ಗದಗ ಜಿಲ್ಲೆಯಾದ್ಯಂತ ಸಂಭ್ರಮದ ಮಣ್ಣೆತ್ತಿನ ಅಮಾವಾಸ್ಯೆ

KannadaprabhaNewsNetwork |  
Published : Jun 25, 2025, 11:47 PM IST
ಗದಗ ನಗರದಲ್ಲಿ ಮಣ್ಣೆತ್ತಿನ ಅಮಾವಾಸೆ ಹಿನ್ನೆಲೆಯಲ್ಲಿ ಮನೆಯಲ್ಲಿ ಮಣ್ಣಿನ ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ಮಾಡಿರುವುದು.  | Kannada Prabha

ಸಾರಾಂಶ

ಪ್ರಕೃತಿಯ ಆರಾಧನೆಗಾಗಿ ಆಚರಿಸಲಾಗುವ ಮಣ್ಣೆತ್ತಿನ ಅಮಾವಾಸ್ಯೆಯನ್ನು ಬುಧವಾರ ಗದಗ ಜಿಲ್ಲೆಯಾದ್ಯಂತ ರೈತರು ಸಂಭ್ರಮದಿಂದ ಆಚರಿಸಿದರು. ಮನೆಯಲ್ಲಿ ಮಣ್ಣಿನ ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ಮಾಡಲಾಯಿತು.

ಗದಗ: ಪ್ರಕೃತಿಯ ಆರಾಧನೆಗಾಗಿ ಆಚರಿಸಲಾಗುವ ಮಣ್ಣೆತ್ತಿನ ಅಮಾವಾಸ್ಯೆಯನ್ನು ಬುಧವಾರ ಗದಗ ಜಿಲ್ಲೆಯಾದ್ಯಂತ ರೈತರು ಸಂಭ್ರಮದಿಂದ ಆಚರಿಸಿದರು.

ಮಣ್ಣನ್ನು ದೇವರೆಂದು ಪೂಜಿಸುವ ಈ ವಿಶಿಷ್ಟ ಹಬ್ಬವು, ರೈತ ಬಾಂಧವರ ಪಾಲಿಗೆ ಕೇವಲ ಆಚರಣೆಯಾಗಿರದೇ, ತಮ್ಮ ಬದುಕಿಗೆ ಆಧಾರವಾದ ಭೂಮಿ ಮತ್ತು ಜತೆಗಾರ ಎತ್ತುಗಳೊಂದಿಗಿನ ಅವಿನಾಭಾವ ಸಂಬಂಧದ ಪ್ರತೀಕವಾಗಿದೆ.

ಮಣ್ಣಿನಿಂದ ಮಾಡಿದ ಸುಂದರ ಎತ್ತುಗಳನ್ನು ಮನೆಗಳಿಗೆ ತಂದು, ವಿಶೇಷ ಪೂಜೆಗಳನ್ನು ಸಲ್ಲಿಸಿ ಬಗೆಬಗೆಯ ಖಾದ್ಯಗಳನ್ನು ನೈವೇದ್ಯ ಮಾಡಿ, ಕುಟುಂಬ ಸಮೇತ ಪೂಜಿಸುವುದು ಈ ಹಬ್ಬದ ವಿಶೇಷ. ರೈತರಿಗೆ ಜೀವನಾಡಿ ಎನಿಸಿದ ಎತ್ತುಗಳು ಮತ್ತು ಫಲವತ್ತಾದ ಭೂಮಿಯನ್ನು ಗೌರವಿಸುವ ಈ ಆಚರಣೆಗೆ ಶತಮಾನಗಳ ಧಾರ್ಮಿಕ ಹಿನ್ನೆಲೆಯಿದೆ ಎನ್ನುತ್ತಾರೆ ಹಿರಿಯರು.

ರೈತರ ಹಬ್ಬ: ಮಣ್ಣೆತ್ತಿನ ಅಮಾವಾಸ್ಯೆ ರೈತ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಕೃಷಿ ಕಾರ್ಯಗಳಲ್ಲಿ ಎತ್ತುಗಳ ಪಾತ್ರ ಅತಿ ದೊಡ್ಡದು. ಅವುಗಳ ಶ್ರಮವನ್ನು ಗುರುತಿಸಿ, ಪೂಜಿಸುವ ಮೂಲಕ ರೈತರು ಕೃತಜ್ಞತೆ ಸಲ್ಲಿಸುತ್ತಾರೆ. ಅನ್ನ ನೀಡುವ ಭೂಮಿಯನ್ನು ದೈವ ಸ್ವರೂಪವೆಂದು ಭಾವಿಸಿ, ಮಣ್ಣಿನ ರೂಪದಲ್ಲಿ ಎತ್ತುಗಳನ್ನು ಮಾಡಿ ಪೂಜಿಸಲಾಗುತ್ತದೆ.

ಉತ್ತಮ ಮಳೆ: ಈ ಬಾರಿ ಮುಂಗಾರು ಪೂರ್ವ ಹಾಗೂ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದು, ಜಿಲ್ಲೆಯಾದ್ಯಂತ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ರೈತರು ಬಿತ್ತನೆಯಾಗಿರುವ ಬೆಳೆಗಳಲ್ಲಿನ ಕಳೆಗಳನ್ನು ತೆಗೆಯುತ್ತಾ, ಇನ್ನುಳಿದ ಬೆಳೆಗಳಾದ ಈರುಳ್ಳಿ, ಮೆಣಸಿನಕಾಯಿ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದೇ ಸಂತಸ, ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

ಭಕ್ತಿ-ಸಂಸ್ಕೃತಿಯ ಸಮ್ಮಿಲನ: ಈ ಹಬ್ಬವು ಧಾರ್ಮಿಕ ಆಚರಣೆ ಮಾತ್ರವಲ್ಲದೆ, ಭಕ್ತಿ ಸಂಸ್ಕೃತಿಯ ಸಮ್ಮಿಲನವಾಗಿದೆ. ಪೂಜೆಗಳು ಧಾರ್ಮಿಕ ಆಚರಣೆಗಳಾದರೆ ಅದಕ್ಕಿರುವ ವಿಶೇಷ ಸಂಸ್ಕೃತಿಯ ಹಿನ್ನೆಲೆಯಿಂದಾಗಿ ಇದೊಂದು ರೈತಾಪಿ ಹಬ್ಬವಾಗಿದೆ. ರೈತರು, ತಮ್ಮ ಕಾಯಕದ ಜೀವಾಳವಾದ ಎತ್ತುಗಳನ್ನು ಮತ್ತು ಮಣ್ಣನ್ನು ಭಕ್ತಿಭಾವದಿಂದ ಪೂಜಿಸಿ, ಮುಂದಿನ ಕೃಷಿ ಚಟುವಟಿಕೆಗೆ ಭರವಸೆಯೊಂದಿಗೆ ಸಿದ್ಧರಾಗಿದ್ದಾರೆ.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ