ಮರಿತಿಬ್ಬೇಗೌಡ, ಅಪ್ಪಾಜಿಗೌಡ ಕಾಂಗ್ರೆಸ್‌ಗೆ

KannadaprabhaNewsNetwork |  
Published : Mar 23, 2024, 01:10 AM ISTUpdated : Mar 23, 2024, 12:39 PM IST
Congress joining 3 | Kannada Prabha

ಸಾರಾಂಶ

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿವಕುಮಾರ್ ಸಮ್ಮುಖದಲ್ಲಿ ಮಂಡ್ಯ ಜಿಲ್ಲೆಯ ಜೆಡಿಎಸ್ ನಾಯಕರಾದ ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ, ಅಪ್ಪಾಜಿಗೌಡ ಮತ್ತಿತರರು ಕಾಂಗ್ರೆಸ್‌ ಸೇರ್ಪಡೆಯಾದರು.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಜೆಡಿಎಸ್‌ ರಾಜಕೀಯದ ಗೊಂದಲದ ಗೂಡಾಗಿದೆ. ಹೀಗಾಗಿ ಮರಿತಿಬ್ಬೇಗೌಡ ಸೇರಿದಂತೆ ಸಾವಿರಾರು ಮಂದಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿವಕುಮಾರ್ ಸಮ್ಮುಖದಲ್ಲಿ ಮಂಡ್ಯ ಜಿಲ್ಲೆಯ ಜೆಡಿಎಸ್ ನಾಯಕರಾದ ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ, ಅಪ್ಪಾಜಿಗೌಡ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೆಂಕಟೇಶ್, ಸದಸ್ಯ ಯೋಗೇಶ್, ಮಂಜುನಾಥ್ ಗೌಡ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಆಶಾ ಸುರೇಶ್ ಸೇರಿ ಹಲವರು ಕಾಂಗ್ರೆಸ್ ಸೇರ್ಪಡೆಗೊಂಡರು.

ಈ ವೇಳೆ ಮಾತನಾಡಿದ ಶಿವಕುಮಾರ್‌, ಮರಿತಿಬ್ಬೇಗೌಡ ಸೇರ್ಪಡೆಯಿಂದ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಶಕ್ತಿ ಬಂದಿದೆ. ನಾನು ಬಹಳ ದಿನದಿಂದ ಅವರಿಗೆ ಗಾಳ ಹಾಕುತ್ತಿದ್ದೆ. 

ಈಗ ಪಕ್ಷಕ್ಕೆ ಬಂದಿದ್ದಾರೆ. ಜೆಡಿಎಸ್‌ ಗೊಂದಲ ನೋಡಿ ದಿನೇಶ್ ಗೂಳಿಗೌಡ ಅವರ ವಿರುದ್ಧ ಕಡಿಮೆ ಮತಗಳ ಅಂತರದಿಂದ ವಿಧಾನಪರಿಷತ್‌ ಚುನಾವಣೆ ಸೋತಿದ್ದ ಅಪ್ಪಾಜಿಗೌಡರು ಪಕ್ಷಕ್ಕೆ ಬಂದಿದ್ದಾರೆ. 

ಮಂಡ್ಯ ಮಾಜಿ ಶಾಸಕ ಶ್ರೀನಿವಾಸ್‌ ಅವರು ಕೂಡ ಇಂದು ಸೇರ್ಪಡೆಯಾಗಬೇಕಿತ್ತು. ಆದರೆ ಅನಾರೋಗ್ಯದಿಂದ ಸಾಧ್ಯವಾಗಲಿಲ್ಲ. ಈ ಬಾರಿಯ ಮಂಡ್ಯ ಲೋಕಸಭೆ ಚುನಾವಣೆ ಫಲಿತಾಂಶದ ವೇಳೆ ಕಾಂಗ್ರೆಸ್‌ ಬಾವುಟ ಹಾರಿಸಲು ಅವರೆಲ್ಲರೂ ಸಂಕಲ್ಪ ತೊಟ್ಟಿದ್ದಾರೆ ಎಂದು ಹೇಳಿದರು.

ಮರಿತಿಬ್ಬೇಗೌಡ ಮಾತನಾಡಿ, ಜಾತ್ಯತೀತ ತತ್ವಗಳನ್ನು ಜೆಡಿಎಸ್ ಗಾಳಿಗೆ ತೂರಿದ ಕಾರಣ ನನ್ನ ಕ್ಷೇತ್ರದ ಶಿಕ್ಷಕರ ಅಭಿಪ್ರಾಯ ಕೇಳಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ. ಜೆಡಿಎಸ್‌ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ, ಕಾರ್ಯಕರ್ತರ, ಮುಖಂಡರ ಅಭಿಪ್ರಾಯಗಳಿಗೆ ಬೆಲೆ ಇಲ್ಲ. 

ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಕಾವೇರಿ ವಿಚಾರವನ್ನು ಭಾವನಾತ್ಮಕವಾಗಿ ಬಳಸಿಕೊಂಡಿದ್ದಾರೆ. ರೈತರ ಹೆಸರು ಹೇಳಿಕೊಂಡು ಜನತಾದಳ ಕೇವಲ ರಾಜಕಾರಣ ಮಾಡಿದೆ. ಮಂಡ್ಯ ಜಿಲ್ಲೆಗೆ ಜೆಡಿಎಸ್ ಕೊಡುಗೆ ಶೂನ್ಯ ಎಂದು ಕಿಡಿಕಾರಿದರು.

ಜನತಾದಳದವರು ನನಗೆ ಟಿಕೆಟ್ ಮಾತ್ರ ನೀಡಿದರು. ಆದರೆ, ಬೆಂಬಲ ನೀಡಲಿಲ್ಲ. ಕೇವಲ ಕುಟುಂಬದ ಪರವಾಗಿ ಮಾತ್ರ ಪಕ್ಷದ ಸಭೆಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. 

ಇಂದು ಅವರಿಂದ ಜಾತ್ಯತೀತ ತತ್ವಗಳಿಗೆ ಧಕ್ಕೆ ಆಗಿರುವ ಕಾರಣ ಮತ್ತು ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿಗೆ ಸಂಪೂರ್ಣವಾಗಿ ಬೆಂಬಲ ನೀಡಲಿದ್ದೇವೆ ಎಂದರು.

ಸಚಿವರಾದ ಚಲುವರಾಯಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್, ಬಿ.ಕೆ ಹರಿಪ್ರಸಾದ್, ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣ ಗೌಡ (ಸ್ಟಾರ್ ಚಂದ್ರು), ಶಾಸಕರಾದ ಉದಯ್, ರವಿ ಗಣಿಗ, ವಿಧಾನಪರಿಷತ್‌ ಸದಸ್ಯ ದಿನೇಶ್ ಗೂಳಿಗೌಡ ಸೇರಿ ಹಲವರು ಹಾಜರಿದ್ದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌