ಶಿರಸಿ: ಮಾರಿಕಾಂಬಾ ದೇವಿಯ ಜಾತ್ರೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ವಿಜೃಂಭಣೆಯಿಂದ ಆಚರಿಸಲು ಎಲ್ಲ ಇಲಾಖೆಗಳ ಅಧಿಕಾರಿ ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸಹಾಯಕ ಆಯುಕ್ತ ಚಂದ್ರಶೇಖರ್ ಆರ್.ಜಿ. ಹೇಳಿದರು.
ಜಾತ್ರೆಗೆ ಬರುವ ಭಕ್ತಾದಿಗಳ ರಕ್ಷಣೆಗೆ ಸಿಸಿ ಕ್ಯಾಮೆರಾ, ವಾಚ್ ಟವರ್‌ಗಳನ್ನು ಅಳವಡಿಸಲಾಗುತ್ತಿದೆ. ಫೆ. 23ರಿಂದ ಜಾತ್ರೆ ಮುಗಿಯುವ ವರೆಗೆ ಕೆಂದ್ರ ಸ್ಥಾನವನ್ನು ಬಿಟ್ಟು ಅಧಿಕಾರಿಗಳು ತೆರಳುವಂತಿಲ್ಲ. ರಜೆ ಹಾಕುವಂತಿಲ್ಲ. ಇಲಾಖೆ ನೀಡಿದ ಗುರುತಿನ ಪತ್ರವನ್ನು ಧರಿಸಿ ಕರ್ತವ್ಯ ನಿರ್ವಹಿಸಬೇಕು. ಜಾತ್ರೆ ಸಮಯದಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಭಕ್ತಾದಿಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ನಾವೆಲ್ಲರೂ ಸೇರಿ ಜಾತ್ರೆಯನ್ನು ಯಶಸ್ವಿಯಾಗಿ ನಡೆಸೋಣ ಎಂದರು.
ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ಆರ್.ಜಿ. ನಾಯ್ಕ ಮಾತನಾಡಿ, ವಿಶೇಷಚೇತನರಿಗೆ, ಅಂಗವಿಕಲರಿಗೆ ಬೆಳಗ್ಗೆ 10ರಿಂದ12.30 ಹಾಗೂ ರಾತ್ರಿ 10ರ ಆನಂತರ ಕೆಲಸಮಯ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ದೇವಿಯ ದರ್ಶನಕ್ಕೆ ಬರುವ ಗಣ್ಯರಿಗೆ ವಿಶೇಷ ಪ್ರವೇಶ ದ್ವಾರ ತೆರೆಯಲಾಗಿದೆ ಎಂದರು.ಕೆಎಸ್ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿ, ಶನಿವಾರ ರಾತ್ರಿಯಿಂದ ಕೇಂದ್ರೀಯ ಬಸ್ ನಿಲ್ದಾಣವನ್ನು ಗಣೇಶನಗರ ಬಸ್ ನಿಲ್ದಾಣಕ್ಕೆ ವರ್ಗಾಯಿಸಲಾಗುವುದು. ಅಲ್ಲಿಂದಲೇ ಬಸ್ ಸಂಚಾರ ನಡೆಯಲಿದೆ. ಹನುಮಾನ ವ್ಯಾಯಾಮ ಶಾಲೆಯಲ್ಲಿ ಬಸ್ ಪಿಕಪ್ ಪಾಯಿಂಟ್ ಮಾಡಲಾಗಿದೆ. ಜಾತ್ರೆಗೆ ಬರುವ ಭಕ್ತಾದಿಗಳಿಗೆ ಅನೂಕೂಲವಾಗುವ ಉದ್ದೇಶದಿಂದ 200 ಬಸ್‌ಗಳು ಜಾತ್ರೆ ವಿಶೇಷವಾಗಿ ಸಂಚಾರ ಮಾಡಲಿದೆ ಎಂದರು.
ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿ, ಎರಡು ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ಇರಲಿದೆ. ಇದರ ಜತೆಗೆ ಜಾತ್ರಾ ಗದ್ದುಗೆ ಸಮೀಪ ಹಾಗೂ ಕೋಟೆಕೆರೆ ಸಮೀಪ ಅಗ್ನಿ ಬೈಕ್‌ಗಳು ಇರಲಿವೆ ಎಂದರು.
ಹೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿ, ವಿದ್ಯುತ್ ಅವಘಡಗಳು ಆಗದಂತೆ ಕ್ರಮಕೈಗೊಳ್ಳಲಾಗಿದೆ. ಜಾತ್ರೆ ಸಮಯದಲ್ಲಿ ವಿದ್ಯುತ್ ವ್ಯತ್ಯಯ ಆಗದಂತೆ ಎಚ್ಚರಿಕೆ ವಹಿಸಿದ್ದೇವೆ ಎಂದರು.
ತಹಸೀಲ್ದಾರ್ ಪಟ್ಟರಾಜ ಗೌಡ, ಸಿಪಿಐ ಶಶಿಕಾಂತ ವರ್ಮಾ, ನಗರ ಠಾಣೆ ಪಿಎಸ್ಐ ನಾಗಪ್ಪ ಬಿ. ಹಾಗೂ ಪ್ರಮುಖರಾದ ಖಾದರ್ ಆನವಟ್ಟಿ ಸೇರಿದಂತೆ ಹಲವರು ಇದ್ದರು.