ಕನ್ನಡಪ್ರಭ ವಾರ್ತೆ ಹಾವೇರಿ
ನಗರದ ಹುಕ್ಕೇರಿಮಠದ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದ ಆವರಣದಲ್ಲಿ ಲಿಂ.ಶಿವಬಸವ ಸ್ವಾಮಿಗಳ ೭೮ನೇ ಮತ್ತು ಲಿಂ.ಶಿವಲಿಂಗ ಸ್ವಾಮೀಜಿಗಳ ೧೫ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡರುವ ನಮ್ಮೂರ ಜಾತ್ರೆಯ ನಾಲ್ಕನೇ ದಿನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಸಮಾಜವು ಶುದ್ಧ ಕುಡಿಯುವ ನೀರು ಇದ್ದಂತೆ, ಅದನ್ನು ಬಳಸುವ ಕುರಿ ತಾನು ಕುಡಿದು ಪರರಿಗೂ ಕುಡಿಯಲು ಕೊಡುತ್ತದೆ. ಆದರೆ ಎಮ್ಮೆ ಕುಡಿಯುವ ನೀರಲ್ಲಿ ರಾಡಿ ಎಬ್ಬಿಸಿ, ತಾನು ಕುಡಿದು, ಮತ್ತೊಬ್ಬರಿಗೆ ಕುಡಿಯಲು ಯೋಗ್ಯ ಇಲ್ಲದಂತೆ ಮಾಡುತ್ತದೆ. ಅದೇ ರೀತಿ ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಸಮಾಜವನ್ನು ಬಳಸುತ್ತಿದ್ದಾನೆ ಎಂದು ಹೇಳಿದರು.ಪ್ರತಿ ವ್ಯಕ್ತಿಗೆ ಗುರು ರಕ್ಷಣೆ ಅವಶ್ಯವಾಗಿದೆ. ಗುರು-ಶಿಷ್ಯ ಸಂಬಂಧವು ಶಿವ ನಂದಿಯಂತೆ ಇರಬೇಕು. ಸಮ ಸಮಾಜದ ಕನಸು ಸಾಕಾರವಾಗಲು ಗುರುಗಳ ಮಾರ್ಗದರ್ಶನದಲ್ಲಿ ತಾನೂ ಬದುಕಿ ಇತರರು ಬದುಕುವ ಮನೋಭಾವ ಬೆಳೆಯಲು ಇಂಥ ಮಹಾತ್ಮರ ಪುಣ್ಯ ಸ್ಮರಣೋತ್ಸವಗಳು ಸಹಾಯಕವಾಗುತ್ತವೆ. ದೇಶದಲ್ಲಿ ರಾಮಮಂದಿರ ಉದ್ಘಾಟನೆಯ ಈ ಸಂದರ್ಭದಲ್ಲಿ ರಾಮರಾಜ್ಯ ಸ್ಥಾಪನೆಯಾಗಬೇಕು. ಜೊತೆಗೆ ಬಸವ ರಾಜ್ಯವೂ ಆಗಬೇಕಾಗಿದೆ ಎಂದು ಹೇಳಿದರು.
ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ರಾಜ್ಯೋತ್ಸವ ಪುರಸ್ಕಾರ ಕೇವಲ ಒಬ್ಬ ವ್ಯಕ್ತಿಗೆ ಮಾತ್ರ ಬಂದಿರುವುದಿಲ್ಲ. ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಗೆ ಸಂದ ಗೌರವವಾಗಿದೆ ಎಂದ ಅವರು, ತಾವು ಬರೆದ ಕ್ರಾಂತಿ ಗೀತೆ ಕಟ್ಟತೇವ ನಾವು ಕಟ್ಟೇ ಕಟ್ಟತೇವ ಹಾಡನ್ನು ಹಾಡಿದರು.
ಸಂಗಮೇಶ ಪಾಟೀಲ ಪ್ರಾರ್ಥಿಸಿದರು. ವಿಜಯಕುಮಾರ ಕೂಡ್ಲಪ್ಪನವರ ಸ್ವಾಗತಿಸಿದರು. ಶಿವಪ್ರಸಾದ ದೇವರು ಮತ್ತು ನಾಗರಾಜ ನಡುವಿನಮಠ ನಿರೂಪಿಸಿದರು. ಆನಂದ ಅಟವಾಳಗಿ ವಂದಿಸಿದರು.
ಹುಕ್ಕೇರಿಮಠದ ಪೂಜದ್ವಯರ ಪುಣ್ಯಸ್ಮರಣೋತ್ಸವದ ನಿಮಿತ್ತ ಜ.೨೧ರಂದು ಬೆಳಗ್ಗೆ ೮ಕ್ಕೆ ಶಿವಬಸವ ಮಹಾಶಿವಯೋಗಿಗಳವರ ಹಾಗೂ ಶಿವಲಿಂಗ ಮಹಾಶಿವಯೋಗಿಗಳವರ ಗದ್ದುಗೆಗೆ ಮಹಾಪೂಜೆ ಹಾಗೂ ಬಿಲ್ವಾರ್ಚನೆ ಮಧ್ಯಾಹ್ನ ೧೨ಕ್ಕೆ ಮಹಾಗಣಾರಾಧನೆ ಜರುಗಲಿದೆ. ಸಂಜೆ ೪ಕ್ಕೆ ಶಿವಬಸವ ಮಹಾಶಿವಯೋಗಿಗಳವರ ಹಾಗೂ ಶಿವಲಿಂಗ ಮಹಾಶಿವಯೋಗಿಗಳವರ ಭಾವಚಿತ್ರದ ಮೆರವಣಿಗೆಯು ನಾಡಿನ ಖ್ಯಾತ ಕಲಾತಂಡಗಳು ಹಾಗೂ ವಿವಿಧ ವಾದ್ಯ ವೈಭವದೊಂದಿಗೆ ಜರುಗಲಿದೆ.