ಮನ್‌ಮುಲ್ ಚುನಾವಣೆ: ಪ್ರತಿಷ್ಠಿತರಿಂದ ನಾಮಪತ್ರ ಸಲ್ಲಿಕೆ

KannadaprabhaNewsNetwork | Published : Jan 19, 2025 2:16 AM

ಸಾರಾಂಶ

ಮಂಡ್ಯ ತಾಲೂಕಿನಿಂದ ಯು.ಸಿ.ಶಿವಕುಮಾರ್ ಸತತ ಎರಡು ಬಾರಿ ಮನ್‌ಮುಲ್ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ಇದೀಗ ಮತ್ತೊಮ್ಮೆ ಅಖಾಡ ಪ್ರವೇಶಿಸಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಮದ್ದೂರು ತಾಲೂಕಿನಿಂದ ಎಸ್.ಪಿ.ಸ್ವಾಮಿ ಅವರು ಮೊದಲ ಬಾರಿಗೆ ಮನ್‌ಮುಲ್ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಈಗ ಅವರು ಎರಡನೇ ಬಾರಿಗೆ ಆಯ್ಕೆಯಾಗುವ ವಿಶ್ವಾಸದೊಂದಿಗೆ ಮತ್ತೊಮ್ಮೆ ಸ್ಪರ್ಧೆಗಿಳಿದಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿ ಚುನಾವಣೆಗೆ ಶನಿವಾರ (ಜ.೧೮)ದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಮೊದಲ ದಿನ ಪ್ರತಿಷ್ಠಿತರಾದ ಯು.ಸಿ.ಶಿವಕುಮಾರ್, ಎಸ್.ಪಿ.ಸ್ವಾಮಿ, ಎನ್.ಅಪ್ಪಾಜಿಗೌಡ, ಲಕ್ಷ್ಮೀನಾರಾಯಣ ಅವರು ಉಮೇದುವಾರಿಕೆ ಸಲ್ಲಿಸಿದರು.

ಮಂಡ್ಯ ತಾಲೂಕಿನಿಂದ ಯು.ಸಿ.ಶಿವಕುಮಾರ್ ಸತತ ಎರಡು ಬಾರಿ ಮನ್‌ಮುಲ್ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ಇದೀಗ ಮತ್ತೊಮ್ಮೆ ಅಖಾಡ ಪ್ರವೇಶಿಸಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಮದ್ದೂರು ತಾಲೂಕಿನಿಂದ ಎಸ್.ಪಿ.ಸ್ವಾಮಿ ಅವರು ಮೊದಲ ಬಾರಿಗೆ ಮನ್‌ಮುಲ್ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಈಗ ಅವರು ಎರಡನೇ ಬಾರಿಗೆ ಆಯ್ಕೆಯಾಗುವ ವಿಶ್ವಾಸದೊಂದಿಗೆ ಮತ್ತೊಮ್ಮೆ ಸ್ಪರ್ಧೆಗಿಳಿದಿದ್ದಾರೆ. ಇಬ್ಬರೂ ಅಭ್ಯರ್ಥಿಗಳು ಪ್ರತ್ಯೇಕವಾಗಿ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಉಮೇದುವಾರಿಕೆ ಸಲ್ಲಿಸಿದರು.

ನಾಗಮಂಗಲ ತಾಲೂಕಿನಿಂದ ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ ಅವರು ಮೊದಲ ಬಾರಿಗೆ ಮನ್‌ಮುಲ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಥಳೀಯಸಂಸ್ಥೆಗಳಿಂದ ವಿಧಾನಪರಿಷತ್‌ಗೆ ಆಯ್ಕೆಯಾಗಿದ್ದ ಎನ್.ಅಪ್ಪಾಜಿಗೌಡ ಅವರು ಇದೀಗ ಮನ್‌ಮುಲ್ ಆಡಳಿತ ಮಂಡಳಿ ನಿರ್ದೇಶಕರಾಗುವ ಹಂಬಲದೊಂದಿಗೆ ನಾಮಪತ್ರ ಸಲ್ಲಿಸಿದರು.

ಮನ್‌ಮುಲ್ ನಾಮನಿರ್ದೇಶಿತ ಸದಸ್ಯ ಲಕ್ಷ್ಮೀನಾರಾಯಣ ಅವರು ನಾಗಮಂಗಲ ತಾಲೂಕಿನಿಂದ ಕಣಕ್ಕಿಳಿಯುತ್ತಿರುವ ಮತ್ತೋರ್ವ ಅಭ್ಯರ್ಥಿಯಾಗಿದ್ದಾರೆ. ನೆಲ್ಲೀಗೆರೆ ಬಾಲು ನಿರ್ದೇಶಕ ಸ್ಥಾನ ವಜಾಗೊಂಡಿದ್ದರಿಂದ ಉಳಿದ ಅವಧಿಗೆ ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದ ಲಕ್ಷ್ಮೀನಾರಾಯಣ ಅವರು ಇದೀಗ ಚುನಾವಣೆ ಎದುರಿಸಲು ಸಜ್ಜಾಗಿದ್ದು, ಶನಿವಾರ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಉಮೇದುವಾರಿಕೆ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭದೊಂದಿಗೆ ಮನ್‌ಮುಲ್ ಚುನಾವಣಾ ಅಖಾಡ ನಿಧಾನವಾಗಿ ರಂಗೇರುತ್ತಿದೆ. ಸೋಮವಾರದಿಂದ ಮತ್ತಷ್ಟು ಪ್ರಬಲ ಅಭ್ಯರ್ಥಿಗಳು ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಾಧ್ಯತೆಗಳಿವೆ. ಹಳೆಯ ಹುಲಿಗಳಾದ ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು, ಮನ್‌ಮುಲ್ ಮಾಜಿ ಅಧ್ಯಕ್ಷರಾದ ಬಿ.ಆರ್.ರಾಮಚಂದ್ರ, ಎಂ.ಬಿ.ಹರೀಶ್, ಬಿ.ಬೋರೇಗೌಡ, ಕದಲೂರು ರಾಮಕೃಷ್ಣ, ಉಪಾಧ್ಯಕ್ಷ ಎಂ.ಎಸ್.ರಘುನಂದನ್, ಡಾಲುರವಿ, ರೂಪಾ, ಕಾಡೇನಹಳ್ಳಿ ರಾಮಚಂ ದ್ರು, ವಿಶ್ವನಾಥ್ ಸೇರಿದಂತೆ ಹಲವರು ಮತ್ತೆ ಮನ್‌ಮುಲ್ ನಿರ್ದೇಶಕರಾಗುವ ಆಕಾಂಕ್ಷೆಯೊಂದಿಗೆ ಚುನಾವಣಾ ರಣಾಂಗಣ ಪ್ರವೇಶಕ್ಕೆ ನಾಮಪತ್ರಗಳೊಂದಿಗೆ ಸಜ್ಜಾಗಿ ನಿಂತಿದ್ದಾರೆ.

ಹಾಲಿನ ಪ್ರೋತ್ಸಾಹಧನ ಹಂತ ಹಂತವಾಗಿ ಬಿಡುಗಡೆ: ಯು.ಸಿ.ಶಿವಕುಮಾರ್

ಕನ್ನಡಪ್ರಭ ವಾರ್ತೆ ಮಂಡ್ಯ

ಹಾಲು ಉತ್ಪಾದಕರ ಸಂಕಷ್ಟ ನಿವಾರಣೆ ಮಾಡುವ ಉದ್ದೇಶದಿಂದ ಸರ್ಕಾರ ಪ್ರೋತ್ಸಾಹ ಧನ ನೀಡುತ್ತಿದ್ದು, ಹಂತ ಹಂತವಾಗಿ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡುತ್ತಿದೆ ಎಂದು ಮನ್‌ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್ (ಶಿವಪ್ಪ) ತಿಳಿಸಿದರು.

ಮಂಡ್ಯ ಹಾಲು ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದ ಮೂರ್ತಿ ಅವರಿಗೆ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾಲ್ಕೈದು ತಿಂಗಳ ಪ್ರೋತ್ಸಾಹ ಧನ ಬಾಕಿ ಉಳಿದಿದ್ದು, ಅದನ್ನು ಸರ್ಕಾರ ಶೀಘ್ರವೇ ಉತ್ಪಾದಕರಿಗೆ ಬಿಡುಗಡೆ ಮಾಡಲಿದೆ ಎಂದರು.

ಕಳೆದ ಎರಡು ಬಾರಿ ಆಡಳಿತ ಮಂಡಳಿಯಲ್ಲಿ ನಿರ್ದೇಶಕನಾಗಿ ಸೇವೆ ಸಲ್ಲಿಸಿದ್ದೇನೆ. ಸ್ವತಃ ರೈತನಾಗಿ ಹಾಲು ಉತ್ಪಾದಕರ ಸಂಕಷ್ಟವನ್ನೂ ಅರಿತಿದ್ದೇನೆ. ಮುಂದಿನ ದಿನಗಳಲ್ಲಿ ಉತ್ಪಾದಕರಿಗೆ ದೊರೆಯುವ ಎಲ್ಲ ಸೌಲಭ್ಯಗಳನ್ನೂ ಪ್ರಾಮಾಣಿಕವಾಗಿ ಕೊಡಿಸಿಕೊಡುವುದಕ್ಕೆ ಪ್ರಯತ್ನ ಮಾಡುತ್ತೇನೆ ಎಂದರು.

ಈ ಬಾರಿಯೂ ನಾನು ಸ್ಪರ್ಧಿಸಿದ್ದು, ನಾಮಪತ್ರ ಸಲ್ಲಿಸಿದ್ದೇನೆ. ಮಂಡ್ಯ ತಾಲೂಕಿನ ಹಾಲು ಉತ್ಪಾದಕ ಸಹಕಾರ ಸಂಘಗಳ ಪ್ರತಿನಿಧಿಗಳು ನನ್ನನ್ನು ಮತ್ತೊಂದು ಅವಧಿಗೆ ಆಯ್ಕೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉತ್ಪಾದಕರಿಗೆ ನೀಡುವ ಹಾಲಿನ ದರವನ್ನು ಸರ್ಕಾರ ನಿಗದಿ ಮಾಡುವುದಿಲ್ಲ. ಬದಲಿಗೆ ಒಕ್ಕೂಟಗಳು ಆಯಾ ಕಾಲಕ್ಕೆ ಅನುಗುಣವಾಗಿ ಉತ್ಪಾದಕರಿಗೆ ನೀಡುವ ದರ ನಿಗದಿ ಮಾಡುತ್ತವೆ. ನಮ್ಮ ಒಕ್ಕೂಟದ ವತಿಯಿಂದ ರೈತರಿಗೆ ನ್ಯಾಯಸಮ್ಮತ ದರ ಕೊಡಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಮುಂದೆಯೂ ರೈತರೊಂದಿಗೆ ಸದಾ ಇರುತ್ತೇವೆ ಎಂದು ಭರವಸೆ ನೀಡಿದರು.

ದೆಹಲಿ ಮಾರುಕಟ್ಟೆ ಸಿಕ್ಕಿದೆ : ಎಸ್.ಪಿ.ಸ್ವಾಮಿ

ಮಂಡ್ಯ ಹಾಲು ಒಕ್ಕೂಟ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಹಾಲಿನ ಸಂಗ್ರವಾಗುತ್ತಿದೆ. ಇದನ್ನು ಸಂಸ್ಕರಿಸಿ ಮಾರುಕಟ್ಟೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಕೇಂದ್ರ ಸರ್ಕಾರ ಮತ್ತು ಸಚಿವರು ದೆಹಲಿಯಲ್ಲಿ ಮಾರುಕಟ್ಟೆಯಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದು ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಹೇಳಿದರು.

ಶನಿವಾರ ಅಪರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದ ಬಳಿಕ ಮಾತನಾಡಿ, ಪ್ರತಿನಿತ್ಯ ೧ ಲಕ್ಷ ಹಾಲು ಮಾರಾಟದ ಗುರಿ ಇಟ್ಟುಕೊಂಡಿದ್ದೇವೆ. ಆದರೆ ಸಣ್ಣ ಪುಟ್ಟ ಸಮಸ್ಯೆಗಳೂ ಇವೆ. ಅವುಗಳ ಪರಿಹಾರಕ್ಕೆ ನಮ್ಮ ವ್ಯವಸ್ಥಾಪಕ ನಿರ್ದೇಶಕರು, ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ನಮ್ಮದಾದರೂ, ಸ್ಥಳೀಯವಾಗಿ ಅಮ್ ಆದ್ಮಿ ಪಕ್ಷ ಆಡಳಿತ ನಡೆಸುತ್ತಿದೆ. ಅದರಿಂದಾಗಿ ನಮಗೆ ತೊಡಕುಂಟಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಂಡ್ಯ ಜಿಲ್ಲೆಯಲ್ಲಿ ರೈತರು ಹೈನುಗಾರಿಕೆಯನ್ನೇ ಹೆಚ್ಚಾಗಿ ಅವಲಂಭಿಸಿದ್ದಾರೆ. ಇದು ಅವರ ದಿನನಿತ್ಯದ ಸಮಸ್ಯೆಗಳ ಪರಿಹಾರಕ್ಕೆ ಪೂರಕವಾಗಿದೆ. ಇದರಲ್ಲೇ ಅವರ ಬದುಕು ಕಂಡುಕೊಂಡಿದ್ದಾರೆ. ಕಳೆದ ಏಳೆಂಟು ತಿಂಗಳುಗಳಿಂದ ಸರ್ಕಾರ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ನಾವೂ ಹೋರಾಟ ಮಾಡುವ ಮೂಲಕ ಪ್ರೋತ್ಸಹ ಧನ ಬಿಡುಗಡೆಗೆ ಒತ್ತಾಯಿಸಿದ್ದೇವೆ ಎಂದರು.

ನಾನೂ ಸಹ ಈ ಬಾರಿಯೂ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ಮದ್ದೂರು ತಾಲೂಕಿನ ಹಾಲು ಉತ್ಪಾದಕ ಸಂಘಗಳ ಪ್ರತಿನಿಧಿಗಳು ನನ್ನನ್ನು ಕೈಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share this article