ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಾಗಿ ರೈತರು ಚೆಂಡು ಹೂ, ಸೇವಂತಿಗೆ ಬೆಳೆದಿದ್ದರಿಂದ ದೀಪಾವಳಿ ಹಬ್ಬದಲ್ಲಿ ರೈತನ ಕೈ ಹಿಡಿದ ಚೆಂಡು ಹೂ ಮತ್ತು ಸೇವಂತಿಗೆ ಈಗ ಮಾರುಕಟ್ಟೆಗೆ ಲಗ್ಗೆ
ಸಿ.ಕೆ.ನಾಗರಾಜ ಹೊಸಪೇಟೆ
ನಾಡಿನಾದ್ಯಂತ ಎಲ್ಲಡೆ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ ಮುಂಗಾರು ಮಳೆ ಕೈಕೊಟ್ಟು ಹಿಂಗಾರು ಹಿನ್ನಡೆಯಾಗಿ ಮಳೆಯ ತೀವ್ರ ಕೊರತೆಯಿಂದ ರೈತರಿಗೆ ತೀವ್ರ ಸಂಕಷ್ಟ ಎದುರಾಗಿತ್ತು. ಕೆಲ ರೈತರಿಗೆ ದೀಪಾವಳಿ ಹಬ್ಬ ಕತ್ತಲೆಯಾಗಿ ಪರಿಣಮಿಸಿದರೆ, ಮತ್ತೆ ಕೆಲ ರೈತರಿಗೆ ಚೆಂಡು ಹೂವಿನ ಬೆಳೆ ರೈತನ ಕೈ ಹಿಡಿದು ಬೆಳಕಾಗಿ ಪರಿಣಮಿಸಿದೆ.
ಈ ನೋವು -ನಲಿವಿನ ನಡುವೆ ರೈತರ ಮನಸ್ಸಿಗೂ ಖುಷಿ ಕೊಡುವ ಹಾಗೂ ದಸರಾ ಮತ್ತು ದೀಪಾವಳಿ ಹಬ್ಬದ ಸಂಭ್ರಮಕ್ಕೆ ಹೂ ಬೇಕಾಗುವುದರಿಂದ ಇದನ್ನು ಮನಗೊಂಡು ಕೆಲ ರೈತರು ಚೆಂಡು ಹೂ, ಸೇವಂತಿಗೆ ಬೆಳೆಯಲು ಮುಂದಾಗಿದ್ದರು.
ಚೆಂಡು ಹೂವಿನ ಬೆಳೆಗೆ ಸಕಾಲದಲ್ಲಿ ಮಳೆ ಇಲ್ಲದೇ ಬೋರ್‌ವೇಲ್ ನಲ್ಲಿ ನೀರು ಕಡಿಮೆಯಾಗಿ ಬೆಳೆ ಒಣಗಿ ಹೂವು ಬಿಡುವ ಮುನ್ನವೇ ಗಿಡ ಬಾಡಿದ್ದರಿಂದ ಕೆಲ ರೈತರು ಚೆಂಡು ಹೂವಿನ ನಷ್ಟ ಅನುಭವಿಸಿದ್ದಾರೆ. ಇನ್ನೂ ಕೆಲ ರೈತರು ಕಡಿಮೆ ಅವಧಿಗೆ ಉತ್ತಮ ಬೆಳೆಯಾದ ಚೆಂಡು ಹೂವು ಬೆಳೆದಿದ್ದರಿಂದ ಮತ್ತು ಮಾರುಕಟ್ಟೆಯಲ್ಲಿ ಕೆಜಿ ₹ 100 ಬೆಲೆ ಸಿಕ್ಕಿರುವುದರಿಂದ ರೈತರಿಗೆ ಬರಗಾಲದಲ್ಲಿ ಚೆಂಡು ಹೂವು ಕೈಹಿಡಿದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ತಾಲೂಕಿನಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಾಗಿ ರೈತರು ಚೆಂಡು ಹೂ, ಸೇವಂತಿಗೆ ಬೆಳೆದಿದ್ದರಿಂದ ದೀಪಾವಳಿ ಹಬ್ಬದಲ್ಲಿ ರೈತನ ಕೈ ಹಿಡಿದ ಚೆಂಡು ಹೂ ಮತ್ತು ಸೇವಂತಿಗೆ ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟು ರೈತರಿಗೆ ಉತ್ತಮ ದರ ದೊರಕಿರುವುದರಿಂದ ದೀಪಾವಳಿಗೆ ಚೆಂಡು ಹೂವಿನದೇ ಮೆರುಗು ಹೆಚ್ಚಿಸಿದೆ.
ಕೆಲ ರೈತರು ದಸರಾ ಹಬ್ಬಕ್ಕೆ ಮತ್ತೆ ಕೆಲವರು ದೀಪಾವಳಿ ಹಬ್ಬಕ್ಕೆ ಸರಿಯಾಗಿ ಕಟಾವಿಗೆ ಬರುವ ರೀತಿಯಲ್ಲಿ ರೈತರು ಚೆಂಡು ಹೂವು ಬೆಳೆಯುತ್ತಾರೆ. ಫಸಲು ಬರುತ್ತಿದ್ದಂತೆಯೇ ಹಬ್ಬದ ಮಾರಕಟ್ಟೆಗೆ ಸಿದ್ಧವಾಗಿ ಹೂವು ಬರುತ್ತದೆ. ಹೊಸಪೇಟೆ ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ರೈತರು ಚೆಂಡು ಹೂ, ಸೇವಂತಿಗೆ ಬೆಳೆದಿದ್ದಾರೆ.
ಕಳೆದ ವರ್ಷಕ್ಕಿಂತ ಈ ವರ್ಷ ಕೆಂಪು ಚೆಂಡು ಹೂವಿಗಿಂತ ಹಳದಿ ಚೆಂಡು ಹೂ ಹೆಚ್ಚಾಗಿ ಬೆಳೆದಿದ್ದಾರೆ. ಚೆಂಡು ಹೂವುಗಳಲ್ಲಿ ವಿವಿಧ ಬಣ್ಣದಲ್ಲಿ ಬೆಳೆಯಲಾಗುತ್ತದೆ. ದಟ್ಟ ಹಳದಿ, ಕಿತ್ತಳೆ, ಕೇಸರಿ, ಕೆಂಪು ಸೇರಿದಂತೆ ವಿವಿಧ ತಳಿಯ ಹೂ ಬೆಳೆದಿದ್ದು, ಹಳದಿ ಚೆಂಡು ಹೂಗಳಿಗೆ ಹೆಚ್ಚಿನ ಬೆಲೆ ಸಿಗುವುದು ಎಂದು ರೈತರು ಹಳದಿ ಚೆಂಡು ಹೂ ಅಧಿಕ ಸಂಖ್ಯೆಯಲ್ಲಿ ಬೆಳೆದಿದ್ದಾರೆ.
ಕೆಲ ವರ್ಷಗಳ ಹಿಂದೆ ಚೆಂಡು ಹೂ ಕೇವಲ ಹಬ್ಬಗಳಿಗಾಗಿ ಬೆಳೆಯುವ ಕಾಲವೊಂದಿತ್ತು. ಆದರೆ ಈಗ ಹಾಗಿಲ್ಲ. ಈಗ ಚೆಂಡು ಹೂ ಬಹು ಉಪಯೋಗಕ್ಕೆ ಬರುವ ಬೆಳೆಯಾಗಿರುವುದರಿಂದ ಚೆಂಡು ಹೂವನ್ನು ಬಟ್ಟೆಗೆ ಬಣ್ಣಕ್ಕೆ ಬಳಸಲು ಆಹಾರ ವಸ್ತು ತಯಾರಿಕೆಯಲ್ಲಿ ಬಣ್ಣಕ್ಕೆ, ವಿವಿಧ ರೋಗಗಳ ಪರಿಹಾರಕ್ಕೆ ಆಯುರ್ವೇದ ಔಷಧಿ ತಯಾರಿಕೆಗೂ ಚೆಂಡು ಹೂ ಬಳಸುವುದರಿಂದ ಚೆಂಡು ಹೂವಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಾಗಿದೆ.
ಚೆಂಡು ಹೂ31.53 ಹೆಕ್ಟರ್, ಸಣ್ಣ ಗುಲಾಬಿ 4.55 ಹೆಕ್ಟರ್, ಮಲ್ಲಿಗೆ 4.44 ಹೆಕ್ಟರ್, ಸುಗಂಧರಾಜ 8.27 ಹೆಕ್ಟರ್, ಸೇವಂತಿಗೆ 0.53 ಹೆಕ್ಟರ್, ಸಂಪಿಗೆ 0.23 ಹೆಕ್ಟರ್, ಕಾಕಡ 087ಹೆಕ್ಟರ್, ಕನಕಾಂಬರಿ 0.02 ಹೆಕ್ಟರ್ ಹೂ ಬೆಳೆಯಲಾಗಿದೆ.
ಕಳೆದ ವರ್ಷಕ್ಕಿಂತ ಈ ವರ್ಷ ರೈತರು ಹೆಚ್ಚಿನ ಪ್ರಮಾಣದಲ್ಲಿ ಚೆಂಡು ಹೂ ಬೆಳೆದಿದ್ದಾರೆ. ಆದರೆ ಸರಿಯಾದ ಸಮಯಕ್ಕೆ ಮಳೆ ಬಾರದೇ ಬೆಳೆ ಕಡಿಮೆಯಾಗಿದೆ. ಮಳೆ ಆಗಿದ್ದರೆ ಉತ್ತಮ ಬೆಳೆ ಬಂದು ಮತಷ್ಟು ಲಾಭವಾಗುತ್ತಿತ್ತು. ಆದರೂ ಬರದಲ್ಲಿ ಚೆಂಡು ಹೂ ನಮಗೆ ಕೈ ಹಿಡಿದಿದೆ.
ವಿಜಯಕುಮಾರ್, ಚೆಂಡು ಬೆಳೆದ ರೈತ ನಾಗೇನಹಳ್ಳಿ
ಚೆಂಡು ಹೂವಿನ ಬೆಳೆ ಹಾಕಲಾಗಿತ್ತು. ಆದರೆ ಮಳೆ ಇಲ್ಲದೇ ಬೋರ್‌ವೆಲ್‌ನಲ್ಲಿ ನೀರು ಕಡಿಮೆಯಾಗಿ ಚೆಂಡು ಹೂ ಬೆಳೆಗೆ ನೀರು ಇಲ್ಲದೇ ಒಣಗಿ ಹೋಗಿದ್ದರಿಂದ ಚೆಂಡು ಹೂ ಬೆಳೆ ನಷ್ಟವಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.