ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ನಡೆದ ಸರಳ ಸಾಮೂಹಿಕ ವಿವಾಹ ಹಾಗೂ ವಿವಾಹವಾಗಿ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡ ಹಿರಿಯ ದಂಪತಿಗಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ನಮ್ಮ ಪ್ರಜ್ಞೆ ಮತ್ತಷ್ಟು ಎತ್ತರಕ್ಕೆ ಹೋಗುವ ಹೋಲಿಕೆ ಇರಬೇಕೇ ಹೊರತು ನಮ್ಮನ್ನು ಕೆಳಗೆ ಎಳೆತಂದು ನಮ್ಮ ಸಂಸಾರದ ತೇರು ದಾರಿ ತಪ್ಪದಂತೆ ನೋಡಿಕೊಂಡರೆ ಬದುಕು ಬಹಳ ಸುಂದರವಾಗಿರುತ್ತದೆ ಎಂದು ಕಿವಿಮಾತು ಹೇಳಿದರು.ಮದುವೆಗೋಸ್ಕರ ಲಕ್ಷಾಂತರ ರು.ಗಳ ಸಾಲ ಮಾಡಿ ನಂತರದಲ್ಲಿ ಎಲ್ಲರೂ ಕೈಬಿಟ್ಟ ಮೇಲೆ ನಿಮ್ಮ ಬದುಕನ್ನು ಕಟ್ಟಿಕೊಳ್ಳುವ ಸಂದರ್ಭದಲ್ಲಿ ಸಾಲ ಮಾಡಿದ ಘಳಿಗೆ ದುಸ್ಥರವಾಗುತ್ತದೆ. ಎಷ್ಟೇ ಅನ್ಯೋನ್ಯವಾದ ಪ್ರೀತಿ ತೋರುವ ಬಂಧುಗಳು ಜೊತೆಯಲ್ಲಿದ್ದರೂ ಕೂಡ ಭೌತಿಕವಾಗಿ ಸಾಕಷ್ಟು ಹೊರೆ ಬಿದ್ದಾಗ ಸಹಜವಾಗಿ ಪ್ರೀತಿ ಹಳಸುತ್ತದೆ ಎಂದರು.
ಪ್ರತಿಯೊಬ್ಬ ವ್ಯಕ್ತಿಯ ಬದುಕು ಕೂಡ ಅದೇ ರೀತಿ. ಬದುಕು ಇರುವುದೇ ಜ್ಞಾನವನ್ನು ಪಡೆದು ನಮ್ಮನ್ನು ನಾವು ಸುಜ್ಞಾನದ ಕಡೆಗೆ ಕೊಂಡೊಯ್ಯಲು. ಅಂತಹ ಹೊತ್ತಿನಲ್ಲಿ ಅಜ್ಞಾನದಿಂದ ಸಾಲ, ಪ್ರತಿಷ್ಠೆ ಮತ್ತು ಅಹಂನ ಹೊರೆಗಳನ್ನು ಮೈಮೇಲೆ ಹಾಕಿಕೊಂಡರೆ ಕೊನೆಗೆ ನಮ್ಮನ್ನು ಮೇಲೆತ್ತಲು ಯಾರೂ ಬರುವುದಿಲ್ಲ. ಹಾಗಾಗಿ ಸರಿಯಾದ ಬದುಕನ್ನು ಕಟ್ಟಿಕೊಳ್ಳಬೇಕೆಂದರೆ ನಮ್ಮ ದೇಹ ಹಾಗೂ ಬದುಕು ಸದಾಕಾಲ ಹಗುರವಾಗಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಮದುವೆ ನಂತರ ವಧು ವರರಿಗೆ ದೇಹ ಮತ್ತು ಬದುಕು ಹೊರೆಯಾಗಬಾರದೆಂಬ ಕಾರಣಕ್ಕೆ ಈ ವರ್ಷದಿಂದ ಮದುವೆಗೂ ಮುನ್ನ ವಧು ವರರಿಗೆ ಸೂಕ್ತ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ. ಮದುವೆ ನಂತರ ಜನ್ಮಕೊಟ್ಟ ಮಕ್ಕಳಿಗೆ ಯಾವ ರೀತಿ ಪೋಷಣೆ ಮಾಡಿ ಉತ್ತಮ ಸಂಸ್ಕಾರ ನೀಡಬೇಕೆಂಬುದಕ್ಕೆ ಮತ್ತೊಂದು ತರಬೇತಿ ನೀಡಲು ನಿರ್ಧರಿಸಲಾಗಿದೆ ಎಂದರು.
ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಸಮಾಜಕ್ಕೂ ಆಡಳಿತಕ್ಕೂ ಕಂದಕವಿದ್ದರೆ ಆಡಳಿತ ಸಾರ್ಥಕತೆ ಕಾಣುವುದಿಲ್ಲ. ಸಮಾಜದಲ್ಲಿರುವ ಎಲ್ಲಾ ವಿಷಯಗಳಿಗೆ ನಾವು ಸ್ಪಂದಿಸಿ ಉತ್ತರ ಕಂಡುಕೊಳ್ಳಲು ಸಮಾಜಮುಖಿಯಾಗಿ ಕೆಲಸ ಮಾಡಿದಾಗ ಮಾತ್ರ ಅದಕ್ಕೊಂದು ನಿಜವಾದ ಅರ್ಥ ಸಿಗುತ್ತದೆ ಎಂದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಗೂ ಖ್ಯಾತ ಪುಸ್ತಕ ಸಂಗ್ರಹಕಾರ ಅಂಕೇಗೌಡ, ತುರುವೇಕೆರೆ ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಪುಟ್ಟರಂಗ, ಮಕ್ಕಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷ ನಾಗಣ್ಣಗೌಡ ಮಾತನಾಡಿದರು.