ಮಂಗಳೂರು: ಕರಾವಳಿಯಲ್ಲಿ ಮಂಗಳವಾರ ಸಾಧಾರಣ ಪ್ರಮಾಣದಲ್ಲಿ ಧಾರಾಕಾರ ಮಳೆ ಸುರಿದಿದೆ. ದ.ಕ. ಜಿಲ್ಲೆಯಲ್ಲಿ ದಿನವಿಡೀ ಹಗುರದಿಂದ ಮಳೆಯಾಗಿದ್ದು, ಮುಂಗಾರು ಮಳೆ ವೇಗ ಪಡೆದುಕೊಂಡಿದೆ. ಭಾರತೀಯ ಹವಾಮಾನ ಇಲಾಖೆ ಜು.3ರ ವರೆಗೆ ದ.ಕ. ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.
ಅಲ್ಲಲ್ಲಿ ಮಳೆ ಹಾನಿ: ಮಧ್ಯಾಹ್ನ ವೇಳೆ ಬೀಸಿದ ಅಬ್ಬರದ ಗಾಳಿಗೆ ಪಂಪ್‌ವೆಲ್ ಹಾಗೂ ನಂತೂರು ಮಧ್ಯೆ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ಖಾಸಗಿ ಸಿಟಿ ಬಸ್ ಮೇಲೆ ಬೃಹತ್ ಮರ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಬಸ್ ಚಾಲಕ ಮತ್ತು ನಿರ್ವಾಹಕ ವಾಹನವನ್ನು ರಸ್ತೆ ಬದಿ ನಿಲ್ಲಿಸಿ ಊಟಕ್ಕೆ ತೆರಳಿದ್ದರು. ಬಸ್‌ನಲ್ಲಿ ಪ್ರಯಾಣಿಕರು ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮರ ಬಿದ್ದ ರಭಸಕ್ಕೆ ಬಸ್‌ಗೆ ಅಲ್ಪಸ್ವಲ್ಪ ಹಾನಿಯಾಗಿದೆ. ಈ ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವು ಗಂಟೆಗಳ ಕಾಲ ಸಂಚಾರ ಸಂಪೂರ್ಣ ಸ್ಥಗಿತಗೊಂಡು ವಾಹನ ಸವಾರರು ಪರದಾಡುವಂತಾಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಮರವನ್ನು ಕತ್ತರಿಸಿ ತೆರವುಗೊಳಿಸುವ ಮೂಲಕ ಸಂಚಾರ ಸುಗಮಗೊಳಿಸಿದರು.
ತಗ್ಗು ಪ್ರದೇಶ ಜಲಾವೃತ:ಬಿರುಗಾಳಿ ಸಹಿತ ಮಳೆಗೆ ನಗರದ ಪ್ರಮುಖ ಪ್ರದೇಶಗಳಾದ ಕೂಳೂರು ಮತ್ತು ಬಂಗ್ರಕೂಳೂರು ಸುತ್ತಮುತ್ತಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಬಂಗ್ರಕೂಳೂರು ಸಮೀಪದ ಪೆಟ್ರೋಲ್ ಬಂಕ್‌ಗೆ ಮಳೆನೀರು ನುಗ್ಗಿದ್ದರಿಂದ ಗ್ರಾಹಕರು ಮತ್ತು ಸಿಬ್ಬಂದಿ ತೊಂದರೆ ಅನುಭವಿಸಿದರು.
ಬೆಳ್ತಂಗಡಿ ಗರಿಷ್ಠ ಮಳೆ:ಮಂಗಳವಾರ ಬೆಳಗ್ಗಿನ ವರೆಗೆ ಜಿಲ್ಲೆಯ ಬೆಳ್ತಂಗಡಿಯಲ್ಲಿ ಗರಿಷ್ಠ 57.6 ಮಿಲಿ ಮೀಟರ್ ಮಳೆ ದಾಖಲಾಗಿದೆ. ಬಂಟ್ವಾಳ 38.7 ಮಿ.ಮೀ, ಮಂಗಳೂರು 37.6 ಮಿ.ಮೀ, ಪುತ್ತೂರು 27.1 ಮಿ.ಮೀ, ಸುಳ್ಯ 34.3 ಮಿ.ಮೀ, ಮೂಡುಬಿದಿರೆ 45.3 ಮಿ.ಮೀ, ಕಡಬ 44.9 ಮಿ.ಮೀ, ಮೂಲ್ಕಿ 28.7 ಮಿ.ಮೀ, ಉಳ್ಳಾಲ 56.2 ಮಿ.ಮೀ. ಮಳೆ ದಾಖಲಾಗಿದೆ. ದ.ಕ. ಜಿಲ್ಲೆಯ ಗರಿಷ್ಠ ಮಳೆ 44 ಮಿ.ಮೀ. ವರದಿಯಾಗಿದೆ.ನದಿ ಹರಿವು ಏರಿಕೆ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಉಪ್ಪಿನಂಗಡಿಯಲ್ಲಿ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳೆರಡರಲ್ಲಿ ನೀರಿನ ಹರಿವಿನಲ್ಲಿ ಹೆಚ್ಚಳ ಕಂಡು ಬಂದಿದ್ದು, ಮಂಗಳವಾರ ನದಿಯ ಒಡಲು ಆವರಿಸಿ ನೀರು ಹರಿಯತೊಡಗಿದೆ.