ಹವಾಮಾನ ವೈಪರಿತ್ಯಕ್ಕೆ ಮಾವು ಫಸಲು ಶೇ.50 ಕುಸಿತ!

KannadaprabhaNewsNetwork |  
Published : Apr 04, 2026, 01:45 AM IST
mogo | Kannada Prabha

ಸಾರಾಂಶ

ರಾಜ್ಯದಲ್ಲಿ ತೀವ್ರವಾದ ಒಣ ವಾತಾವರಣ, ಚಳಿ ಹಾಗೂ ಅಧಿಕ ಚಳಿ ಮತ್ತು ಆಲಿಕಲ್ಲು ಮಳೆಯಿಂದಾಗಿ ಈ ವರ್ಷ ಮಾವಿನ ಉತ್ಪಾದನೆಯಲ್ಲಿ ಶೇ.50-60ರಷ್ಟು ಕುಸಿತವಾಗಿದೆ.

ಸಂಪತ್‌ ತರೀಕೆರೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ತೀವ್ರವಾದ ಒಣ ವಾತಾವರಣ, ಚಳಿ ಹಾಗೂ ಅಧಿಕ ಚಳಿ ಮತ್ತು ಆಲಿಕಲ್ಲು ಮಳೆಯಿಂದಾಗಿ ಈ ವರ್ಷ ಮಾವಿನ ಉತ್ಪಾದನೆಯಲ್ಲಿ ಶೇ.50-60ರಷ್ಟು ಕುಸಿತವಾಗಿದೆ.

ಪರಿಣಾಮ ಬಂಪರ್‌ ಬೆಳೆಯ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಲಿದ್ದು, ಮಾವು ಪ್ರಿಯರಿಗೂ ಬಿಸಿ ತಟ್ಟಲಿದೆ..!

ಡಿಸೆಂಬರ್‌ ಕೊನೆಯ ವಾರದಲ್ಲಿ ರಾಮನಗರ, ಧಾರವಾಡ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಮಾವು ಹೂವು ಬಿಡಲು ಆರಂಭಿಸಿತ್ತು. ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಸುತ್ತಮುತ್ತಲ ಕಡೆಗಳಲ್ಲಿ ಜನವರಿ ಅಂತ್ಯ ಮತ್ತು ಫೆಬ್ರವರಿಯಲ್ಲಿ ಹೂವು ಬಿಡುವ ಪ್ರಕ್ರಿಯೆ ಉತ್ತಮವಾಗಿತ್ತು. ಈ ಹಿನ್ನೆಲೆಯಲ್ಲಿ ಈ ವರ್ಷ ‘ಏರು ಹಂಗಾಮು’ ಇರಲಿದೆ ಎಂದು ಅಂದಾಜಿಸಲಾಗಿತ್ತು.

ಆದರೆ, ಅಧಿಕ ಚಳಿ, ತೀವ್ರ ಒಣ ವಾತಾವರಣ ಮತ್ತು ಕಳೆದ ಎರಡ್ಮೂರು ವಾರಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುರಿದ ಆಲಿಕಲ್ಲು ಮಳೆಯಿಂದಾಗಿ ಮಾವು ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇದರಿಂದಾಗಿ ಬಿಟ್ಟಿರುವ ಹೂವು ನಿರೀಕ್ಷೆಯಂತೆ ಕಾಯಿ ಕಚ್ಚುವಲ್ಲಿ ಸಫಲವಾಗಿಲ್ಲ. ಅನೇಕ ಕಡೆಗಳಲ್ಲಿ ಆಲಿಕಲ್ಲು ಮಳೆಯಿಂದ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿ ಮಾವಿನ ಮಿಡಿಗಳು ಹಾನಿಗೊಳಗಾಗಿವೆ. ಇದು ಮಾವು ಉತ್ಪಾದನೆ ಕುಸಿಯಲು ಕಾರಣವಾಗಿದೆ.

ಮಾವು ಅಭಿವೃದ್ಧಿ ಮತ್ತು ಮಾರಾಟ ಮಂಡಳಿ ಪ್ರಕಾರ ಜನವರಿ ಮತ್ತು ಫೆಬ್ರವರಿಯಲ್ಲಿ ಉಷ್ಣಾಂಶ, ಮಾವು ಬೆಳೆಗೆ ಅಗತ್ಯವಿರುವ ಉಷ್ಣಾಂಶಕ್ಕಿಂತ ತೀರಾ ಕಡಿಮೆ ಮಟ್ಟಕ್ಕೆ ಇಳಿದು ಹೂ ಗೊಂಚಲಿನಲ್ಲಿ ಹರ್ಮಾಫೋರೊಡಿಟ್‌ ಫ್ಲವರ್ಸ್‌ (ಉಭಯಲಿಂಗಿ ಹೂವು) ಸಂಖ್ಯೆ ತೀರ ಕಡಿಮೆಯಿದ್ದು ಗಂಡು ಹೂವುಗಳೇ ಹೆಚ್ಚಿನ ಪ್ರಮಾಣದಲ್ಲಿದ್ದವು. ಇದರಿಂದ ಸಹಜವಾಗಿ ಕಾಯಿಕಚ್ಚುವ ಪ್ರಮಾಣ ಶೇ.20ರಷ್ಟು ಕಡಿಮೆಯಾಗಿದೆ. ಈ ಕಾರಣದಿಂದ ರಾಜ್ಯದಲ್ಲಿನ ಎಲ್ಲಾ ಮಾವು ಬೆಳೆಗಳಲ್ಲಿ ಬಾದಾಮಿ ತಳಿಗಳಲ್ಲಿ ಕಾಯಿಕಚ್ಚುವ ಪ್ರಮಾಣ ಅತ್ಯಲ್ಪವಾಗಿದೆ ಎಂದು ಹೇಳಿದೆ.

ಇಳುವರಿ ಕುಸಿತ:

ಈ ಬಾರಿಯ ಮಾವು ಹಂಗಾಮಿನ ಆರಂಭದಲ್ಲಿ 14ರಿಂದ 16 ಲಕ್ಷ ಮೆಟ್ರಿಕ್‌ ಟನ್‌ ಮಾವು ಉತ್ಪಾದನೆಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಹಾಗಾಗಿ ಮಾವು ಬೆಳೆಗಾರರು ಸಂತಸದಲ್ಲಿದ್ದರು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಮಾವು ಬೆಳೆಯ ಶಾರೀರಿಕ ಸ್ಥಿತ್ಯಂತರದಲ್ಲಿ ಭಾರಿ ಬದಲಾವಣೆ ಉಂಟಾಗಿದೆ. ಹೀಗಾಗಿ ಶೇ.50ರಿಂದ 60ರಷ್ಟು ಫಸಲು ಕುಂಟಿತವಾಗಲಿದೆ. ಹಾಗಾಗಿ ಈ ವರ್ಷ ‘ಇಳಿ ಹಂಗಾಮು’ ಆಗಲಿದ್ದು, ಮಾವಿನ ಫಸಲಿನ ಒಟ್ಟಾರೆ ಪ್ರಮಾಣ 6 ರಿಂದ 7 ಲಕ್ಷ ಮೆಟ್ರಿಕ್‌ ಟನ್‌ ಆಗಲಿದೆ ಎಂದು ಅಂದಾಜಿಸಲಾಗಿದೆ.

1.48 ಲಕ್ಷ ಹೆಕ್ಟೇರ್‌ನಲ್ಲಿ ಮಾವು:

ರಾಜ್ಯದಲ್ಲಿ 1.48 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಏರು ಹಂಗಾಮಿನಲ್ಲಿ ಸರಾಸರಿ 14ರಿಂದ 16 ಲಕ್ಷ ಮೆಟ್ರಿಕ್‌ ಟನ್‌ ಮಾವು ಇಳುವರಿ ಸಿಗುತ್ತದೆ. ಇಳಿ ಹಂಗಾಮಿನಲ್ಲಿ 6 ರಿಂದ 9 ಲಕ್ಷ ಮೆಟ್ರಿಕ್‌ ಟನ್‌ ಮಾವು ಉತ್ಪಾದನೆಯಾಗುತ್ತದೆ. ರಾಜ್ಯದಲ್ಲಿ ಮಾವು ಬೆಳೆಯುವ ಒಟ್ಟು 1.48 ಲಕ್ಷ ಹೆಕ್ಟೇರ್‌ ಪೈಕಿ ಕೋಲಾರ 45,568, ರಾಮನಗರ 27,722, ತುಮಕೂರು 16,616, ಬೆಳಗಾವಿ 2908, ಚಿಕ್ಕಬಳ್ಳಾಪುರ 9572, ಹಾವೇರಿ 4434, ಮಂಡ್ಯದಲ್ಲಿ 1806, ಉತ್ತರ ಕನ್ನಡ 10436, ಧಾರವಾಡ 9037, ಬೆಂಗಳೂರು ಗ್ರಾಮಾಂರ 4268, ಮೈಸೂರು 3179, ಶಿವಮೊಗ್ಗ 2616, ಚಿಕ್ಕಮಗಳೂರು 1101 ಹೆಕ್ಟೇರ್‌ನಲ್ಲಿ ಮಾವು ಬೆಳೆಯಾಗುತ್ತಿದೆ.

ಬಾದಾಮಿ ಶೇ.80ರಷ್ಟು ಕುಸಿತ

ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಕಾಯಿ ಕಚ್ಚಿರುವ ಸರಾಸರಿ ಪ್ರಮಾಣದಲ್ಲಿ ಬಾದಾಮಿ ಶೇ.10-15, ಮಲ್ಲಿಕಾ ಶೇ.50-60, ತೋತಾಪುರಿ, ನೀಲಂ, ಕೇಸರ್‌ ತಲಾ ಶೇ.60- 70, ಸೆಂದೂರು, ರಸಪುರಿ ತಲಾ ಶೇ.50-60 ಮತ್ತು ಬೇನಿಶಾ ಶೇ.40- 50ರಷ್ಟು ಮಾತ್ರ ಕಾಯಿಕಚ್ಚಲಿವೆ ಎಂದು ಮಾವು ಅಭಿವೃದ್ಧಿ ಮಂಡಳಿ ಮಾಹಿತಿ ನೀಡಿದೆ.

ಆಕಾಲಿಕ ಮಳೆ ಹೊಡೆತ

ಮಾರ್ಚ್‌ ತಿಂಗಳಲ್ಲಿ ಸಂಭವಿಸಿದ ಭಾರೀ ಆಲಿಕಲ್ಲು ಮಳೆಯಿಂದ ಮತ್ತು ಅಕಾಲಿಕ ಮಳೆಯಿಂದ ರಾಜ್ಯದ ಹಲವು ಭಾಗಗಳನ್ನು ತೀವ್ರವಾಗಿ ಬಾಧಿಸಿದೆ. ಹಲವು ಬೆಳಗಳ ಹಾನಿಗೆ ಕಾರಣವಾಗಿದೆ. ಈ ಹಾನಿಯಲ್ಲಿ ಮಾವಿನ ಬೆಳೆಗೂ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಮಾವು ಬೆಳೆಗಾರರಿಗೆ ನಷ್ಟವಾಗಿದೆ.

- ಟಿ.ಆರ್‌.ವೇದಮೂರ್ತಿ, ಎಂಡಿ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಲ್ದೂರಿನಲ್ಲಿ ಶೀಘ್ರ ಹೈಟೆಕ್‌ ಸರ್ಕಾರಿ ಆಸ್ಪತ್ರೆ
ಸಡಗರದ ಹೂವಿನಹಳ್ಳಿ ಶ್ರೀರಾಚೋಟಿ ವೀರಭದ್ರಸ್ವಾಮಿ ರಥೋತ್ಸವ