ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಶಾಸಕ
ಶೀಘ್ರದಲ್ಲೇ ಮರಿಯಮ್ಮನಹಳ್ಳಿಯ ಪಪಂಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಈ ಕುರಿತು ಈಗಾಗಲೇ ಸಂಬಂಧಿಸಿದ ಸಚಿವರಿಗೆ ಮನವಿ ನೀಡಿ ಒತ್ತಾಯಿಸಲಾಗಿದೆ ಎಂದು ಶಾಸಕ ಕೆ. ನೇಮರಾಜ್ ನಾಯ್ಕ ಹೇಳಿದರು.
ಇಲ್ಲಿನ ಪಪಂ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ಕುರಿತು ಸಭೆಯಲ್ಲಿ ಮಾತನಾಡಿದರು.ಸಾರ್ವಜನಿಕರು ಕಚೇರಿಗೆ ಪದೇ ಪದೇ ಅಲೆದಾಡದಂತೆ ಅಧಿಕಾರಿಗಳು ಅಹವಾಲುಗಳಿಗೆ ತಕ್ಷಣವೇ ಸ್ಪಂದಿಸಿ ಅವರ ಕೆಲಸ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ತಕ್ಷಣವೇ ಪರಿಹರಿಸಿಕೊಡಬೇಕು. ಸಾರ್ವಜನಿಕರ ಕೆಲಸಕ್ಕೆ ಅಧಿಕಾರಿಗಳು ಯಾವುದೇ ರೀತಿಯಲ್ಲಿ ಹಣ ಕೇಳುವಂತಿಲ್ಲ. ಒಂದು ವೇಳೆ ಪಂಚಾಯಿತಿ ಅಧಿಕಾರಿಗಳಾಗಲಿ ಅಥವಾ ಸಿಬ್ಬಂದ್ದಿಗಳಾಗಲಿ ಲಂಚ ಕೇಳಿರುವ ಬಗ್ಗೆ ಸಾರ್ವಜನಿಕರಿಂದ ಏನಾದರೂ ದೂರು ಬಂದರೆ ಅಥಹವರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.ಫಾರಂ 3 ವಿತರಿಸಲು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಸೂಕ್ತ ದಾಖಲೆಗಳಿದ್ದರೆ, 30-40 ವರ್ಷಗಳಿಂದ ಅದೇ ಜಾಗದಲ್ಲಿ ವಾಸವಾಗಿದ್ದರೆ ಅವರ ದಾಖಲಾತಿ ಪರಿಶೀಲಿಸಿ ತಕ್ಷಣವೇ ಫಾರಂ 3 ವಿತರಿಸಲು ಸೂಚಿಸಿದರು. ದಾಖಲಾತಿಗಳಲ್ಲಿ ಏನಾದರೂ ಗೊಂದಲಗಳು ಇದ್ದರೆ ಅಧಿಕಾರಿಗಳು ಮತ್ತು ಸಿಬ್ಬಂದ್ದಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಸಮಸ್ಯೆಯನ್ನು ನಿವಾರಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಬಸ್ ನಿಲ್ದಾಣದ ಆವರಣದಲ್ಲಿ ಆಟೋ ನಿಲ್ದಾಣಕ್ಕಾಗಿ ಜಾಗ ಕಾಯ್ದೆರಿಸಲು ಸಾರಿಗೆ ಇಲಾಖೆಯ ಅಧಿಕಾರಿಗಳು ಮುಂದಾಗಬೇಕು. ಬಸ್ ನಿಲ್ದಾಣದಲ್ಲಿ ಈಗಿರುವ ಅಂಗಡಿ ಹೊರತು ಪಡಿಸಿ ಹೊಸದಾಗಿ ಅಂಗಡಿಗಳಿಗೆ ಪರವಾನಿಗೆ ನೀಡಬಾರದು. ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯ ಅಧಿಕಾರಿಗಳು ಮುಂದಾಗಬೇಕು ಎಂದು ಸೂಚಿಸಿದರು.