ಪತ್ರಿಕೋದ್ಯಮದಲ್ಲಿ ನಿಖರತೆಗೆ ಆದ್ಯತೆ ಇರಲಿ: ಸುಧೀರ್ ರೆಡ್ಡಿಕನ್ನಡಪ್ರಭ ವಾರ್ತೆ ಮಂಗಳೂರುಪತ್ರಿಕೋದ್ಯಮದಲ್ಲಿ ಸುದ್ದಿಯನ್ನು ತಲುಪಿಸುವ ವೇಗಕ್ಕಿಂತ ನಿಖರತೆ ಅತ್ಯಂತ ಮುಖ್ಯ. ತಪ್ಪು ಮಾಹಿತಿ ನೀಡಿ ಇನ್ನೊಂದು ಅನ್ಯಾಯ ಆಗಲು ಅವಕಾಶ ನೀಡುವ ಬದಲು ಬರೆಯುವ ಸುದ್ದಿಯ ನಿಖರತೆ ಕಾಪಾಡಬೇಕಾಗುತ್ತದೆ. ಅಲ್ಲದೆ, ಯಾವುದಾದರೂ ಸಮಸ್ಯೆಯ ಸಂದರ್ಭ ತಪ್ಪು- ಸರಿ ನಡುವೆ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸುವುದಕ್ಕಿಂತ ಸತ್ಯವನ್ನು ಎತ್ತಿ ತೋರಿಸುವುದು ಪ್ರಮುಖವಾಗಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.
ಆರೋಪಿ ಮತ್ತು ಸಂತ್ರಸ್ತರನ್ನು ಒಂದೇ ಆಗಿ ಪರಿಗಣಿಸಲು ಸಾಧ್ಯವಿಲ್ಲ. ಮಾಧ್ಯಮದಲ್ಲೂ ಸರಿಯಾದುದನ್ನು ಸರಿ, ತಪ್ಪನ್ನು ತಪ್ಪು ಎಂದೇ ಹೇಳಬೇಕು. ಇವೆರಡರ ನಡುವೆ ಹೊಂದಾಣಿಕೆ ಮಾಡುವ ಕೆಲಸ ಆಗಬಾರದು ಎಂದು ಸಲಹೆ ನೀಡಿದ ಸುಧೀರ್ ರೆಡ್ಡಿ, ನಿರ್ಭೀತ ವರದಿಗಾರಿಕೆಯೇ ಪತ್ರಿಕೋದ್ಯಮದ ಹೃದಯ ಬಡಿತ. ನಿರ್ಭೀತ ವರದಿಗಾರಿಕೆ ಇಲ್ಲದ ಪತ್ರಿಕೋದ್ಯಮ ಅರ್ಥಹೀನ ಎಂದು ಹೇಳಿದರು.
ಜಾಗೃತ ವರದಿಗಾರಿಕೆ, ಹೃದಯವಂತಿಕೆಯ ಪತ್ರಿಕೋದ್ಯಮ ನಮ್ಮ ಅಗತ್ಯ. ಸಮಾಜದಲ್ಲಿ ಶಾಂತಿ ನೆಲೆಸುವಂಥ ಕಾರ್ಯ ಆಗಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 98 ಜನರಿಗೆ ಶೇ.2ರಷ್ಟು ಮಂದಿಯಿಂದ ಆಗುತ್ತಿರುವ ಸಮಸ್ಯೆ ಒಂದು ರೀತಿಯ ರೋಗವಾಗಿದೆ. ಇದನ್ನು ಪತ್ರಿಕೋದ್ಯಮದ ಮೂಲಕವೂ ಗುಣಪಡಿಸಬಹುದು ಎಂದು ಸಲಹೆ ನೀಡಿದರು.ವೇದಿಕೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಷಾ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್‌ನ ಅಧ್ಯಕ್ಷ ರಾಮಕೃಷ್ಣ ಆರ್., ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್., ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಇದ್ದರು.