ಮಾವಿನ ಸುಗ್ಗಿ ಈ ಬಾರಿ ವಿಳಂಬ?

KannadaprabhaNewsNetwork |  
Published : Dec 12, 2023, 12:45 AM IST
ಮುಂಡಗೋಡ: ತಾಲೂಕಿನಲ್ಲಿ ಮಾವಿನ ಮರಗಳು ನೆನೆ (ಹೂವು) ಬಿಡುತ್ತಿವೆ. | Kannada Prabha

ಸಾರಾಂಶ

ಮುಂಡಗೋಡ ತಾಲೂಕಿನ ೫ ಸಾವಿರ ಎಕರೆಗೂ ಅಧಿಕ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಆಪೂಸ್‌, ಪೈರಿ, ಇಸಾಡ್, ಸಿಂದೂಲಾ, ಮಾನಕೂರ, ಗಿಳಿಮಾವು, ಮಲ್ಲಿಕಾ, ಮಲಗೋಬಾ ಸೇರಿದಂತೆ ಹಲವಾರು ತಳಿಯ ಮಾವು ಬೆಳೆಯಲಾಗಿದೆ.

ಸಂತೋಷ ದೈವಜ್ಞ

ಮುಂಡಗೋಡ:

ಹವಮಾನ ವೈಪರೀತ್ಯ ಹಾಗೂ ಪೂರ್ಣ ಪ್ರಮಾಣದಲ್ಲಿ ಮುಂಗಾರು ಮಳೆ ಸುರಿಯದೆ ಇರುವುದರಿಂದ ನಿಗದಿತ ಅವಧಿಗಿಂತ ಒಂದು ತಿಂಗಳು ವಿಳಂಬವಾಗಿ ಮಾವಿನ ಮರಗಳು ನೆನೆ (ಹೂವು) ಬಿಡುತ್ತಿದ್ದು, ಈ ಬಾರಿ ಮಾವಿನ ಸುಗ್ಗಿ ವಿಳಂಬವಾಗುವ ಮುನ್ಸೂಚನೆ ನೀಡುತ್ತಿದೆ.

ಜತೆಗೆ ಇಳುವರಿಯೂ ಕುಂಠಿತವಾಗಲಿದೆ ಎಂಬ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಹೇಳಿಕೆ ರೈತರಿಗೆ ಗಾಯ ಮೇಲೆ ಬರೆ ಎಳೆದಂತೆ ಆಗಿದೆ.ಈ ಹಿಂದೆ ನವೆಂಬರ್‌ ತಿಂಗಳಲ್ಲಿಯೇ ಮೈತುಂಬ ಹೂ ಬಿಟ್ಟು ಕಂಗೊಳಿಸಿ ಬೆಳೆಗಾರರಲ್ಲಿ ಉತ್ತಮ ಫಸಲು ನೀಡುವ ನಿರೀಕ್ಷೆ ಹುಟ್ಟಿಸುತ್ತಿತ್ತು. ಆದರೆ, ಈ ಬಾರಿ ಇದೀಗ ಅಲ್ಲಲ್ಲಿ ಹೂವು ಬಿಡುತ್ತಿದ್ದು, ಬಹುತೇಕ ಕಡೆ ಹೂವು ಬಿಡುವುದು ವಿಳಂಬವಾಗಿದ್ದು ಬೆಳೆಗಾರರಲ್ಲಿ ಭಯದ ಛಾಯೆ ಮೂಡಿಸಿದೆ.ಮುಂಡಗೋಡ ತಾಲೂಕಿನ ೫ ಸಾವಿರ ಎಕರೆಗೂ ಅಧಿಕ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಆಪೂಸ್‌, ಪೈರಿ, ಇಸಾಡ್, ಸಿಂದೂಲಾ, ಮಾನಕೂರ, ಗಿಳಿಮಾವು, ಮಲ್ಲಿಕಾ, ಮಲಗೋಬಾ ಸೇರಿದಂತೆ ಹಲವಾರು ತಳಿಯ ಮಾವು ಬೆಳೆಯಲಾಗಿದೆ. ಮಾವಿನ ಕಣಜ ಎಂದೇ ಪ್ರಸಿದ್ಧವಾಗಿರುವ ತಾಲೂಕಿನ ಪಾಳಾ ಭಾಗದಲ್ಲಿ ಲಕ್ಷಾಂತರ ರೂಪಾಯಿ ನೀಡಿ ಮಾವಿನ ತೋಟಗಳನ್ನು ಗೇಣಿ ಪಡೆಯುವುದು ಸಾಮಾನ್ಯ. ಅದರಂತೆ ಗೇಣಿ ಪಡೆದ ದಲ್ಲಾಳಿಗಳು ಈಗಾಗಲೇ ಲಗ್ಗೆ ಇಟ್ಟು ಔಷಧೋಪಚಾರ ನಿರ್ವಹಣಾ ಕಾರ್ಯ ಪ್ರಾರಂಭಿಸಿದ್ದಾರೆ.ಇಲಾಖೆ ನಿರ್ಲಕ್ಷ್ಯ:

ಇಲ್ಲಿಯ ಬಹುತೇಕ ರೈತರು ಹೆಚ್ಚಿನ ಪ್ರಮಾಣದಲ್ಲಿ ಮಾವಿನ ತೋಪು ಮಾಡಿಕೊಂಡಿದ್ದಾರೆ. ಇಲ್ಲಿಂದ ಸಾಕಷ್ಟು ಪ್ರಮಾಣದ ಮಾವಿನ ಬೆಳೆ ವಿವಿಧ ರಾಜ್ಯಗಳ ಪಾನಿಯ ಕಂಪನಿಗಳಿಗೆ ರಪ್ತಾಗುತ್ತದೆ. ಅಷ್ಟರಮಟ್ಟಿಗೆ ಇಲ್ಲಿ ಮಾವು ಬೆಳೆಯಲಾಗುತ್ತದೆ. ಆದರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳೆಗಾರರಿಗೆ ಬೆಳೆಗಳ ಪೋಷಣೆ ನಿರ್ವಹಣಾ ಕ್ರಮಗಳ ಬಗ್ಗೆ ರೈತರಿಗೆ ಸಮರ್ಪಕವಾದ ಮಾಹಿತಿ ನೀಡಿ ಜಾಗೃತಿ ಮೂಡಿಸುವ ಹಾಗೂ ಮಾವಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಕೆಲಸ ಮಾಡುತ್ತಿಲ್ಲ ಎಂಬ ಆರೋಪ ಇದೆ. ಈ ವೇಳೆಯಲ್ಲಾದರೂ ಮಾವಿನ ಫಸಲಿನ ಪಾಲನೆ-ಪೋಷಣೆ ಬಗ್ಗೆ ರೈತರಿಗೆ ಸಮಗ್ರ ಮಾಹಿತಿ ನೀಡಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.ಇಳುವರಿ ಕುಂಠಿತ:ಈ ಬಾರಿ ಮುಂಗಾರು ಮಳೆ ಸಮರ್ಪಕ ಸುರಿಯದೆ ಇರುವುದರಿಂದ ಮಾವಿನ ಹೂವು ಬಿಡುವುದು ವಿಳಂಬವಾಗಿದೆ. ಹೀಗಾಗಿ ಈ ಬಾರಿ ಇಳುವರಿಯಲ್ಲೂ ಕುಂಠಿತವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ಆತಂಕಗೊಂಡಿರುವ ರೈತರು ಬರುವ ಅಲ್ಪಸ್ವಲ್ಪ ಬೆಳೆಯೂ ಮಳೆಗಾಲದಲ್ಲಿ ಬಂದರೆ

ಬೇಡಿಕೆ ಇರುವುದಿಲ್ಲ. ಮಳೆ-ಗಾಳಿಗೆ ಬೆಳೆ ಹಾನಿಯಾಗುತ್ತದೆ ಎಂದು ಚಿಂತಿತರಾಗಿದ್ದಾರೆ.

ತೋಪುಗಳಿಗೆ ಬೇಡಿಕ ಕುಂಠಿತ:ಪ್ರಾರಂಭದ ವಾತಾವರಣ ನೋಡಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಮಾವಿನ ತೋಟವನ್ನು ಲಕ್ಷಾಂತರ ರೂಪಾಯಿಗೆ ಗುತ್ತಿಗೆ ಪಡೆದು ಹಲವು ತಿಂಗಳು ನಿರ್ವಹಣೆ ಮಾಡಿ ಕೊನೆಯ ಕ್ಷಣದಲ್ಲಿ ಕೈ ಸುಟ್ಟುಕೊಂಡ ಅನುಭವ ಕೂಡ ದಲ್ಲಾಳಿಗಳಿಗಿದೆ. ಕಳೆದ ೩-೪ ವರ್ಷಗಳಿಂದ ಕೊರೋನಾ ಲಾಕ್‌ಡೌನ್, ಮಾವಿಗೆ ಯೋಗ್ಯ ದರ ಸಿಗದೆ ಇರುವುದರಿಂದ ನಷ್ಟವಾಗಿದ್ದರಿಂದ ದಲ್ಲಾಳಿಗಳು ಮಾವಿನ ತೋಪುಗಳನ್ನು ಗೇಣಿ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಮಾವಿನ ತೋಪುಗಳಿವೆ ಬೇಡಿಕೆ ಕಡಿಮೆಯಾಗಿರುವುದು ಕಂಡು ಬರುತ್ತಿದೆ.

ಬೆಳೆ ವಿಮೆ ವ್ಯಾಪ್ತಿಗೆ ಮಾವು.ಇಲ್ಲಿಯ ವರೆಗೆ ಮಾವು ಬೆಳೆಯನ್ನು ಬೆಳೆ ವಿಮೆ ವ್ಯಾಪ್ತಿಗೆ ಸೇರಿಸಿರಲಿಲ್ಲ. ಇದರಿಂದ ನಷ್ಟ ಅನುಭವಿಸಿದರೂ ಬೆಳೆಗಾರರಿಗೆ ಸರ್ಕಾರದಿಂದ ಯಾವುದೇ ಪರಿಹಾರ ದೊರೆಯುತ್ತಿರಲಿಲ್ಲ. ಆದರೆ, ಈ ವರ್ಷದಿಂದ ಮಾವು ಬೆಳೆಯನ್ನು ಬೆಳೆ ವಿಮೆ ವ್ಯಾಪ್ತಿಗೆ ಸೇರಿಸಿದ್ದು ರೈತರು ವಿಮೆ ತುಂಬಿದ್ದಾರೆ. ಹೀಗಾಗಿ ಅವರು ಭಯಪಡುವ ಅಗತ್ಯವಿಲ್ಲ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಧೈರ್ಯ ತುಂಬಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಪೂರ್ಣಪ್ರಮಾಣದ ಮಳೆ ಆಗದೆ ಇರುವುದರಿಂದ ಮಾವಿನ ಹೂವು ಬಿಡುವುದು ವಿಳಂಬವಾಗಿದೆ. ಇದರಿಂದ ಇಳುವರಿಯಲ್ಲೂ ಕುಂಠಿತವಾಗುವ ಸಾಧ್ಯತೆ ಇದೆ. ಈ ವರ್ಷ ಮಾವಿನ ಬೆಳೆ ವಿಮೆ ತುಂಬಿಸಿಕೊಂಡಿದ್ದು ಬೆಳೆಗಾರರು ಆತಂಕ ಪಡಬೇಕಾಗಿಲ್ಲ ಎಂದು ಮುಂಡಗೋಡಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕೃಷ್ಣಾ ಕುಳ್ಳೂರು ಹೇಳಿದ್ದಾರೆ.

ಈ ಬಾರಿ ಮಾವಿನ ಮರಗಳು ಹೂವು ಬಿಡುವುದು ವಿಳಂಬವಾಗಿದ್ದು ಫಸಲು ಕೂಡ ವಿಳಂಬವಾಗಲಿದೆ. ಮಳೆಗಾಲದಲ್ಲಿ ಫಸಲು ಬಂದರೆ ಬೇಡಿಕೆ ಇಲ್ಲದೆ ದರ ಸಿಗದೆ ಹಾನಿ ಅನುಭವಿಸುವ ಸಾಧ್ಯತೆ ಇದೆ. ಮಾವು ಬೆಳೆಗಾರರ ಹಿತದೃಷ್ಟಿಯಿಂದ ಜನಪ್ರತಿನಿಧಿ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾವು ಬೆಳೆಗಾರ ಮುನ್ನಾ ಪಾಟೀಲ ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ