ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಸಾಧಕರ ಹೆಸರು ಉಳುವಿಗಾಗಿ ಸಂಘಟನಾ ಸಮಿತಿ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಸಾಧಕರನ್ನು ಗುರುತಿಸುವ ಕೆಲಸ ಆಗುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ರಾಜಕೀಯ ಮೇಲಾಟವೇ ಕಾರಣ ಎಂದರು.
ಅಷ್ಟೇನೂ ಸಾಧನೆ ಮಾಡದವರನ್ನು ರಾಜಕೀಯ ಒತ್ತಡದಿಂದಾಗಿ ಅಧಿಕಾರಿ ವರ್ಗದವರು ಗುರುತಿಸಿ ಸನ್ಮಾನಿಸುವ ಪರಿಪಾಠ ನಡೆದಿದೆ. ಇದೀಗ ಸಾಧಕರ ಹೆಸರು ಉಳಿವಿಗಾಗಿ ಸಂಘಟನಾ ಸಮಿತಿ ಅಸ್ತಿತ್ವಕ್ಕೆ ತರುತ್ತಿರುವುದರಿಂದ ಎಲೆಮರೆ ಕಾಯಿಯಂತಿರುವ ಸಾಧಕರನ್ನು ಗುರುತಿಸಲು ಅನುಕೂಲವಾಗಲಿದೆ ಎಂದರು.ಕರ್ನಾಟಕ ಸಾಧಕರ ಹೆಸರು ಉಳಿವಿಗಾಗಿ ಸಂಘಟನಾ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುಗೌಡ ಮಾತನಾಡಿ, ಮನವಿ ಪತ್ರ ನೀಡಿ ಸಾಧಕರು ತಮ್ಮನ್ನು ಗುರುತಿಸಿ ಗೌರವಿಸುವಂತೆ ಕೇಳಿಕೊಳ್ಳುವಂತಹ ಸನ್ನಿವೇಶ ಎದುರಾಗಿರುವುದು ವಿಪರ್ಯಾಸ. ಈ ನಿಟ್ಟಿನಲ್ಲಿ ಸಮಾನ ನಮಸ್ಕರು ಒಂದೆಡೆ ಸೇರಿ ಸಾಧಕರು ಹುದುಗಿ ಹೋಗದಂತೆ ಅವರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುವ ಉದ್ದೇಶದಿಂದ ಸಮಿತಿ ರಚನೆ ಮಾಡಿದ್ದು ರಾಜ್ಯಾದ್ಯಂತ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಅಧ್ಯಕ್ಷರಾಗಿ ಎಚ್.ಎನ್.ಮಂಜುನಾಥ್ ಆಯ್ಕೆ: ತಾಲೂಕು ಸಂಘಟನಾ ಸಮಿತಿ ಅಸ್ತಿತ್ವಕ್ಕೆ ತರಲಾಗಿದ್ದು, ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್ ಅವರನ್ನು ಸಮಿತಿ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯನ್ನಾಗಿ ಸಹಕಾರಿ ಧುರೀಣ ಆರ್.ಚನ್ನಕೇಶವ ಹಾಗೂ ಸಂಘಟನಾ ಕಾರ್ಯದರ್ಶಿಯನ್ನಾಗಿ ದಸಂಸ ಮುಖಂಡ ಡಿ.ಕೆ.ಅಂಕಯ್ಯ ಅವರನ್ನು ಆಯ್ಕೆ ಮಾಡಲಾಯಿತು. ಉಳಿದ ಪದಾಧಿಕಾರಿಗಳನ್ನು ಶೀಘ್ರವೇ ಸಭೆ ಕರೆದು ಆಯ್ಕೆ ಮಾಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.