ಮಂಗಳೂರು: ಮಂಗಳೂರು ನಗರದ ವಿವಿಧ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಸುರೇಶ್ ಬಿ. ಹೇಳಿದರು.
ಮಂಗಳೂರು ನಗರದಲ್ಲಿ ವ್ಯವಸ್ಥಿತ, ಸಮರ್ಪಕ ಒಳಚರಂಡಿ ಯೋಜನೆ ಅನುಷ್ಠಾನಕ್ಕೆ ಅನುದಾನ ಕೇಳಿದ್ದಾರೆ. ಇಲ್ಲಿನ ಶಾಸಕರು, ಪ್ರಮುಖರ ಜೊತೆ ಸಿಎಂ ಅವರನ್ನು ಭೇಟಿ ಮಾಡಿ ವಿಶೇಷ ಪ್ಯಾಕೇಜ್ ಮಂಜೂರು ಮಾಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಸರಕಾರ ಯಾವುದೇ ತಾರತಮ್ಯ ಮಾಡದೇ ಸಮಾನವಾಗಿ ಅನುದಾನ ನೀಡುತ್ತಿದೆ. ರಾಜ್ಯಮ 13 ಮಹಾನಗರ ಪಾಲಿಕೆಗಳಿಗೂ ಸಮಾನ ಅನುದಾನ ನೀಡಲಾಗಿದೆ. ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಂಗಳೂರಿನ 18 ಕೆರೆಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಮಂಗಳೂರು ನಗರಕ್ಕೆ 165 ಕೋಟಿ ರು. ವಿಶೇಷ ಅನುದಾನದಡಿಯಲ್ಲಿ ಕಾಮಗಾರಿ ನಡೆಯುತ್ತಿದೆ. ವೈಜ್ಞಾನಿಕ ಮತ್ತು ಶಾಶ್ವತ, ಗುಣಮಟ್ಟದ ಕಾಮಗಾರಿಯಾಗಲಿದೆ ಇದು ಮಂಗಳೂರು ಅಭಿವೃದ್ಧಿಗೆ ಪೂರಕವಾಗಲಿದೆ. ಮಂಗಳೂರು ರಾಜ್ಯ ಪ್ರತಿಷ್ಠಿತ ನಗರ. ರಾಜ್ಯದ ಆರ್ಥಿಕತೆಗೆ ಮಂಗಳೂರು ಜಿಲ್ಲೆ, ನಗರ ಹೆಚ್ಚಿನ ಕೊಡುಗೆ ನೀಡುತ್ತಿದೆ. ಮಂಗಳೂರಿನಲ್ಲೇ ಹೆಚ್ಚಿನ ಉದ್ಯೋಗಗಳು, ಕೆಲಸಗಳು ಸಿಗುವಂತಾಗಬೇಕು. ಐಟಿ ಪಾರ್ಕ್ ನಿರ್ಮಾಣದ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ನದಿಗಳ ಒತ್ತುವರಿ ಆಗಿರುವುದನ್ನು ಸರ್ವೆ ಮಾಡಲು ಒಂದು ಕೋಟಿ ರು.ಇಡಲಾಗಿದೆ. ಈ ಮೂಲಕ ಒತ್ತುವರಿ ತೆರವಿಗೆ ಕ್ರಮ ವಹಿಸುತ್ತೇವೆ ಎಂದರು.
ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಂಗಳೂರು ಮಹಾನಗರ ಪಾಲಿಕೆ ಎತ್ತರಕ್ಕೆ ಬೆಳೆಯುವ ಪಾಲಿಕೆಯಾಗಿದ್ದು, ಇಲ್ಲಿನ ಅಭಿವೃದ್ಧಿಗೆ ಸರಕಾರ ವಿಶೇಷ ಗಮನಹರಿಸಬೇಕು. ನಗರದಲ್ಲಿ ಸಮರ್ಪಕವಾದ ಒಳಚರಂಡಿ ವ್ಯವಸ್ಥೆ ಅನುಷ್ಢಾನ ಆಗಬೇಕಾಗಿದ್ದು, ಇದಕ್ಕೆ ಸಾವಿರ ಕೋಟಿ ರು. ವಿಶೇಷ ಅನುದಾನ ನೀಡಬೇಕು. ರಾಜ ಕಾಲುವೆಗಳ ಹೂಳು ತೆರವಿಗೆ ಸಮಗ್ರ ಯೋಜನೆ ರೂಪಿಸಬೇಕು, ಕುದ್ಮುಲ್ ರಂಗರಾವ್ ಸಮಾಧಿ ಅಭಿವೃದ್ಧಿ, ಅಂಬೇಡ್ಕರ್ ವೃತ್ತ ಅನುಷ್ಠಾನ ಮುಂತಾದ ಬೇಡಿಕೆಗಳ ಈಡೇರಿಸಲು ಸಚಿವ ಬೈರತಿ ಸುರೇಶ್ ಅವರು ಕ್ರಮವಹಿಸಬೇಕು ಎಂದು ಅಹವಾಲು ಮುಂದಿರಿಸಿದರು.