ನವವೃಂದಾವನಗಡ್ಡೆಯಲ್ಲಿ ಮಂತ್ರಾಲಯ, ಉತ್ತರಾಧಿ ಮಠಾಧೀಶರ ಸಮಾಗಮ

KannadaprabhaNewsNetwork |  
Published : Nov 20, 2025, 01:15 AM IST
19ಉಳಉ1,2,3,4 | Kannada Prabha

ಸಾರಾಂಶ

ಎರಡೂ ಮಠಗಳ ಮಧ್ಯೆ ಇರುವ ಆರಾಧನೆ ಸೇರಿದಂತೆ ನ್ಯಾಯಾಲಯದಲ್ಲಿರುವ ವ್ಯಾಜ್ಯ ಕೆಲವೇ ದಿನಗಳಲ್ಲಿ ಸೌಹಾರ್ದತೆಯಿಂದ ಚರ್ಚಿಸಿ ಇತ್ಯರ್ಥಪಡಿಸಿಕೊಳ್ಳುತ್ತೇವೆ

ಗಂಗಾವತಿ: ತಾಲೂಕಿನ ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿರುವ ಪದ್ಮನಾಭ ತೀರ್ಥರ ಮಧ್ಯಾರಾಧನೆ ಸಂದರ್ಭದಲ್ಲಿ ಮಂತ್ರಾಲಯ ಮಠಾಧೀಶ ಸುಬುಧೇಂದ್ರತೀರ್ಥ ಶ್ರೀಪಾದಂಗಳ ಮತ್ತು ಉತ್ತರಾಧಿ ಮಠಾಧೀಶ ಸತ್ಯಾತ್ಮತೀರ್ಥ ಶ್ರೀಪಾದಂಗಳರ ಸಮಾಗಮ ನಡೆಯಿತು.

ನವ ವೃಂದಾವನ ಗಡ್ಡೆಯಲ್ಲಿ ಕೆಲ ಶ್ರೀಗಳ ಆರಾಧನೆ ವಿಚಾರವಾಗಿ ಹಲವಾರು ವರ್ಷಗಳಿಂದ ಉಭಯ ಮಠಗಳ ಭಕ್ತರ ನಡುವೆ ಭಾರೀ ವಿವಾದ ಇತ್ತು. ನ್ಯಾಯಾಲಯದ ಮೆಟ್ಟಿಲು ಸಹ ಏರಿದ್ದು, ಕೋರ್ಟ್‌ ಎರಡೂ ಮಠಗಳಿಗೆ ಆರಾಧನೆಗೆ ಪ್ರತ್ಯೇಕ ಸಮಯ ನಿಗದಿಪಡಿಸಿತ್ತು. ಎರಡೂ ಮಠಗಳ ಭಕ್ತರಲ್ಲಿ ವೈಮನಸ್ಸು ಉಂಟಾಗಿತ್ತು. ಇದೀಗ ಪ್ರಥಮ ಬಾರಿಗೆ ನವವೃಂದಾವನ ಗಡ್ಡೆಯಲ್ಲಿ ಉಭಯ ಶ್ರೀಗಳು ಒಟ್ಟಾಗಿ ಎರಡೂ ಮಠಗಳ ಭಕ್ತರಿಗೆ ಆಶೀರ್ವಾದ ಮಾಡಿದ್ದಲ್ಲದೇ, ಎಲ್ಲ ಸಮಸ್ಯೆ, ಗೊಂದಲ ಸೌಹಾರ್ದಯುತವಾಗಿ ಬಗೆಹರಿಸುವ ಭರವಸೆ ನೀಡಿದ್ದು ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ್ದಾರೆ.

ಈ ಹಿಂದೆ ಚೈನ್ನೈ ಮತ್ತು ಬೆಂಗಳೂರ ನಗರದಲ್ಲಿ ಉಭಯ ಶ್ರೀಗಳ ಸಮಾಗಮ ನಡೆದಿದ್ದರೂ ಸಹ ಆರಾಧನೆ ಮತ್ತು ನ್ಯಾಯಾಲಯದಲ್ಲಿರುವ ವ್ಯಾಜ್ಯ ಮುಂದುವರಿದಿದ್ದವು. ಈಗ ಮೂರನೇ ಭಾರಿ ನವವೃಂದಾವನ ಗಡ್ಡೆಯಲ್ಲಿರುವ ಪದ್ಮನಾಭತೀರ್ಥರ ವೃಂದಾನ ಮುಂದೆ ಉಭಯ ಶ್ರೀಗಳು ಒಂದಾಗಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಉತ್ತರಾಧಿ ಮಠಾಧೀಶ ಸತ್ಯಾತ್ಮತೀರ್ಥ ಶ್ರೀಪಾದಂಗಳು, ಎರಡೂ ಮಠಗಳಲ್ಲಿ ಸಾಮರಸ್ಯ ಮೂಡಬೇಕು, ಭಕ್ತರಲ್ಲಿ ಗೊಂದಲ ಉಂಟಾಗಬಾರದು. ಎರಡೂ ಮಠಗಳ ಮಧ್ಯೆ ಇರುವ ಆರಾಧನೆ ಸೇರಿದಂತೆ ನ್ಯಾಯಾಲಯದಲ್ಲಿರುವ ವ್ಯಾಜ್ಯ ಕೆಲವೇ ದಿನಗಳಲ್ಲಿ ಸೌಹಾರ್ದತೆಯಿಂದ ಚರ್ಚಿಸಿ ಇತ್ಯರ್ಥಪಡಿಸಿಕೊಳ್ಳುತ್ತೇವೆ ಎಂದರು.

ಪದ್ಮನಾಭ ತೀರ್ಥರ ಪುಣ್ಯ ಕ್ಷೇತ್ರದಲ್ಲಿ ಮಠಾಧೀಶರು ಒಗ್ಗಟ್ಟಾಗಿದ್ದೇವೆ. ಯಾವುದೇ ರೀತಿಯ ಗೊಂದಲ ಇಲ್ಲ ಎಂದ ಅವರು, ಹಲವಾರು ವರ್ಷಗಳಿಂದ ಇದ್ದ ವಿವಾದ ಬರುವ ದಿನಗಳಲ್ಲಿ ಬಗೆಹರಿಸಿಕೊಳ್ಳುತ್ತೇವೆ ಎಂದರು.

ಮಂತ್ರಾಲಯ ಮಠಾಧೀಶ ಸುಬುಧೇಂದ್ರತೀರ್ಥ ಶ್ರೀಪಾದಂಗಳು ಮಾತನಾಡಿ, ಉಭಯ ಶ್ರೀಗಳಲ್ಲಿ ಯಾವುದೇ ರೀತಿಯ ವೈಯಕ್ತಿಕ ಜಗಳ ಇಲ್ಲ. ಕೆಲವೊಂದು ಕಾರಣಗಳಿಂದ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆದಿವೆ. ಶೀಘ್ರದಲ್ಲಿ ವ್ಯಾಜ್ಯ ಸೇರಿದಂತೆ ಆರಾಧನೆ ವಿಷಯ ಇತ್ಯರ್ಥಪಡಿಸಿಕೊಳ್ಳುತ್ತೇವೆ ಎಂದರು.

ನಂತರ ಪದ್ಮನಾಭತೀರ್ಥರ ವೃಂದಾವನಕ್ಕೆ ಮಂಗಳಾರತಿ ಮಾಡಿ ಪೂಜೆ ಸಲ್ಲಿಸಿದರು.

ಉತ್ತಾರಾದಿ ಮಠಾಧೀಶರಿಗೆ ಅದ್ಧೂರಿ ಸ್ವಾಗತ: ನವವೃಂದಾವನ ಗಡ್ಡೆಗೆ ಆಗಮಿಸಿದ ಉತ್ತರಾಧಿ ಮಠಾಧೀಶ ಸತ್ಯಾತ್ಮತೀರ್ಥ ಶ್ರೀಪಾದಂಗಳವರನ್ನು ಮಂತ್ರಾಲಯ ಮಠದ ಭಕ್ತರು ನದಿ ತೀರಕ್ಕೆ ತೆರಳಿ ಅದ್ಧೂರಿಯಾಗಿ ಸ್ವಾಗತಿಸಿದರು. ವೃಂದಾವನದ ಮಾರ್ಗದಲ್ಲಿ ಮಂತ್ರಾಲಯ ಶ್ರೀಗಳು ಉತ್ತರಾಧಿ ಮಠಾಧೀಶರಿಗೆ ಮಾಲೆ ಹಾಕಿ ಸ್ವಾಗತಿಸಿದರು.

ಈ ವೇಳೆ ರಾಜವಂಶಸ್ಥ ಶ್ರೀಕೃಷ್ಣದೇವರಾಯ ಸೇರಿದಂತೆ ಎರಡು ಮಠಗಳ ಪಂಡಿತರು, ಭಕ್ತರು ಭಾಗವಹಿಸಿದ್ದರು.

PREV

Recommended Stories

ಪರಿಶುದ್ಧ ಬದುಕಿನಿಂದ ಜೀವನ ಉಜ್ವಲ: ಡಾ. ವೀರಸೋಮೇಶ್ವರ ಸ್ವಾಮೀಜಿ
ಜಿಲ್ಲೆಯಲ್ಲಿ ಶೇ.100ರಷ್ಟು ಕನ್ನಡ ಅನುಷ್ಠಾನವಾಗಲಿ: ಸಾಜೀದ್ ಮುಲ್ಲಾ.