ಮಂಗಳೂರು: ಮಂಗಳೂರಿನ ಲೇಡಿಗೋಷನ್ ತಾಯಿ ಮಗುವಿನ ಆಸ್ಪತ್ರೆ ನಿರ್ವಹಣೆ ಮತ್ತು ಕಾರ್ಯವೈಖರಿ ಅತ್ಯುತ್ತಮವಾಗಿದ್ದು, ಈ ಆಸ್ಪತ್ರೆಯ ಮಾದರಿಯನ್ನು ರಾಜ್ಯದ ಇತರ ಆಸ್ಪತ್ರೆಗಳಲ್ಲಿಯೂ ಅಳವಡಿಸುವ ಬಗ್ಗೆ ಆರೋಗ್ಯ ಸಚಿವರ ಗಮನಕ್ಕೆ ತರುವುದಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಅವರು ಶುಕ್ರವಾರ ನಗರದ ಲೇಡಿಗೋಷನ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಅಲ್ಟ್ರಾ ಸೌಂಡ್ ಕೊಠಡಿ, ತುರ್ತು ನಿಗಾ ವಿಭಾಗ, ಸಖಿ ಕೇಂದ್ರ, ಅಧೀಕ್ಷಕರ ಕೊಠಡಿ ಸೇರಿದಂತೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರಲ್ಲಿ ಮಾತನಾಡಿದರು.
ಆಸ್ಪತ್ರೆಯ ಅಧೀಕ್ಷಕರು ನಿಜಕ್ಕೂ ತಾಯಿ ಹೃದಯದ ವ್ಯಕ್ತಿ ಎಂದು ಬಣ್ಣಿಸಿದ ಡಾ.ನಾಗಲಕ್ಷ್ಮಿ ಚೌಧರಿ, ತಾಯಿ ನೋವಿನ ಜೊತೆಯಲ್ಲಿ ಆಸ್ಪತ್ರೆಗೆ ಬಂದಾಗ ಅವರು ತಾಯಿ ಮಗುವಿನ ಆರೈಕೆಯಲ್ಲಿ ತೋರುವ ಕಾಳಜಿ ಬಹಳ ದೊಡ್ದದು. ಮುಖ್ಯವಾಗಿ ಆಸ್ಪತ್ರೆಯ ಅಟೆಂಡರ್ ಹಾಗೂ ಸಿಬ್ಬಂದಿಯನ್ನು ಬಳಸಿಕೊಳ್ಳುವ ರೀತಿ ಉತ್ತಮವಾಗಿದ್ದು, ಗರ್ಭಿಣಿ, ಬಾಣಂತಿಯರ ಜೊತೆಗೆ ಬಂದ ಪುರುಷರಿಗೆ ಮಾಡಿದ ಪ್ರತ್ಯೇಕವಾದ ವ್ಯವಸ್ಥೆ ಮಾದರಿಯಾಗಿದೆ. ವಿಶೇಷವಾಗಿ ಔಷಧ ದಾಸ್ತಾನು ವಿಚಾರದಲ್ಲಿ ಆಸ್ಪತ್ರೆಯ ಮುಂಜಾಗ್ರತಾ ವ್ಯವಸ್ಥೆ ಬಹಳ ಉತ್ತಮವಾಗಿದೆ. ಮೂರು ತಿಂಗಳ ಮೊದಲೇ ಆಸ್ಪತ್ರೆಗೆ ಬೇಕಾಗುವ ಔಷಧವನ್ನು ಮುಂಚೆಯೇ ಇಂಡೆಂಟ್ ಮಾಡಿಕೊಳ್ಳುವ ಮೂಲಕ ಔಷಧಕ್ಕೆ ಯಾವುದೇ ಕೊರತೆ ಇಲ್ಲದ ವ್ಯವಸ್ಥೆ ಇಲ್ಲಿದೆ ಎಂದರು.