ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಬಹುನಿರೀಕ್ಷಿತ 4 ಮತ್ತು 5 ಫ್ಲ್ಯಾಟ್‌ಫಾರಂ ಕಾಮಗಾರಿ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಶನಿವಾರದಿಂದಲೇ ಈ ಫ್ಲ್ಯಾಟ್‌ಫಾರಂನಿಂದ ಪ್ರಾಯೋಗಿಕವಾಗಿ ರೈಲು ಸಂಚಾರ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ಪ್ರಯಾಣಿಕರ ಮೂಲಭೂತ ಸೌಲಭ್ಯ ಪೂರ್ತಿಗೊಳ್ಳದ ಕಾರಣ ಮಂಗಳೂರು ಸೆಂಟ್ರಲ್‌ಗೆ ಆಗಮಿಸುವ ರೈಲುಗಳನ್ನು ಮಾತ್ರ ನಿಲುಗಡೆಗೊಳಿಸಲಾಗುತ್ತಿದೆ. ಕಾಚಿಗುಡದಿಂದ ಬೆಳಗ್ಗೆ 9.30ಕ್ಕೆ ಆಗಮಿಸಿದ ವಾರದಲ್ಲಿ ಬುಧವಾರ ಮತ್ತು ಶನಿವಾರ ಸಂಚರಿಸುವ ಕಾಚಿಗುಡ ಎಕ್ಸ್‌ಪ್ರೆಸ್ ರೈಲನ್ನು ಈ ಹೊಸ ಫ್ಲ್ಯಾಟ್‌ಫಾರಂನಲ್ಲಿ ನಿಲುಗಡೆಗೊಳಿಸಲಾಗಿದೆ. ಈ ರೈಲು ಬೋಗಿಗಳನ್ನು ಇದೇ ಫ್ಲ್ಯಾಟ್‌ಫಾರಂನಲ್ಲಿ ಸ್ವಚ್ಛಗೊಳಿಸಲಾಗಿದ್ದು, ತಾಂತ್ರಿಕ ನಿರ್ವಹಣೆಯೂ ನಡೆಸಲಾಗಿದೆ. ಈ ರೈಲು ರಾತ್ರಿ 8.05ಕ್ಕೆ ಕಾಚಿಗುಡಕ್ಕೆ ಪ್ರಯಾಣಿಸಿದೆ. ಮೊದಲ ದಿನ ಕೇವಲ ಒಂದು ರೈಲಿಗೆ ಪ್ರಾಯೋಗಿಕ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ರೈಲ್ವೆ ಮೂಲ ಮಾಹಿತಿ ನೀಡಿವೆ.ಈ ಎರಡು ಫ್ಲ್ಯಾಟ್‌ಫಾರಂ 600 ಮೀಟರ್ ಉದ್ದವಿದ್ದು, 23 ರೈಲು ಕೋಚ್‌ಗಳ ನಿಲುಗಡೆಗೆ ಆಸ್ಪದವಿದೆ. ಸುಮಾರು 17 ಕೋಟಿ ರು. ವೆಚ್ಚದಲ್ಲಿ ಈ ಫ್ಲ್ಯಾಟ್‌ಫಾರಂಗಳನ್ನು ನಿರ್ಮಿಸಲಾಗಿದ್ದು, 2022ರ ಬದಲು ಒಂದೂವರೆ ವರ್ಷ ವಿಳಂಬವಾಗಿ ಈಗ ಪೂರ್ಣಗೊಳ್ಳುತ್ತಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಅವರ ಪ್ರಯತ್ನದಲ್ಲಿ ಅನುದಾನ ಮಂಜೂರುಗೊಂಡಿದ್ದು, ಪ್ರಧಾನಮಂತ್ರಿಗಳೇ ಡಿಸೆಂಬರ್ ಅಂತ್ಯದೊಳಗೆ ಈ ಫ್ಲ್ಯಾಟ್‌ಫಾರಂನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಪ್ರಸ್ತುತ 4 ಮತ್ತು 5ನೇ ಫ್ಲ್ಯಾಟ್‌ಫಾರಂ ಸಿದ್ಧವಾದರೂ ಪ್ರಯಾಣಿಕರಿಗೆ ಶೆಲ್ಟರ್, ವಿದ್ಯುದ್ದೀಪ, ಕುಡಿವ ನೀರು ಸೌಕರ್ಯ ಇನ್ನಷ್ಟೆ ಪೂರ್ಣಗೊಳ್ಳಬೇಕಾಗಿದೆ. ಪಾದಚಾರಿ ಮೇಲ್ಸೇತುವೆ ಜನವರಿ ಅಂತ್ಯದೊಳಗೆ ಮುಕ್ತಾಯಗೊಳ್ಳುವ ನಿರೀಕ್ಷೆ ಹೇಳಲಾಗಿದೆ.ರಾತ್ರಿ ಪೂರ್ತಿ ಮೆಗಾ ಬ್ಲಾಕ್: 4 ಮತ್ತು 5ನೇ ಫ್ಲ್ಯಾಟ್‌ಫಾರಂನ ಸಿಗ್ನಲ್ ಸಂಪರ್ಕ ಜೋಡಣೆ ಹಾಗೂ ಪರೀಕ್ಷೆ ಸಲುವಾಗಿ ಶುಕ್ರವಾರ ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಇಡೀ ರಾತ್ರಿ ಮೆಗಾ ಬ್ಲಾಕ್ ಮಾಡಲಾಗಿತ್ತು. ಶುಕ್ರವಾರ ರಾತ್ರಿ 10ರಿಂದ ಶನಿವಾರ ಬೆಳಗ್ಗಿನವರೆಗೆ ಮೆಗಾ ಬ್ಲಾಕ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕಬಕ-ಪುತ್ತೂರು, ಸುಬ್ರಹ್ಮಣ್ಯ ರೈಲು ಸಂಚಾರವನ್ನು 2 ದಿನ ರದ್ದುಪಡಿಸಲಾಗಿತ್ತು. ವೆಸ್ಟ್‌ಕೋಸ್ಟ್ ಎಕ್ಸ್‌ಪ್ರೆಸ್ ರೈಲು ರಾತ್ರಿ ಮಂಗಳೂರು ಸೆಂಟ್ರಲ್ ಬದಲು ಕಾಸರಗೋಡಿನಿಂದ ಸಂಚರಿಸಿದೆ ಎಂದು ಮೂಲ ತಿಳಿಸಿದೆ.