯ ಅನುಭವಗಳನ್ನು ಹಂಚಿಕೊಂಡ ಅನಿ, ಹಿಂದೆ ಪ್ರತಿದಿನ ಸಂಜೆ ಮನೆಗೆ ತೆರಳಲು ರಿಕ್ಷಾವನ್ನೆ ಅವಲಂಬಿಸಿದ್ದೆ. ಆದರೆ ರಿಕ್ಷಾದವರು ನಿಲ್ಲಿಸುತ್ತಿರಲಿಲ್ಲ. ಒಂದು ದಿನವಂತೂ ಸಂಜೆಯಿಂದ ರಾತ್ರಿಯವರೆಗೂ ಯಾವ ರಿಕ್ಷಾದವರೂ ನನ್ನನ್ನು ಬಾಡಿಗೆಗೆ ಕರೆದೊಯ್ಯಲು ಒಪ್ಪಲೇ ಇಲ್ಲ. ಏನೂ ಗತಿಯಿಲ್ಲದೆ ಅಂದು ನಡೆದುಕೊಂಡೇ ಮನೆ ತಲುಪಿದೆ. ನಾನೇ ರಿಕ್ಷಾ ಖರೀದಿಸಬೇಕು ಎಂಬ ನಿರ್ಧಾರವನ್ನು ಅಂದೇ ಮಾಡಿದ್ದೆ. ಅದೀಗ ಸಾಕಾರವಾಗಿದೆ ಎಂದು ಹೇಳಿದರು.ತನ್ನ ಕನಸಿನ ಯೋಜನೆಯಂತೆ ಬ್ಯಾಂಕ್‌ನಲ್ಲಿ ಸಾಲ ಮಾಡಿದ ಅನಿ, 4 ರಿಕ್ಷಾ ಖರೀದಿಸಿ ದೇರಳಕಟ್ಟೆಯಲ್ಲಿ ಬಾಡಿಗೆಗೆ ನೀಡಿದ್ದಾರೆ. ಈ ಮೂಲಕ ಅವರಿಗೆ ಮಾಸಿಕವಾಗಿ ನಿಶ್ಚಿತ ಆದಾಯ ಬರುತ್ತಿದೆ. ಒಂದು ಕಾಲದಲ್ಲಿ ರಿಕ್ಷಾದಲ್ಲಿ ಕರೆದೊಯ್ಯಲು ಒಪ್ಪದೆ ಅಸಹಾಯಕವಾಗಿ ನಿಂತಿದ್ದ ಅನಿ ಇಂದು ನಾಲ್ಕು ರಿಕ್ಷಾಗಳ ಒಡತಿಯಾಗಿದ್ದಾರೆ.
ಇವರ ರಿಕ್ಷಾದಲ್ಲಿ ತುಂಬು ಗರ್ಭಿಣಿಯರು, ಹಿರಿಯ ಮಂಗಳಮುಖಿಯರಿಗೆ ಉಚಿತ ಪ್ರಯಾಣ ಸೇವೆ ಸಿಗಲಿದೆ. ಇದನ್ನು ರಿಕ್ಷಾದಲ್ಲೇ ದೊಡ್ಡದಾಗಿ ಬರೆಸಿದ್ದಾರೆ. ಎಲ್ಲ ರಿಕ್ಷಾ ಚಾಲಕರೂ ಇದನ್ನು ಪಾಲನೆ ಮಾಡುತ್ತಿದ್ದಾರೆ.
ಬಹುಮುಖ ಪ್ರತಿಭೆ:ಅನಿ ಅವರು ಛಲವಂತೆ. ಎಲ್ಲ ಕಷ್ಟಗಳನ್ನು ಎದುರಿಸಿ ಬೆಳೆದು ನಿಂತಿದ್ದಾರೆ. ಶಿವಲೀಲಾ ಎಂಬ ಕನ್ನಡ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಜಿಮ್ ಟ್ರೈನರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ತನ್ನ ಓಡಾಟಕ್ಕೆ ದ್ವಿಚಕ್ರ ವಾಹನ ಖರೀದಿಸಿದ್ದಾರೆ. ಇವರಿಗೆ ಹಿರಿಯ ಮಂಗಳಮುಖಿಯರಿಗೆ ಆಶ್ರಮ ಸ್ಥಾಪಿಸುವ ಗುರಿ ಇದ್ದು, ಇದಕ್ಕಾಗಿ ಪ್ರಯತ್ನ ಮುಂದುವರಿಸಿದ್ದಾರೆ.------------ಒಂದೊಮ್ಮೆ ನನಗೆ ಮನೆಗೆ ಹೋಗಲು ಯಾರೊಬ್ಬರೂ ರಿಕ್ಷಾ ನಿಲ್ಲಿಸದೆ ಮಾಡಿದ ಅವಮಾನದಿಂದ ತುಂಬ ನೊಂದುಕೊಂಡಿದ್ದೆ. ತಾಯಿ ನೀಡಿದ ಪ್ರೋತ್ಸಾಹದಿಂದ ನಾನು ರಿಕ್ಷಾ ಖರೀದಿಸುವ ನಿರ್ಧಾರ ತೆಗೆದುಕೊಂಡೆ. ಈ ಮೂಲಕ ನನಗೆ ಸಾಧಿಸುವ ಛಲ ಬಂದಿದೆ. ಅದರ ಫಲವಾಗಿಯೇ 4 ರಿಕ್ಷಾಗಳ ಒಡತಿಯಾಗಿ ಸ್ವಾವಲಂಬಿ ಜೀವನ ನಡೆಸುತ್ತಿದ್ದೇನೆ.
- ಅನಿ, ಮಂಗಳಮುಖಿ, ಮಂಗಳೂರು.