ಕನ್ನಡಪ್ರಭ ವಾರ್ತೆ ಮಂಗಳೂರು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನ ಹಾಗೂ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಜಿಲ್ಲಾಡಳಿತದ ಸಹಕಾರದಲ್ಲಿ ‘ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ ಸೀಸನ್-3’ಗೆ ಶನಿವಾರ ಚಾಲನೆ ನೀಡಲಾಗಿದೆ. ಜನವರಿ 18 ರಿಂದ 22 ರ ವರೆಗೆ ಐದು ದಿನಗಳ ಕಾಲ ಮಂಗಳೂರಿನ ಕರಾವಳಿ ಉತ್ಸವ ಮೈದಾನದಿಂದ ನಾರಾಯಣ ಗುರು ವೃತ್ತ, ಮಣ್ಣಗುಡ್ಡ ಗುರ್ಜಿ ವೃತ್ತ, ಕೆನರಾ ಉರ್ವ ವರೆಗೆ ಪ್ರತಿ ನಿತ್ಯ ಸಂಜೆ 4ರಿಂದ ರಾತ್ರಿ 10 ರ ವರೆಗೆ ಈ ಆಹಾರೋತ್ಸವ ನಡೆಯಲಿದೆ. ಸುಮಾರು 150ಕ್ಕೂ ಅಧಿಕ ಆಹಾರದ ಮಳಿಗೆಗಳು ಆಗಮಿಸಿದ್ದು, ತನ್ನದೇ ವಿಶಿಷ್ಟ ಶೈಲಿಯಲ್ಲಿ ಚಹಾ ಮಾಡುವ ಮುಂಬೈನ ಡಾಲಿ ಚಾಯ್‌ವಾಲ ಅವರು ಈ ಬಾರಿಯ ಆಹಾರೋತ್ಸವದಲ್ಲಿ ಗಮನ ಸೆಳೆಯುತ್ತಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ್ ಕಾಮತ್, ಪಾಲಿಕೆ ಮೇಯರ್ ಮನೋಜ್ ಕುಮಾರ್, ಡಾಲಿ ಚಾಯ್‌ವಾಲಾ ಮತ್ತಿತರರಿದ್ದರು. ಆಹಾರೋತ್ಸವದಲ್ಲಿ ಏನೇನು?
ಗ್ರಾಹಕರಿಗೆ ತುಳುನಾಡಿನ ಸಾಂಪ್ರದಾಯಿಕ ಆಹಾರ ಶೈಲಿ ಮಾತ್ರವಲ್ಲದೇ, ವಿಶಿಷ್ಟವಾದ ಕರಾವಳಿ ಖಾದ್ಯ, ಉತ್ತರ ಕರ್ನಾಟಕ, ಗುಜರಾತಿ, ಆಂಧ್ರ, ಪಂಜಾಬಿ ಸೇರಿದಂತೆ ದಕ್ಷಿಣ ಭಾರತೀಯ, ಉತ್ತರ ಭಾರತೀಯ, ಸಸ್ಯಾಹಾರಿ, ಮಾಂಸಾಹಾರಿ, ಹೀಗೆ ಬಹು ಬೇಡಿಕೆಯ ವಿವಿಧ ಶೈಲಿಯ ಸಾಂಪ್ರದಾಯಿಕ ಆಹಾರ ಮಳಿಗೆಗಳು ಇರಲಿವೆ.ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ್, ಪ್ರತಿಷ್ಠಾನದ ಪ್ರಮುಖರಾದ ಯತೀಶ್ ಬೈಕಂಪಾಡಿ, ಅಶ್ವಿತ್ ಕೊಟ್ಟಾರಿ, ಲಲಿತ್ ಮೆಂಡನ್, ಜಗದೀಶ್ ಕದ್ರಿ ಮತ್ತಿತರಿದ್ದರು.