- ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷದ ಅಂಗವಾಗಿ ಏರ್ಪಡಿಸಿದ್ದ ಸಿರಿಧಾನ್ಯಗಳ ಪಾಕಸ್ಪರ್ಧೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಿರಿಧಾನ್ಯವನ್ನು ಜನಪ್ರಿಯಗೊಳಿಸಲು ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ಸುಜಾತ ಹೇಳಿದ್ದಾರೆ.
ಬುಧವಾರ ನಗರದ ಕೃಷಿ ಇಲಾಖೆ ಆವರಣದಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ- 2023 ರ ಅಂಗವಾಗಿ ಏರ್ಪಡಿಸಿದ್ದ ಸಿರಿಧಾನ್ಯಗಳ ಪಾಕಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಂಬರುವ ಜನವರಿ 5 ರಿಂದ 7 ರ ವರೆಗೆ ಬೆಂಗಳೂರಿನಲ್ಲಿ ಸಿರಿಧಾನ್ಯಗಳ ಮೇಳ ನಡೆಯುತ್ತಿರುವುದರಿಂದ ಪ್ರತಿ ಜಿಲ್ಲೆಗಳಲ್ಲಿ ಸಿರಿ ಧಾನ್ಯಗಳ ಪಾಕ ಸ್ಪರ್ಧೆ ಏರ್ಪಡಿಸಲಾಗಿದೆ. ಬೆಂಗಳೂರಿನ ಸಿರಿಧಾನ್ಯ ಮೇಳಕ್ಕೆ ನಮ್ಮ ಜಿಲ್ಲೆಯಿಂದ ಸುಮಾರು 120 ರೈತರನ್ನು ಕರೆದೊಯ್ಯ ಲಾಗುವುದು ಎಂದರು.ಮುಂದಿನ ವಾರದಲ್ಲಿ ಸಿರಿಧಾನ್ಯ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಇಂದು 15 ಮಂದಿ ಮಹಿಳೆಯರು ಸಿರಿಧಾನ್ಯದ ಬೇರೆ ಬೇರೆ ಪದಾರ್ಥಗಳನ್ನು ತಯಾರಿಸಿ ಪ್ರದರ್ಶನಕ್ಕಿಟ್ಟಿದ್ದಾರೆ. ತೀರ್ಪುಗಾರರು ಪರಿಶೀಲನೆ ನಡೆಸಿ ಫಲಿತಾಂಶ ನಿರ್ಧರಿಸುತ್ತಾರೆ ಎಂದು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕಿ ವಿಜಯಲಕ್ಷ್ಮಿ ಮಾತನಾಡಿ, ನವಣೆ, ಸಾಮೆ, ಊದಲು, ಹಾರಕ, ಬರಗು ಮುಂತಾದ ಧಾನ್ಯ ಗಳನ್ನು ಬಳಸಿ ಸಿಹಿ ಮತ್ತು ಖಾರದ ಪದಾರ್ಥಗಳನ್ನು ತಯಾರಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಎರಡೂ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿದವರಿಗೆ ತಲಾ 5 ಸಾವಿರ ರು. ಬಹುಮಾನ ನೀಡಲಾಗುವುದು ಎಂದರು.ಜಿಲ್ಲೆಯಾದ್ಯಂತ ರೈತರಲ್ಲಿ ಸಿರಿಧಾನ್ಯ ಬೆಳೆಯಲು ಉತ್ತೇಜನ ನೀಡುವ ಸಲುವಾಗಿ ಈ ರೀತಿ ಕಾರ್ಯಕ್ರಮ ಹಮ್ಮಿ ಕೊಳ್ಳ ಲಾಗುತ್ತಿದೆ. ಮಲೆನಾಡು ಭಾಗದಲ್ಲಿ ಸಿರಿಧಾನ್ಯಗಳ ಬಗ್ಗೆ ಸಾಕಷ್ಟು ಅರಿವಿಲ್ಲ. ಸಿರಿಧಾನ್ಯ ಆರೋಗ್ಯಕ್ಕೆ ಪೂರಕ ಎಂದು ಗೊತ್ತಿದ್ದರೂ ಬೆಳೆ ಪದ್ಧತಿ ಬಗ್ಗೆ ಸಾಕಷ್ಟು ಮಾಹಿತಿ ಇಲ್ಲ. ಈ ಬಗ್ಗೆ ಮಾಹಿತಿ ನೀಡಲು ಕಾರ್ಯಕ್ರಮ ಹಮ್ಮಿಕೊಳ್ಳ ಲಾಗುವುದು ಎಂದರು.
ತೀರ್ಪುಗಾರರಾಗಿ ಆಗಮಿಸಿದ್ದ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಡಾ.ಸ್ನೇಹ ಶೀಗೆಹಳ್ಳಿ ಮಾತನಾಡಿ, ಸಿರಿಧಾನ್ಯ ಆರೋಗ್ಯ ಹಾಗೂ ಆದಾಯಗಳೆರಡಕ್ಕೂಸಿರಿ ತಂದುಕೊಡುತ್ತದೆ ಎಂದರು.ಈ ವರ್ಷವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿರಿಧಾನ್ಯಗಳ ವರ್ಷ ಎಂದು ಆಚರಿಸುತ್ತಿದ್ದೇವೆ. ಇದರ ಅಂಗವಾಗಿ ಸಿರಿಧಾನ್ಯಗಳಿಂದ ತಯಾರಿಸಲಾದ ಪಾಕ ಸ್ಪರ್ಧೆ ಆಯೋಜಿಸಲಾಗಿದೆ. 9 ಧಾನ್ಯಗಳನ್ನು ಸಿರಿಧಾನ್ಯಗಳು ಎನ್ನಲಾಗು ತ್ತದೆ. ಸಿರಿಧಾನ್ಯಗಳು ಭೂಮಿ, ಆರೋಗ್ಯ ಎರಡಕ್ಕೂ ವರದಾನ ಎಂದರು.
ಅತ್ಯಧಿಕವಾದ ನಾರಿನ ಅಂಶ ಸೇರಿದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸತ್ವಗಳು, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳು, ಸಕ್ಕರೆ, ಪಿಸ್ತಗಳನ್ನು ಯಥೇಚ್ಛವಾಗಿ ಹೊಂದಿರುತ್ತವೆ. ಈ ಕಾರಣಕ್ಕೆ ಜೀವನಶೈಲಿ ಆಧಾರಿತ ಕೆಲವು ರೋಗಗಳಿಗೂ ಇದು ಉತ್ತಮ ಮದ್ದಾಗಿದೆ. ಈ ಕಾರಣಕ್ಕೆ ಆಹಾರದಲ್ಲಿ ಹೆಚ್ಚಾಗಿ ಬಳಸಬೇಕು. ಹೊಲ, ಗದ್ದೆ ಗಳಲ್ಲೂ ನಮ್ಮ ತಟ್ಟೆಗಳಲ್ಲೂ ಸಿರಿಧಾನ್ಯಗಳು ಇರಬೇಕು ಎಂದರು.ತೀರ್ಪುಗಾರರಾಗಿ ಮಂಗಳಾ ತಮ್ಮಯ್ಯ, ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಡಾ.ಸ್ನೇಹ, ಚಂದ್ರಶೇಖರ ನಾರಣಾಪುರ ಭಾಗವಹಿಸಿದ್ದರು. 13 ಕೆಸಿಕೆಎಂ 1
ಚಿಕ್ಕಮಗಳೂರಿನ ಕೃಷಿ ಇಲಾಖೆ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಸಿರಿಧಾನ್ಯಗಳ ಪಾಕಸ್ಪರ್ಧೆ ಕಾರ್ಯಕ್ರಮವನ್ನು ಜಂಟಿ ಕೃಷಿ ನಿರ್ದೇಶಕಿ ಸುಜಾತ ಉದ್ಘಾಟಿಸಿದರು.