ನವ ವಿಧ- ನವ ವರ್ಷದ ವಿಶಿಷ್ಟತೆ ಸಾರಿದ ಮಂಗಳೂರು ಕಂಬಳ

KannadaprabhaNewsNetwork |  
Published : Dec 29, 2025, 03:30 AM IST
ಮಂಗಳೂರು ಕಂಬಳ ಉದ್ಘಾಟನಾ ಕಾರ್ಯಕ್ರಮ | Kannada Prabha

ಸಾರಾಂಶ

ಬಂಗ್ರಕೂಳೂರಿನ ಗೋಲ್ಡ್‌ಫಿಂಚ್‌ ಸಿಟಿಯಲ್ಲಿ ನಡೆದ 9ನೇ ವರ್ಷದ ‘ಮಂಗಳೂರು ಕಂಬಳ’ದ ಉದ್ಘಾಟನಾ ಸಮಾರಂಭ

ಮಂಗಳೂರು: ಮಂಗಳೂರು ಕೇವಲ ನಮ್ಮ ನೆಲವಲ್ಲ, ಇದು ಸನಾತನ ಸಂಸ್ಕೃತಿಯ ನೆಲೆಬೀಡು ಮತ್ತು ತುಳುನಾಡಿನ ಅಸ್ಮಿತೆ. ಹೀಗಿರುವಾಗ, ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ತಪ್ಪು ಅಭಿಪ್ರಾಯ- ಅಪಪ್ರಚಾರ ಹುಟ್ಟು ಹಾಕುವ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಹೋರಾಡುವ ಜತೆಗೆ ಸ್ಥಳೀಯರ ಪಾಲ್ಗೊಳ್ಳುವಿಕೆಯೊಂದಿಗೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸಿನಂತೆ ನಮ್ಮ ‘ಮಂಗಳೂರು 2.0’ ಹಾಗೂ ‘ವಿಕಸಿತ ಮಂಗಳೂರು’ ನಿರ್ಮಾಣ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ದಕ್ಷಿಣ ಕನ್ನಡ ಸಂಸದ ಹಾಗೂ ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಕ್ಯಾ. ಬ್ರಿಜೇಶ್ ಚೌಟ ಕರೆ ನೀಡಿದ್ದಾರೆ. ಬಂಗ್ರಕೂಳೂರಿನ ಗೋಲ್ಡ್‌ಫಿಂಚ್‌ ಸಿಟಿಯಲ್ಲಿ ನಡೆದ 9ನೇ ವರ್ಷದ ‘ಮಂಗಳೂರು ಕಂಬಳ’ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ನಮ್ಮ ನೆಲದ ಭವಿಷ್ಯವನ್ನು ನಮ್ಮವರೇ ರೂಪಿಸಬೇಕು ಮತ್ತು ಇಲ್ಲಿನ ಅಭಿವೃದ್ಧಿಯಲ್ಲಿ ಸ್ಥಳೀಯರ ಪಾಲ್ಗೊಳ್ಳುವಿಕೆ ಅತ್ಯಗತ್ಯ. 8 ವರ್ಷದ ಹಿಂದೆ ಆರಂಭಗೊಂಡ ಈ ಕಂಬಳ ತುಳುನಾಡಿನ ಎಲ್ಲ ವರ್ಗದವರು, ಸಮುದಾಯದವರನ್ನು ಒಂದಾಗಿ ಜೋಡಿಸುವಲ್ಲಿ ಯಶಸ್ವಿಯಾಗಿದೆ. 9ನೇ ವರ್ಷದ ಈ ಕಂಬಳವನ್ನು ನವ ವಿಧ- ನವ ವರ್ಷದ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಆಯೋಜಿಸಲಾಗಿದೆ ಎಂದು ಹೇಳಿದರು.

ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಕಟೀಲು ದುರ್ಗಾಪರಮೇಶ್ವರಿ ದೇವಳದ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಕ್ಯಾ. ಗಣೇಶ್ ಕಾರ್ಣಿಕ್, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕರಾಮ್ ಪೂಜಾರಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಸುನಿಲ್ ಆಚಾರ್, ವಿನೋದ್ ಶೆಣೈ, ಪ್ರಸಾದ್ ಕುಮಾರ್ ಶೆಟ್ಟಿ, ಜಯಾನಂದ್ ಅಂಚನ್, ಕದ್ರಿ ನವನೀತ್ ಶೆಟ್ಟಿ, ಅನಿಲ್ ಕುಮಾರ್, ಮನೋಹರ್ ಜೋಷಿ, ಕಿರಣ್ ಕುಮಾರ್ ಕೋಡಿಕಲ್, ಶಕೀಲಾ ಖಾವ, ಸಂಧ್ಯಾ ಅಚಾರ್, ಶೋಭಾ ರಾಜೇಶ್, ಹೆಚ್.ಕೆ ಪುರುಷೋತ್ತಮ, ಪ್ರದೀಪ್ ಕುಮಾರ್ ಕಲ್ಕೂರ, ಗೋಪಾಲ್ ಕುತ್ತಾರ್ ಮತ್ತಿತರರು ಇದ್ದರು. ಕಂಬಳದ ನೆಲದಲ್ಲಿ ವಂದೇ ಮಾತರಂ

ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ ಸಂಭ್ರಮಕ್ಕಾಗಿ, ಶ್ವೇತವಸ್ತ್ರ ಧರಿಸಿದ 150 ವಿದ್ಯಾರ್ಥಿನಿಯರು ಕೆಸರು ಗದ್ದೆಯ ಬದಿಯಲ್ಲಿ ನಿಂತು ಏಕಕಂಠದಿಂದ ಈ ಗೀತೆಯನ್ನು ಹಾಡತೊಡಗಿದಾಗ ಇಡೀ ಪರಿಸರವೇ ದೇಶಭಕ್ತಿಯನ್ನು ಮೊಳಗಿಸುವಂತೆ ಮಾಡಿತು. ತುಳುನಾಡಿನ ಮಣ್ಣಿನ ವಾಸನೆ ಮತ್ತು ತಾಯಿ ಭಾರತಾಂಬೆಯ ಸ್ತುತಿ ಒಂದಾದ ಆ ಕ್ಷಣ, ನೆರೆದಿದ್ದ ಪ್ರತಿಯೊಬ್ಬರ ಮೈ-ಮನಗಳಲ್ಲಿ ದೇಶಪ್ರೇಮದ ಅಲೆ ಎಬ್ಬಿಸಿತು. ಜಾನಪದ ಕ್ರೀಡೆಯ ಅಬ್ಬರದ ನಡುವೆ ಕೇಳಿಬಂದ ಆ ಸುಮಧುರ ಗಾಯನ, ನಮ್ಮ ಮಣ್ಣಿನ ಸಂಸ್ಕೃತಿ ಮತ್ತು ರಾಷ್ಟ್ರೀಯತೆಯ ಅಪೂರ್ವ ಸಂಗಮವಾಗಿ ‘ನವ ವೈವಿಧ್ಯ’ದ ಶ್ರೇಷ್ಠತೆಯನ್ನು ಸಾರಿತು.

ನವವಿಧ- ನವವರ್ಷ

ವೀರ ವನಿತೆ ರಾಣಿ ಅಬ್ಬಕ್ಕ ಚರಿತ್ರೆಯ ಚಿತ್ರಕಲಾ ಪ್ರದರ್ಶನ, ಪ್ರಧಾನಿಯವರ ‘ಏಕ್ ಪೆಡ್ ಮಾ ಕೆ ನಾಮ್’ ಅಭಿಯಾನದಡಿ ಗಿಡಗಳ ವಿತರಣೆ, ‘ಬ್ಯಾಕ್ ಟು ಊರು’ ಉದ್ಯಮಿಗಳಿಗೆ ಸನ್ಮಾನ ಹಾಗೂ ವೃದ್ಧಾಶ್ರಮದ ಹಿರಿಯ ಚೇತನಗಳೊಂದಿಗೆ ಸಂಭ್ರಮ ಹಂಚಿಕೊಳ್ಳುವ 5 ವಿಶಿಷ್ಟ ಚಟುವಟಿಕೆಗಳು ಈ ಬಾರಿಯ ಮಂಗಳೂರು ಕಂಬಳದ ವಿಶೇಷ. ಇದರೊಂದಿಗೆ ಮಕ್ಕಳಿಗಾಗಿ ‘ರಂಗ್‌ ದ ಕೂಟ’ ಚಿತ್ರಕಲೆ, ಫೋಟೋಗ್ರಫಿ, ರೀಲ್ಸ್ ಹಾಗೂ ತಾಂತ್ರಿಕತೆಯ ಮೆರುಗು ನೀಡುವ ‘ಎಐ ಕ್ರಿಯೇಟಿವ್ ಯೋಧ’ ಸೇರಿದಂತೆ ನಾಲ್ಕು ವೈವಿಧ್ಯಮಯ ಸ್ಪರ್ಧೆಗಳು ಕಂಬಳದ ಗತ್ತು-ಗಮ್ಮತ್ತನ್ನು ಮತ್ತಷ್ಟು ಹೆಚ್ಚಿಸಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕ ಸಂಸ್ಕೃತಿ ಸಂವೇದನೆಗೆ ಸಂಬಂಧಿಸಿದ್ದು: ಬರಗೂರು
ಜಿಬಿಎ ಚುನಾವಣೆಗೆ ಕಾಂಗ್ರೆಸ್‌ ಅರ್ಜಿಗೆ ₹50 ಸಾವಿರ!