ಮಂಗಳೂರು: ಏಪ್ರಿಲ್ 5ರಂದು ನಂದಿ ರಥಯಾತ್ರೆ ಬೃಹತ್‌ ಸಮಾರೋಪ

KannadaprabhaNewsNetwork | Published : Apr 2, 2025 1:05 AM

ಸಾರಾಂಶ

ಗೋಸೇವಾ ಗತಿವಿಧಿ ಕರ್ನಾಟಕ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ ಆಶ್ರಯದಲ್ಲಿ 95 ದಿನಗಳ ಕಾಲ ರಾಜ್ಯಾದ್ಯಂತ ಸಂಚರಿಸಿದ ನಂದಿ ರಥಯಾತ್ರೆಯ ರಾಜ್ಯ ಮಟ್ಟದ ಬೃಹತ್ ಸಮಾರೋಪ ಏ.5ರಂದು ಸಂಜೆ 5.30ಕ್ಕೆ ನಗರದ ಕದ್ರಿ ಮೈದಾನದಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಗೋಸೇವಾ ಗತಿವಿಧಿ ಕರ್ನಾಟಕ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ ಆಶ್ರಯದಲ್ಲಿ 95 ದಿನಗಳ ಕಾಲ ರಾಜ್ಯಾದ್ಯಂತ ಸಂಚರಿಸಿದ ನಂದಿ ರಥಯಾತ್ರೆಯ ರಾಜ್ಯ ಮಟ್ಟದ ಬೃಹತ್ ಸಮಾರೋಪ ಏ.5ರಂದು ಸಂಜೆ 5.30ಕ್ಕೆ ನಗರದ ಕದ್ರಿ ಮೈದಾನದಲ್ಲಿ ನಡೆಯಲಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋಸೇವಾ ಗತಿವಿಧಿ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಪ್ರವೀಣ್ ಸರಳಾಯ, ಅಂದು ಮಧ್ಯಾಹ್ನ 3.30ಕ್ಕೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಕದ್ರಿ ಮೈದಾನದವರೆಗೆ ನಂದಿ ರಥಯಾತ್ರೆಯ ಶೋಭಾಯಾತ್ರೆ ನಡೆಯಲಿದೆ. ಕರಾವಳಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಎಸ್. ಗಣೇಶ್ ರಾವ್ ಶೋಭಾಯಾತ್ರೆ ಉದ್ಘಾಟಿಸುವರು. ವಿಶೇಷ ಆಕರ್ಷಣೆಯಾಗಿ ಜಿಲ್ಲೆಯ 108 ಕುಣಿತ ಭಜನಾ ತಂಡಗಳು ಭಾಗವಹಿಸಲಿವೆ. ಜತೆಗೆ ಸಾಮೂಹಿಕ ವಿಷ್ಣು ಸಹಸ್ರ ನಾಮ ಪಠಣ, ಸ್ಯಾಕ್ಸೋಫೋನ್, ಚೆಂಡೆ ವಾದನ, ಆಕರ್ಷಕ ಟ್ಯಾಬ್ಲೊಗಳು, ಜಾನಪದ ಗೊಂಬೆಗಳು ಪೂರ್ಣಕುಂಭ ಸ್ವಾಗತದೊಂದಿಗೆ ಭವ್ಯ ಶೋಭಾಯಾತ್ರೆಯಲ್ಲಿ ಸಾಗಿ ಬರಲಿವೆ ಎಂದು ತಿಳಿಸಿದರು.ಸಂಜೆ 5.30ಕ್ಕೆ ಕದ್ರಿ ಮೈದಾನದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಅಧ್ಯಕ್ಷತೆ ವಹಿಸುವರು. ಗೋಸೇವಾ ಗತಿವಿಧಿ ಅಖಿಲ ಭಾರತೀಯ ಸಂಯೋಜಕ ಅಜಿತ್ ಪ್ರಸಾದ್ ಮಹಾಪಾತ್ರ ದಿಕ್ಸೂಚಿ ಭಾಷಣ ಮಾಡುವರು. ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ.ವೈ. ಭರತ್ ಶೆಟ್ಟಿ, ಮುದ್ದೇನಹಳ್ಳಿ ಶ್ರೀ ಸಾಯಿ ಸಂಸ್ಥೆಯ ಗೋವಿಂದ ರೆಡ್ಡಿ, ರಾಷ್ಟ್ರೀಯ ಗೋಸೇವಾ ಸಂಸ್ಥಾನ್ ಟ್ರಸ್ಟ್ ಅಧ್ಯಕ್ಷ ಭಕ್ತಿಭೂಷಣ್ ದಾಸ್ ಅತಿಥಿಗಳಾಗಿ ಭಾಗವಹಿಸುವರು ಎಂದರು.ಇದಕ್ಕೂ ಮೊದಲು ಮಧ್ಯಾಹ್ನ 2ರಿಂದ ರಾತ್ರಿವರೆಗೆ ಕದ್ರಿ ಮೈದಾನದಲ್ಲಿ ದೇಶಿಯ ಗೋತಳಿಗಳ ಪ್ರದರ್ಶನ- ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ. ಗೋವುಗಳಲ್ಲಿ ಅಪರೂಪವಾಗಿರುವ ಗಜಗಾತ್ರದ ವಿಶೇಷ ತಳಿಗಳನ್ನು ವೀಕ್ಷಿಸಲು ಅವಕಾಶವಿದೆ. ಗೋವುಗಳಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಹೇಳಿದರು.ರಾಷ್ಟ್ರೀಯ ಗೋಸೇವಾ ಸಂಸ್ಥಾನ್ ಟ್ರಸ್ಟ್ ಅಧ್ಯಕ್ಷ ಭಕ್ತಿಭೂಷಣ್ ದಾಸ್, ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ಸ್ವಾಗತ ಸಮಿತಿ ಅಧ್ಯಕ್ಷ ಗಿರಿಧರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಗದೀಶ ಶೇಣವ ಇದ್ದರು.

........

9 ಸಾವಿರ ಕಿ.ಮೀ. ಸಂಚಾರ

2024ರ ಡಿ.31ರಂದು ಬಂಟ್ವಾಳ ತಾಲೂಕಿನ ಪುದು ಗ್ರಾಮದ ರಾಧಾ ಸುರಭೀ ಗೋ ಮಂದಿರದಲ್ಲಿ ಚಾಲನೆ ಪಡೆದ ನಂದಿ ರಥಯಾತ್ರೆ ಗೋಸೇವಾ ಗತಿವಿಧಿ 95 ದಿನಗಳ ಕಾಲ 9 ಸಾವಿರ ಕಿ.ಮೀ ಸಂಚರಿಸಿದೆ ಎಂದು ಪ್ರವೀಣ್ ಸರಳಾಯ ತಿಳಿಸಿದರು.

Share this article